Dailyhunt Logo
  • Light mode
    Follow system
    Dark mode
    • Play Story
    • App Story

ಚಂದ್ರಯಾನ-2 ಆರ್ಬಿಟರ್‌ನಿಂದ ಅದ್ಭುತ ಆವಿಷ್ಕಾರ :ಚಂದ್ರನ ದಕ್ಷಿಣ ಧ್ರುವದಲ್ಲಿ ಮಂಜುಗಡ್ಡೆ ಪತ್ತೆ!

Karnatakanewsbeat 0 months ago

ವದೆಹಲಿ : ಭಾರತವು 2019ರಲ್ಲಿ ಕೈಗೊಂಡಿದ್ದ ಚಂದ್ರಯಾನ-2 ಮಿಷನ್‌ನ ಲ್ಯಾಂಡರ್ ಚಂದ್ರನ ಮೇಲ್ಮೈಗೆ ಇಳಿಯುವ ಕೊನೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಾಗ ಇಡೀ ಜಗತ್ತಿನ ಗಮನ ಅದರ ಮೇಲಿತ್ತು. ಇಸ್ರೋ ವಿಜ್ಞಾನಿಗಳು ಆತಂಕಿತರಾಗಿದ್ದರು, ಭಾರತೀಯರ ಕಣ್ಣಾಲಿಗಳಲ್ಲಿ ನೀರು ಜಿನುಗಿತ್ತು.

ಆದರೆ, ಕಳೆದ ಸುಮಾರು ಏಳು ವರ್ಷಗಳಿಂದ ಚಂದ್ರನ ಕಕ್ಷೆಯಲ್ಲಿ ಯಾರಿಗೂ ತಿಳಿಯದಂತೆ ನಿರಂತರವಾಗಿ ಸುತ್ತುತ್ತಿದ್ದ ಚಂದ್ರಯಾನ-2 ರ ಆರ್ಬಿಟರ್, ಈಗ ಇಡೀ ಜಗತ್ತೇ ಬೆರಗಾಗುವಂತಹ ಮಹತ್ವದ ಆವಿಷ್ಕಾರವೊಂದನ್ನು ಮಾಡಿದೆ.

ಚಂದ್ರನ ದಕ್ಷಿಣ ಧ್ರುವದ ಆಳವಾದ ಕುಳಿಗಳ (Craters) ಕೆಳಗೆ ಮಂಜುಗಡ್ಡೆಯ ರೂಪದಲ್ಲಿ ನೀರು ಇರುವುದಕ್ಕೆ ಬಲವಾದ ಪುರಾವೆಗಳನ್ನು ಆರ್ಬಿಟರ್ ಪತ್ತೆಹಚ್ಚಿದೆ. ಈ ಸಂಶೋಧನೆಯು ಭವಿಷ್ಯದ ಬಾಹ್ಯಾಕಾಶ ರೇಸ್‌ನಲ್ಲಿ ಜಾಗತಿಕ ಮಟ್ಟದಲ್ಲಿ ಅತ್ಯಂತ ಮಹತ್ವದ ತಿರುವು ನೀಡುವ ನಿರೀಕ್ಷೆಯಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಫಿಸಿಕಲ್ ರಿಸರ್ಚ್ ಲ್ಯಾಬೊರೇಟರಿಯ ವಿಜ್ಞಾನಿಗಳು ಆರ್ಬಿಟರ್‌ನಲ್ಲಿರುವ ಅತ್ಯಾಧುನಿಕ 'ಡ್ಯುಯಲ್ ಫ್ರೀಕ್ವೆನ್ಸಿ ಸಿಂಥೆಟಿಕ್ ಅಪರ್ಚರ್ ರಾಡಾರ್' (DFSAR) ನೀಡಿದ ದತ್ತಾಂಶಗಳನ್ನು ಆಳವಾಗಿ ವಿಶ್ಲೇಷಿಸಿದ್ದಾರೆ.

ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯನ ಬೆಳಕೇ ಬೀಳದ, ಮೈನಸ್ 248 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ತಾಪಮಾನವಿರುವ ಕತ್ತಲೆಯ ಕುಳಿಗಳಲ್ಲಿ ಕೋಟ್ಯಂತರ ವರ್ಷಗಳಿಂದ ಈ ಮಂಜುಗಡ್ಡೆ ಸುರಕ್ಷಿತವಾಗಿದೆ ಎಂದು ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ವಿಶೇಷವಾಗಿ ಫಾಸ್ಟಿನಿ ಬೆಸಿನ್‌ನಲ್ಲಿರುವ ಸುಮಾರು 1.1 ಕಿಲೋಮೀಟರ್ ಅಗಲದ ಕುಳಿಯೊಂದರ ಒಳಭಾಗದಲ್ಲಿ ಮಂಜುಗಡ್ಡೆ ಇರುವುದು ರಾಡಾರ್ ತರಂಗಗಳ ಮೂಲಕ ಸಾಬೀತಾಗಿದೆ.

ಇದು ಜಗತ್ತಿಗೆ ಭಾರತ ನೀಡಿದ ಅತ್ಯಮೂಲ್ಯ ಕೊಡುಗೆ

ಚಂದ್ರನ ಮೇಲಿರುವ ಈ ನೀರು ಕೇವಲ ವೈಜ್ಞಾನಿಕ ಕುತೂಹಲಕ್ಕೆ ಸೀಮಿತವಾಗಿಲ್ಲ, ಬದಲಿಗೆ ಇದು ಮಾನವನ ಮುಂದಿನ ಬಾಹ್ಯಾಕಾಶ ಪ್ರಯಾಣದ ಇಂಧನವಾಗಲಿದೆ. ಚಂದ್ರನ ಮೇಲಿರುವ ಮಂಜುಗಡ್ಡೆಯನ್ನು ಕುಡಿಯುವ ನೀರು, ಉಸಿರಾಡುವ ಆಮ್ಲಜನಕ ಮತ್ತು ರಾಕೆಟ್‌ಗಳಿಗೆ ಬಳಸುವ ಹೈಡ್ರೋಜನ್ ಇಂಧನವನ್ನಾಗಿ ಪರಿವರ್ತಿಸಬಹುದಾಗಿದೆ. ಭೂಮಿಯಿಂದ ಪ್ರತಿ ಕಿಲೋಗ್ರಾಂ ತೂಕದ ವಸ್ತುವನ್ನು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಬಾಹ್ಯಾಕಾಶಕ್ಕೆ ಕೊಂಡೊಯ್ಯುವ ಬದಲು, ಚಂದ್ರನ ಮೇಲಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಭವಿಷ್ಯದ ಗಗನಯಾತ್ರಿಗಳು ಅಲ್ಲಿ ನೆಲೆಯೂರಬಹುದು. ಈ ತಂತ್ರಜ್ಞಾನವನ್ನು ಯಾರು ಮೊದಲು ಕರಗತ ಮಾಡಿಕೊಳ್ಳುತ್ತಾರೋ, ಅವರು ಬಾಹ್ಯಾಕಾಶ ಸಂಶೋಧನೆಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಲಿದ್ದಾರೆ. ಇದೇ ಕಾರಣಕ್ಕೆ ಈ ಸಂಶೋಧನೆಯನ್ನು ಜಗತ್ತಿಗೆ ಭಾರತ ನೀಡಿದ ಅತ್ಯಮೂಲ್ಯ ಕೊಡುಗೆ ಎಂದು ಬಣ್ಣಿಸಲಾಗುತ್ತಿದೆ.

ಜಾಗತಿಕ ಶಕ್ತಿಗಳ ನಡುವೆ ಹೆಚ್ಚಿದ ಪೈಪೋಟಿ

ಚಂದ್ರನ ದಕ್ಷಿಣ ಧ್ರುವವನ್ನು ಇಂದಿನ ಬಾಹ್ಯಾಕಾಶ ಯುಗದ "ತೈಲ ಬಾವಿ" ಎಂದು ಪರಿಗಣಿಸಲಾಗುತ್ತಿದೆ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ' ತನ್ನ ಪ್ರತಿಷ್ಠಿತ 'ಆರ್ಟೆಮಿಸ್' ಯೋಜನೆಯ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲೇ ಮಾನವನ ಶಾಶ್ವತ ನೆಲೆಯನ್ನು ಸ್ಥಾಪಿಸಲು ಯೋಜಿಸುತ್ತಿದೆ. ಮತ್ತೊಂದೆಡೆ ಚೀನಾ (CNSA) ಸಹ ರಷ್ಯಾದೊಂದಿಗೆ ಕೈಜೋಡಿಸಿ 2030ರ ವೇಳೆಗೆ ಗಗನಯಾತ್ರಿಗಳನ್ನು ಚಂದ್ರನಲ್ಲಿಗೆ ಕಳುಹಿಸಿ, ಅಲ್ಲಿ ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರವನ್ನು ನಿರ್ಮಿಸಲು ಸಿದ್ಧತೆ ನಡೆಸುತ್ತಿದೆ. ಈ ಎಲ್ಲಾ ದೇಶಗಳ ಕಣ್ಣು ಚಂದ್ರನ ದಕ್ಷಿಣ ಧ್ರುವದ ಸಂಪನ್ಮೂಲಗಳ ಮೇಲೆಯೇ ನೆಟ್ಟಿದೆ.

ಭಾರತದ ಮುಂದಿನ ಮಹತ್ವಾಕಾಂಕ್ಷಿ ಯೋಜನೆಗಳು

ಚಂದ್ರಯಾನ-3 ರ ಐತಿಹಾಸಿಕ ಯಶಸ್ಸಿನ ಬಳಿಕ ಭಾರತದ ಇಸ್ರೋ ಸಂಸ್ಥೆ ಮತ್ತಷ್ಟು ದೊಡ್ಡ ಯೋಜನೆಗಳನ್ನು ರೂಪಿಸಿದೆ. ಚಂದ್ರನ ಮೇಲ್ಮೈಯಿಂದ ಮಣ್ಣು ಮತ್ತು ಕಲ್ಲುಗಳ ಮಾದರಿಯನ್ನು ಭೂಮಿಗೆ ತರುವ 'ಚಂದ್ರಯಾನ-4' ಮಿಷನ್‌ಗೆ ಚಾಲನೆ ನೀಡಲಾಗುತ್ತಿದ್ದು, ಇದು ದಕ್ಷಿಣ ಧ್ರುವದ ಸಂಪನ್ಮೂಲಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದೆ. ಇದರೊಂದಿಗೆ 2040ರ ವೇಳೆಗೆ ಭಾರತೀಯ ಗಗನಯಾತ್ರಿಯನ್ನು ಚಂದ್ರನ ಮೇಲೆ ಇಳಿಸುವ ಮಹತ್ತರ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಚಂದ್ರಯಾನ-2 ನೀಡಿದ ಈ ನಿರ್ಣಾಯಕ ದತ್ತಾಂಶಗಳು ಭವಿಷ್ಯದಲ್ಲಿ ಜಾಗತಿಕ ಬಾಹ್ಯಾಕಾಶ ನೌಕೆಗಳು ಎಲ್ಲಿ ಇಳಿಯಬೇಕು ಮತ್ತು ಎಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸಬೇಕು ಎಂಬುದನ್ನು ನಿರ್ಧರಿಸುವಲ್ಲಿ ದಿಕ್ಸೂಚಿಯಾಗಲಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ : ಸ್ನೇಹ ನಿರಾಕರಿಸಿದ್ದಕ್ಕೆ ಯುವತಿ, ತಾಯಿಯ ಅಶ್ಲೀಲ ಡೀಪ್‌ಫೇಕ್ ಚಿತ್ರ ಸೃಷ್ಟಿ : ಧಾರ್ಮಿಕ ಪ್ರವಚನಕಾರ ಸೈಬರ್ ಕ್ರೈಂ ಬಲೆಗೆ!

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat