Dailyhunt Logo
  • Light mode
    Follow system
    Dark mode
    • Play Story
    • App Story
2,000 ರೂ.ಗೂ ಹೆಚ್ಚಿನ UPI ಪಾವತಿಗೆ ಶುಲ್ಕ ವಿಧಿಸಲು ಕಾನೂನು ತಿದ್ದುಪಡಿ ಪ್ರಸ್ತಾಪ : ಗ್ರಾಹಕರಿಗೆ ಇದೆಯಾ ತೊಂದರೆ?

2,000 ರೂ.ಗೂ ಹೆಚ್ಚಿನ UPI ಪಾವತಿಗೆ ಶುಲ್ಕ ವಿಧಿಸಲು ಕಾನೂನು ತಿದ್ದುಪಡಿ ಪ್ರಸ್ತಾಪ : ಗ್ರಾಹಕರಿಗೆ ಇದೆಯಾ ತೊಂದರೆ?

ವದೆಹಲಿ : ಈವರೆಗೆ ದೇಶದಲ್ಲಿ ಉಚಿತವಾಗಿ ಲಭ್ಯವಿದ್ದ ಯುಪಿಐ (UPI) ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ ಸದ್ಯದಲ್ಲೇ ಪ್ರಮುಖ ಬದಲಾವಣೆಗಳು ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಬೃಹತ್ ವ್ಯಾಪಾರಸ್ಥರು ನಡೆಸುವ ನಿರ್ದಿಷ್ಟ ಯುಪಿಐ ವಹಿವಾಟುಗಳ ಮೇಲೆ ಮರ್ಚೆಂಟ್ ಡಿಸ್ಕೌಂಟ್ ರೇಟ್ (MDR) ಅಂದರೆ ಸೇವಾ ಶುಲ್ಕ ವಿಧಿಸಲು ಅವಕಾಶ ಕಲ್ಪಿಸುವ ಕರಡು ಮಸೂದೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ್ದಾರೆ.

ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆಗೆ (Payment and Settlement Systems Act) ಈ ತಿದ್ದುಪಡಿ ತರಲಾಗುತ್ತಿದ್ದು, ಇದು ತಕ್ಷಣದಿಂದಲೇ ಜಾರಿಗೆ ಬರುವುದಿಲ್ಲ. ಬದಲಿಗೆ, ಭವಿಷ್ಯದಲ್ಲಿ ಅಗತ್ಯ ಬಿದ್ದರೆ ಶುಲ್ಕ ವಿಧಿಸಲು ಸರ್ಕಾರಕ್ಕೆ ಕಾನೂನಾತ್ಮಕ ಅಧಿಕಾರ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಬೃಹತ್ ಸಂಸ್ಥೆಗಳಿಗೆ ಶುಲ್ಕದ ಬಿಸಿ

ಹೊಸ ಪ್ರಸ್ತಾಪದ ಪ್ರಕಾರ, ಸಾಮಾನ್ಯ ಗ್ರಾಹಕರು ಮಾಡುವ ಯುಪಿಐ ಪಾವತಿಗಳಿಗೆ ಯಾವುದೇ ಹೆಚ್ಚುವರಿ ಶುಲ್ಕವಿರುವುದಿಲ್ಲ. 2,000 ರೂಪಾಯಿಗಿಂತ ಹೆಚ್ಚಿನ ಮೌಲ್ಯದ ವಹಿವಾಟು ನಡೆಸುವ ಮತ್ತು ವಾರ್ಷಿಕ 1.5 ಕೋಟಿ ರೂಪಾಯಿಗಿಂತ ಹೆಚ್ಚಿನ ವಹಿವಾಟು ಹೊಂದಿರುವ ದೊಡ್ಡ ಮಟ್ಟದ ವ್ಯಾಪಾರ ಸಂಸ್ಥೆಗಳಿಗೆ ಮಾತ್ರ ಶೇ.0.3ರಿಂದ 0.5 ರಷ್ಟು ಎಂಡಿಆರ್ ಶುಲ್ಕ ವಿಧಿಸುವ ಕುರಿತು ಚರ್ಚೆ ನಡೆಯುತ್ತಿದೆ. ಇದರಿಂದ ದಿನಸಿ ಅಂಗಡಿಗಳು, ಸಣ್ಣಪುಟ್ಟ ವ್ಯಾಪಾರಿಗಳು ಹಾಗೂ ಬೀದಿಬದಿ ಬಿಸಿನೆಸ್‌ ಮಾಡುವವರಿಗೆ ಸಂಪೂರ್ಣ ವಿನಾಯಿತಿ ಸಿಗಲಿದೆ. ಆದರೆ, ಬೃಹತ್ ಮಾಲ್ ಹಾಗೂ ದೊಡ್ಡ ಕಂಪನಿಗಳಿಗೆ ಮಾತ್ರ ಈ ನಿಯಮ ಅನ್ವಯವಾಗುವ ಸಾಧ್ಯತೆಯಿದೆ.

ನಿಯಮ ತರಲು ಕಾರಣವೇನು?

ಪ್ರಸ್ತುತ ಯುಪಿಐ ವಹಿವಾಟುಗಳು ಸಂಪೂರ್ಣ ಉಚಿತವಾಗಿರುವುದರಿಂದ ಫೋನ್ ಪೇ, ಗೂಗಲ್ ಪೇ, ಪೇಟಿಎಂ ನಂತಹ ಸೇವಾದಾತ ಸಂಸ್ಥೆಗಳಿಗೆ ಮತ್ತು ಬ್ಯಾಂಕುಗಳಿಗೆ ತಂತ್ರಜ್ಞಾನ ನವೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ವೆಚ್ಚ ಭರಿಸುವುದು ಕಷ್ಟಕರವಾಗಿದೆ. ಪ್ರಸ್ತುತ ಶೇಕಡಾ 4 ರಷ್ಟು ಬೃಹತ್ ಮೌಲ್ಯದ ಯುಪಿಐ ವಹಿವಾಟುಗಳ ಮೇಲಷ್ಟೇ ಶುಲ್ಕ ವಿಧಿಸಿದರೂ, ಪಾವತಿ ರಂಗದ ಸಂಸ್ಥೆಗಳಿಗೆ ವಾರ್ಷಿಕವಾಗಿ 5,000 ದಿಂದ 10,000 ಕೋಟಿ ರೂಪಾಯಿ ಆದಾಯ ಹರಿದುಬರಲಿದೆ. ಆದಾಗ್ಯೂ, ಈ ತಿದ್ದುಪಡಿಯು ಪ್ರಸ್ತುತ ಪ್ರಸ್ತಾಪಿತ ಹಂತದಲ್ಲಿದ್ದು, ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳುವವರೆಗೆ ಸಾರ್ವಜನಿಕರಿಗೆ ಹಾಲಿ ಇರುವ ಉಚಿತ ಯುಪಿಐ ಸೇವೆ ಮುಂದುವರಿಯಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat