Dailyhunt

ಅರಣ್ಯ ಸಚಿವರ ವಿರುದ್ಧ ಶಾಸಕ ಸಿ.ಪಿ. ಯೋಗೇಶ್ವರ್ ಬೇಸರ!

Karnatakanewsbeat 0 months ago

ರಾಮನಗರ : ಚನ್ನಪಟ್ಟಣ ಭಾಗದಲ್ಲಿ ಕಾಡಾನೆ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆ, ಸ್ಥಳೀಯ ರೈತರು ಮತ್ತು ಜನರು ಆತಂಕದಲ್ಲಿದ್ದಾರೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದಿರುವುದಾಗಿ ಆರೋಪಿಸಿ ಶಾಸಕ ಸಿ.ಪಿ. ಯೋಗೇಶ್ವರ್ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಕಾಡಾನೆಗಳ ಉಪಟಳದ ಬಗ್ಗೆ ಮೂರ್ನಾಲ್ಕು ಬಾರಿ ದೂರು ನೀಡಿದ್ದರೂ ಇಲಾಖೆಯಿಂದ ಸ್ಪಂದನೆ ಇಲ್ಲದಿರುವುದು ಬೇಸರ ತಂದಿದೆ ಎಂದು ಯೋಗೇಶ್ವರ್ ಹೇಳಿದ್ದಾರೆ. ಅರಣ್ಯದ ಅಂಚಿನಲ್ಲಿ ಟ್ರೆಂಚ್ ಹಾಗೂ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಅಗತ್ಯವಿದೆ. ಈ ಮೂಲಭೂತ ಕ್ರಮಗಳಿಲ್ಲದೆ ಸಮಸ್ಯೆ ಮುಂದುವರೆಯುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಈ ವಿಷಯವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೂ ತರಲಾಗುತ್ತದೆ ಎಂದು ಯೋಗೇಶ್ವರ್ ತಿಳಿಸಿದ್ದಾರೆ. ಅರಣ್ಯ ಸಚಿವರ ಜೊತೆ ಶೀಘ್ರದಲ್ಲೇ ಸಭೆ ನಡೆಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಬಗ್ಗೆ ಚರ್ಚೆ ಮಾಡುವುದಾಗಿ ಹೇಳಿದ್ದಾರೆ. ಕೇವಲ ಒಂದೆರಡು ಕಾಡಾನೆಗಳನ್ನು ಸೆರೆ ಹಿಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ, ಸಮಗ್ರ ಹಾಗೂ ದೀರ್ಘಕಾಲೀನ ಕ್ರಮಗಳೇ ಅಗತ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಸಮಸ್ಯೆಗೆ ಕ್ಯಾಬಿನೆಟ್ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳುವಂತೆ ಮನವಿ ಮಾಡುವುದಾಗಿ ಯೋಗೇಶ್ವರ್ ಹೇಳಿದ್ದಾರೆ. ಚನ್ನಪಟ್ಟಣ ತಾಲೂಕಿನ ಜನರ ಸುರಕ್ಷತೆ ಹಾಗೂ ರೈತರ ಬದುಕಿಗಾಗಿ ತ್ವರಿತ ಕ್ರಮ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ : ಬಿಸಿಲಿನ ತಾಪ ತಾಳಲಾರದೆ ಕುಸಿದು ಬಿದ್ದು ಯುವಕ ಸಾವು!

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat