ಬೆಂಗಳೂರು : ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ದೇಶದ 7.8 ಕೋಟಿ ಪಿಎಫ್ ಸದಸ್ಯರಿಗೆ ಮಹತ್ವದ ಅಪ್ಡೇಟ್ ನೀಡಿದೆ. ಖಾಸಗಿ ಕಂಪನಿಗಳ ಉದ್ಯೋಗಿಗಳು ಪ್ರತಿ ತಿಂಗಳು ಪಿಎಫ್ ಖಾತೆಗೆ ಜಮೆ ಮಾಡುವ ಮೊತ್ತವನ್ನು 1,800 ರೂಪಾಯಿಗೆ ಇಪಿಎಫ್‌ಒ ಮಿತಿಗೊಳಿಸಿದೆ.
ಆದರೂ, ಉದ್ಯೋಗಿಗಳು ಸ್ವಯಂಪ್ರೇರಿತವಾಗಿ ಪಿಎಫ್ ಖಾತೆಗೆ ಹೆಚ್ಚಿನ ಹಣ ಜಮೆ ಮಾಡಬಹುದು ಎಂಬ ಆಯ್ಕೆಯನ್ನು ಕೂಡ ಇಪಿಎಫ್‌ಒ ನೀಡಿದೆ.
ಈಗಿನ ನಿಯಮದ ಪ್ರಕಾರ, ಶಾಸನಬದ್ಧ ವೇತನದ ಮಿತಿ (Statutory Wage Ceiling) 15 ಸಾವಿರ ರೂಪಾಯಿ ಆಗಿದೆ. ಇದರ 12% ಎಂದರೆ 1,800 ರೂಪಾಯಿ ಪಿಎಫ್ ಖಾತೆಗೆ ಜಮೆಯಾಗುತ್ತದೆ. ಹೊಸ ನಿಯಮದ ಪ್ರಕಾರ, ಕಂಪನಿಗಳು ತಮ್ಮ ಉದ್ಯೋಗಿಗಳ ಮೂಲ ವೇತನದಿಂದ ಕಡ್ಡಾಯವಾಗಿ ಕಡಿತಗೊಳಿಸಬೇಕಾದ ಗರಿಷ್ಠ ಮೊತ್ತ 1,800 ರೂಪಾಯಿ ಎಂದು ನಿಗದಿಪಡಿಸಲಾಗಿದೆ.
1,800 ರೂ.ಗಿಂತ ಹೆಚ್ಚಿನ ಹಣ ಸ್ವಯಂಪ್ರೇರಿತ
ನಿಮ್ಮ ಮೂಲ ಸಂಬಳ ಹೆಚ್ಚಾಗಿದ್ದು, ನೀವು 1,800 ರೂ.ಗಿಂತ ಹೆಚ್ಚಿನ ಮೊತ್ತವನ್ನು (ಉದಾಹರಣೆಗೆ 5,000 ಅಥವಾ 10,000 ರೂಪಾಯಿ) ಪಿಎಫ್ ಖಾತೆಗೆ ಜಮಾ ಮಾಡಲು ಬಯಸಿದರೆ, ಅದನ್ನು 'ಸ್ವಯಂಪ್ರೇರಿತ ಇಪಿಎಫ್ ಕೊಡುಗೆ' (Voluntary EPF Contribution) ಎಂದು ಪರಿಗಣಿಸಲಾಗುತ್ತದೆ.
ಕಂಪನಿಯ ಕೊಡುಗೆಯ ಮೇಲಿನ ಪರಿಣಾಮ
ಇದು ಅತ್ಯಂತ ಪ್ರಮುಖ ಬದಲಾವಣೆ. ನೀವು ಸ್ವಯಂಪ್ರೇರಿತರಾಗಿ 1,800 ರೂ.ಗಿಂತ ಹೆಚ್ಚು ಹಣವನ್ನು ಪಿಎಫ್ ಗೆ ಹಾಕಿದ ತಕ್ಷಣ, ಕಂಪನಿಯೂ ಅಷ್ಟೇ ಮೊತ್ತವನ್ನು ಹಾಕಬೇಕು ಎಂಬ ಕಡ್ಡಾಯ ನಿಯಮ ಈಗ ಇರುವುದಿಲ್ಲ. ಕಂಪನಿಯು ಕಡ್ಡಾಯವಾಗಿ 1,800 ರೂಪಾಯಿ (ಅಥವಾ ಕಂಪನಿಯ ಆಂತರಿಕ ಪಾಲಿಸಿಯ ಪ್ರಕಾರ ನಿರ್ಧರಿಸಿದ ಮೊತ್ತ) ಮಾತ್ರ ನೀಡುತ್ತದೆ.
ಉದ್ಯೋಗಿಗಳು ಈ ಸ್ವಯಂಪ್ರೇರಿತ ಹೆಚ್ಚುವರಿ ಕೊಡುಗೆಯನ್ನು ತಮಗೆ ಹಣದ ಅಗತ್ಯವಿದ್ದಾಗ ಯಾವಾಗ ಬೇಕಾದರೂ ಕಡಿಮೆ ಮಾಡಬಹುದು ಅಥವಾ ಸಂಪೂರ್ಣವಾಗಿ ನಿಲ್ಲಿಸಬಹುದು. ಇದರಿಂದಾಗಿ ಉದ್ಯೋಗಿಗಳಿಗೆ ಪ್ರತಿ ತಿಂಗಳು ಕೈಗೆ ಸಿಗುವ ಸಂಬಳ ಹೆಚ್ಚಾಗುವ ಅವಕಾಶ ಸಿಗುತ್ತದೆ.

