Dailyhunt Logo
  • Light mode
    Follow system
    Dark mode
    • Play Story
    • App Story
ಅಮೆರಿಕ ದಾಳಿಗೆ ಪ್ರತಿಯಾಗಿ 'ಮರೆಯಲಾಗದ ಪಾಠ'ದ ಎಚ್ಚರಿಕೆ ನೀಡಿದ ಇರಾನ್ : ಸಂಘರ್ಷ ತೀವ್ರ

ಅಮೆರಿಕ ದಾಳಿಗೆ ಪ್ರತಿಯಾಗಿ 'ಮರೆಯಲಾಗದ ಪಾಠ'ದ ಎಚ್ಚರಿಕೆ ನೀಡಿದ ಇರಾನ್ : ಸಂಘರ್ಷ ತೀವ್ರ

ಟೆಹ್ರಾನ್ : ಮಧ್ಯಪ್ರಾಚ್ಯದಲ್ಲಿ ಅಮೆರಿಕ-ಇರಾನ್ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ. ಇತ್ತೀಚೆಗೆ ಇರಾನ್‌ನ ಸೀರಿಕ್‌ನಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದ ಮನೆಯೊಂದರ ಮೇಲೆ ಅಮೆರಿಕ ಕ್ಷಿಪಣಿ ದಾಳಿಯ ಚೂರುಗಳು ಬಿದ್ದು ಮಗು ಸೇರಿ ನಾಲ್ವರು ಪ್ರಾಣ ಕಳೆದುಕೊಂಡು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಇದರ ಬೆನ್ನಲ್ಲೇ ಆಕ್ರೋಶಗೊಂಡಿರುವ ಇರಾನ್‌ನ ನೂತನ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ, ಅಮೆರಿಕಕ್ಕೆ "ಮರೆಯಲಾಗದ ಪಾಠ" ಕಲಿಸುವುದಾಗಿ ನೇರ ಎಚ್ಚರಿಕೆ ನೀಡಿದ್ದಾರೆ.

ಇರಾನ್‌ನ ದಕ್ಷಿಣ ಪ್ರಾಂತ್ಯದಲ್ಲಿರುವ ಸೀರಿಕ್ ಜಿಲ್ಲೆಯ ಕುಹೆಸ್ತಾಕ್ ನಗರದಲ್ಲಿ ಕುಟುಂಬವೊಂದು ಮದುವೆ ಸಂಭ್ರಮದಲ್ಲಿದ್ದಾಗ ಈ ದುರಂತ ಸಂಭವಿಸಿದೆ. ಇರಾನ್ ಅಧಿಕೃತ ಸುದ್ದಿ ಸಂಸ್ಥೆ ಐಆರ್‌ಎನ್‌ಎ (IRNA) ವರದಿ ಮಾಡಿರುವಂತೆ, ಅಮೆರಿಕದ ದಾಳಿಯು ವಸತಿ ಪ್ರದೇಶಕ್ಕೆ ತೀವ್ರ ಹಾನಿ ಉಂಟುಮಾಡಿದ್ದಲ್ಲದೆ, ಪ್ರಾಣಹಾನಿಯೂ ಆಗಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಇರಾನ್ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ವಕ್ತಾರ ಹೊಸೈನ್ ಮೊಹೆಬಿ ಹಾಗೂ ವಿದೇಶಾಂಗ ಸಚಿವಾಲಯದ ವಕ್ತಾರರು, ಅಮೆರಿಕವು ಮಾನವ ಹಕ್ಕುಗಳ ಹೆಸರಿನಲ್ಲಿ ಅಮಾಯಕರನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.

ಅಮೆರಿಕ ಸಮರ್ಥನೆ

ಮತ್ತೊಂದೆಡೆ, ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಅಮೆರಿಕ ಸೇನೆಯು ಎಂದಿಗೂ ಸಾರ್ವಜನಿಕರನ್ನು ಗುರಿಯಾಗಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲಿನ ಇರಾನ್ ದಾಳಿ ಹಾಗೂ ಯುಎಸ್ ಸೇನಾ ಸಿಬ್ಬಂದಿಯ ಮೇಲಿನ ಬೆದರಿಕೆಗೆ ಪ್ರತಿಯಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 'ಟ್ರುತ್ ಸೋಶಿಯಲ್' ಜಾಲತಾಣದಲ್ಲಿ ಬರೆದುಕೊಂಡಿದ್ದು, "ಹೊರ್ಮುಜ್ ಜಲಸಂಧಿಯಲ್ಲಿ ಸ್ಫೋಟಕಗಳನ್ನು (sea mines) ಇಡಲು ಇರಾನ್ ನಡೆಸಿದ ವಿಫಲ ಯತ್ನಕ್ಕೆ ಈ ಬಲವಾದ ಪ್ರತ್ಯುತ್ತರ ನೀಡಲಾಗಿದೆ. ಇರಾನ್ ಮತ್ತೆ ಇದನ್ನೇ ಮುಂದುವರಿಸಿದರೆ, ಮುಂಬರುವ ದಿನಗಳಲ್ಲಿ ಇನ್ನೂ ಭೀಕರವಾದ ದಾಳಿಯನ್ನು ಎದುರಿಸಬೇಕಾಗುತ್ತದೆ" ಎಂದು ಬೆದರಿಕೆ ಹಾಕಿದ್ದಾರೆ.

ಇರಾನ್‌ನ ಭೀಕರ ಪ್ರತಿದಾಳಿ

ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಪಡೆಯು ಜೋರ್ಡಾನ್, ಕುವೈತ್ ಹಾಗೂ ಬಹ್ರೇನ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದೆ. ಜೋರ್ಡಾನ್‌ನಲ್ಲಿರುವ ಅಮೆರಿಕನ್ ಮೆರೀನ್ ಕಾರ್ಪ್ಸ್ ಬೇಸ್ (ಕ್ಯಾಂಪ್ ಟಿಟಿನ್) ಮೇಲೆ ಇರಾನ್ ಐಆರ್‌ಜಿಸಿ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಜೋರ್ಡಾನ್ ಸೇನೆಯು ಕನಿಷ್ಠ 10 ಕ್ಷಿಪಣಿಗಳನ್ನು ಆಕಾಶದಲ್ಲೇ ತಡೆದು ಧ್ವಂಸಗೊಳಿಸಿರುವುದಾಗಿ ಹೇಳಿದೆ.

ಇದೇ ವೇಳೆ ಬಹ್ರೇನ್ ಮತ್ತು ಕುವೈತ್‌ನಲ್ಲಿ ಭದ್ರತಾ ಮುನ್ನೆಚ್ಚರಿಕೆ ನೀಡಲಾಗಿದ್ದು, ನಾಗರಿಕರು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚಿಸಲಾಗಿದೆ. ಇರಾನ್ ಸೇನೆಯ ಖಾತಮ್ ಅಲ್-ಅನ್ಬಿಯಾ ಕೇಂದ್ರ ಕಚೇರಿಯ ವಕ್ತಾರ ಕರ್ನಲ್ ಇಬ್ರಾಹಿಂ ಝೋಲ್ಫಾಗರಿ ಮಾತನಾಡಿ, ಅಮೆರಿಕದ ಸೇನಾ ನೆಲೆಗಳಿಗೆ ಭಾರೀ ಹಾನಿಯಾಗಿದೆ ಮತ್ತು ಅಮೆರಿಕ ತನ್ನ ಅಪರಾಧಗಳಿಗೆ ಪಶ್ಚಾತ್ತಾಪ ಪಡುವವರೆಗೂ ಈ ಕಾರ್ಯಾಚರಣೆ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಫೆಬ್ರವರಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಪ್ರಾರಂಭವಾದ ಈ ಯುದ್ಧವು, ಆರು ತಿಂಗಳುಗಳ ನಂತರವೂ ಶಾಂತವಾಗುವ ಲಕ್ಷಣ ಕಾಣಿಸುತ್ತಿಲ್ಲ. ಹೊರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದ್ದರೆ, ಅಮೆರಿಕವು ಇರಾನ್ ಬಂದರುಗಳನ್ನು ಬಂದ್ ಮಾಡಿ ಇಡೀ ಮಧ್ಯಪ್ರಾಚ್ಯವನ್ನು ಯುದ್ಧದ ಭೀತಿಯಲ್ಲಿರಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat