Dailyhunt

ಬೆಂಗಳೂರಲ್ಲಿ ಮುನೇಶ್ವರ ದೇಗುಲದ ಕಾಣಿಕೆ ಹುಂಡಿ ಕದ್ದ ಖತರ್ನಾಕ್‌ ಕಳ್ಳ!

ಬೆಂಗಳೂರು : ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಯ್ಯನರೆಡ್ಡಿ ಪಾಳ್ಯದಲ್ಲಿರುವ ಮುನೇಶ್ವರ ದೇವಸ್ಥಾನದಲ್ಲಿ ಹುಂಡಿ ಕಳ್ಳತನ ನಡೆದಿರುವ ಘಟನೆ ಭಕ್ತರಲ್ಲಿ ಆತಂಕ ಮೂಡಿಸಿದೆ. ಮೇ 13ರ ಮುಂಜಾನೆ ಸುಮಾರು 2 ಗಂಟೆ ವೇಳೆಗೆ ದೇವಸ್ಥಾನಕ್ಕೆ ಒಬ್ಬನೇ ವ್ಯಕ್ತಿ ನುಗ್ಗಿ ಕಳ್ಳತನ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ದೇವಸ್ಥಾನದ ಸಿಸಿಟಿವಿ ದೃಶ್ಯಗಳಲ್ಲಿ ಕಳ್ಳ ದೇವಸ್ಥಾನದೊಳಗೆ ಎಂಟ್ರಿ ಕೊಟ್ಟಿರುವುದು ಸೆರೆಯಾಗಿದ್ದು, ಪ್ರಕರಣ ಇದೀಗ ಪೊಲೀಸರ ತನಿಖೆಯಲ್ಲಿದೆ.

ದೇವಸ್ಥಾನಕ್ಕೆ ನುಗ್ಗಿದ ಕಳ್ಳ ಮೊದಲು ಹುಂಡಿಯನ್ನು ಕೈಯಿಂದ ಹಾಗೂ ಬೇರೆ ರೀತಿಯಲ್ಲಿ ಒಡೆಯಲು ಯತ್ನಿಸಿದ್ದಾನೆ. ಆದರೆ, ಅದು ಸಾಧ್ಯವಾಗದ ಹಿನ್ನೆಲೆ, ದೇವರ ಮುಂದೆ ಇಡಲಾಗಿದ್ದ ತ್ರಿಶೂಲವನ್ನೇ ಕಿತ್ತುಕೊಂಡು ಅದರಿಂದ ಹುಂಡಿಗೆ ಒಡೆದಿದ್ದಾನೆ. ಬಳಿಕ ಹುಂಡಿಯಲ್ಲಿದ್ದ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದಾನೆ.

ಪ್ರತಿದಿನದಂತೆ ಮುಂಜಾನೆ ದೇವಸ್ಥಾನಕ್ಕೆ ಪೂಜೆಗಾಗಿ ಅರ್ಚಕರು ಬಂದಾಗ ಹುಂಡಿ ಒಡೆದಿರುವುದು ಹಾಗೂ ಹಣ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ದೇವಸ್ಥಾನದ ಒಳಭಾಗದಲ್ಲಿ ವಸ್ತುಗಳು ಚದುರಿದ ಸ್ಥಿತಿಯಲ್ಲಿದ್ದವು. ಬಳಿಕ ತಕ್ಷಣವೇ ದೇವಸ್ಥಾನದ ಟ್ರಸ್ಟಿಗಳಿಗೆ ಮಾಹಿತಿ ನೀಡಲಾಗಿದೆ. ಬಳಿಕ ಟ್ರಸ್ಟಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪೊಲೀಸರಿಗೆ ದೂರು ನೀಡಿದ್ದಾರೆ.

ಘಟನೆ ಸಂಬಂಧ ದೇವಸ್ಥಾನದ ಟ್ರಸ್ಟಿಗಳು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸುತ್ತಿದ್ದು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಸದ್ಯ ರಾತ್ರಿ ವೇಳೆ ದೇವಸ್ಥಾನದ ಸುತ್ತಮುತ್ತ ಯಾರು ಸಂಚರಿಸಿದ್ದರು ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಕಳ್ಳ ಒಬ್ಬನೇ ಬಂದು ಈ ಕೃತ್ಯ ಎಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat