Dailyhunt Logo
  • Light mode
    Follow system
    Dark mode
    • Play Story
    • App Story

ಎದುರಾಳಿ ತಂಡವನ್ನು ಬೆಂಬಲಿಸಿದ ಫ್ಯಾನ್ಸ್‌ ವಿರುದ್ಧ ಬೇಸರ ಹೊರಹಾಕಿದ ಪಾಂಡ್ಯ!

Karnatakanewsbeat 3 weeks ago

ಬೆಂಗಳೂರು : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕಳಪೆ ಪ್ರದರ್ಶನ ಮುಂದುವರಿದಿದ್ದು, ತವರಿನ ವಾಂಖೆಡೆ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಆಘಾತಕಾರಿ ಸೋಲು ಅನುಭವಿಸಿದೆ.

ಈ ಹೀನಾಯ ಸೋಲಿನ ಬಳಿಕ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ, ತವರಿನ ಅಭಿಮಾನಿಗಳು ಎದುರಾಳಿ ತಂಡವನ್ನು ಬೆಂಬಲಿಸುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತವರಿನ ಮೈದಾನದಲ್ಲಿ ಎದುರಾಳಿ ಆಟಗಾರರ ಪರವಾಗಿ ಘೋಷಣೆಗಳು ಕೇಳಿಬರುತ್ತಿರುವುದು ನೋವು ತರಿಸಿದೆ ಎಂದು ಪಾಂಡ್ಯ ಹೇಳಿದ್ದು, ಪ್ರಸಕ್ತ ಆವೃತ್ತಿಯಲ್ಲಿ ತಂಡದ ವೈಫಲ್ಯ ಹಾಗೂ ಅಭಿಮಾನಿಗಳ ಪ್ರತಿಕ್ರಿಯೆಗಳ ಬಗ್ಗೆ ಬಹಿರಂಗವಾಗಿಯೇ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅಭಿಮಾನಿಗಳ ಬೇಸರ

ಪಂದ್ಯದ ಬಳಿಕ ಮಾತನಾಡಿದ ಹಾರ್ದಿಕ್ ಪಾಂಡ್ಯ, "ನಮ್ಮ ಬೆಂಬಲಕ್ಕೆ ನಿಲ್ಲಲು ನಾವು ಅಭಿಮಾನಿಗಳಿಗೆ ಹೆಚ್ಚಿನ ಅವಕಾಶಗಳನ್ನು ನೀಡಿಲ್ಲ ಎಂಬುದು ನಿಜ. ಆದರೆ, ವಾಂಖೆಡೆ ಕ್ರೀಡಾಂಗಣದಲ್ಲಿ ಎದುರಾಳಿ ತಂಡಗಳು ಬಂದಾಗ ಅಭಿಮಾನಿಗಳು ಅವರ ಹೆಸರುಗಳನ್ನು ಕೂಗುವುದು ಕೆಲವೊಮ್ಮೆ ನೋವು ನೀಡುತ್ತದೆ. ಮುಂಬೈ ಅಭಿಮಾನಿಗಳು ಎಂದಿಗೂ ನಿಷ್ಠಾವಂತರು ಹಾಗೂ ಅದ್ಭುತವಾದವರು. ಅವರ ಪ್ರೀತಿ ಮತ್ತು ವಿಶ್ವಾಸವನ್ನು ಮರಳಿ ಪಡೆಯಲು ನಾವು ಮೈದಾನದಲ್ಲಿ ಇನ್ನಷ್ಟು ಉತ್ತಮವಾಗಿ ಮನರಂಜನೆ ನೀಡಬೇಕಿದೆ" ಎಂದು ತಿಳಿಸಿದ್ದಾರೆ. ಎಂಟು ಪಂದ್ಯಗಳಲ್ಲಿ ಕೇವಲ ಎರಡರಲ್ಲಷ್ಟೇ ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್, ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದ್ದು, ತಂಡದ ಆಂತರಿಕ ಹಾಗೂ ಬಾಹ್ಯ ಟೀಕೆಗಳ ನಡುವೆ ಪಾಂಡ್ಯ ಅವರ ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಹಿಂದೆಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಎದುರಾಳಿ ತಂಡದ ಪರವಾಗಿ ಕೇಳಿಬಂದ ಘೋಷಣೆಗಳು ಮುಂಬೈ ಪಾಳಯದಲ್ಲಿ ಆತಂಕ ಮೂಡಿಸಿದ್ದವು. ಪಂದ್ಯದ ವಿಚಾರಕ್ಕೆ ಬಂದರೆ, ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಬ್ಯಾಟರ್‌ಗಳು ಅಬ್ಬರದ ಆಟವಾಡಿದ್ದರು. ಆರಂಭಿಕ ಆಟಗಾರ ರಿಯಾನ್ ರಿಕೆಲ್ಟನ್ ಅಜೇಯ 123 ರನ್‌ಗಳ ಅಮೋಘ ಶತಕ ಸಿಡಿಸಿದರೆ, ವಿಲ್ ಜಾಕ್ಸ್ 42 ಹಾಗೂ ಹಾರ್ದಿಕ್ ಪಾಂಡ್ಯ ಬಿರುಸಿನ 30 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 243 ರನ್‌ಗಳ ಬೃಹತ್ ಗುರಿಗೆ ಕೊಂಡೊಯ್ದರು.

ವಾಂಖೆಡೆ ಕ್ರೀಡಾಂಗಣದಲ್ಲಿ ಇದೊಂದು ಬೃಹತ್ ಮೊತ್ತವಾಗಿದ್ದರೂ, ಹೈದರಾಬಾದ್ ತಂಡದ ಬಲಿಷ್ಠ ಬ್ಯಾಟಿಂಗ್ ಲೈನ್-ಅಪ್ ಎದುರು ಇದು ಸುರಕ್ಷಿತವಲ್ಲ ಎಂಬುದು ಪಂದ್ಯದ ದ್ವಿತಿಯಾರ್ಧದಲ್ಲಿ ಸಾಬೀತಾಯಿತು. ಮುಂಬೈ ಬೌಲರ್‌ಗಳ ಸಂಪೂರ್ಣ ವೈಫಲ್ಯವು ತಂಡಕ್ಕೆ ಮತ್ತೊಮ್ಮೆ ಮುಳುವಾಗಿ ಪರಿಣಮಿಸಿತು. ಬೃಹತ್ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಯಾವುದೇ ಹಂತದಲ್ಲೂ ಒತ್ತಡಕ್ಕೆ ಸಿಲುಕದೆ ನಿರಾಯಾಸವಾಗಿ ಗುರಿ ಮುಟ್ಟಿತು. ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ಸ್ಪೋಟಕ ಆರಂಭ ಒದಗಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ ಅಬ್ಬರದ ಬ್ಯಾಟಿಂಗ್ ಮುಂದುವರಿಸಿ ಗೆಲುವನ್ನು ಖಚಿತಪಡಿಸಿದರು.

ಮುಂಬೈ ತಂಡದ ಪ್ರಮುಖ ಅಸ್ತ್ರ ಜಸ್‌ಪ್ರೀತ್ ಬುಮ್ರಾ ಸೇರಿದಂತೆ ಎಲ್ಲಾ ಬೌಲರ್‌ಗಳು ಹೈದರಾಬಾದ್ ಬ್ಯಾಟರ್‌ಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾದರು. ವಿಕೆಟ್ ಪಡೆಯದೆ 54 ರನ್ ಚಚ್ಚಿಸಿಕೊಂಡ ಬುಮ್ರಾ ಅವರ ಪ್ರದರ್ಶನವೇ ಮುಂಬೈ ಬೌಲಿಂಗ್ ಪಡೆಯ ದೌರ್ಬಲ್ಯಕ್ಕೆ ಕೈಗನ್ನಡಿಯಾಗಿತ್ತು. ಅಂತಿಮವಾಗಿ 244 ರನ್‌ಗಳನ್ನು ಸುಲಭವಾಗಿ ಬೆನ್ನಟ್ಟಿದ ಹೈದರಾಬಾದ್, ವಾಂಖೆಡೆ ಮೈದಾನದಲ್ಲಿ ಅತ್ಯಂತ ದೊಡ್ಡ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿದ ದಾಖಲೆ ನಿರ್ಮಿಸಿ ಮುಂಬೈಗೆ ತವರಿನಲ್ಲೇ ಭಾರಿ ಮುಖಭಂಗ ಉಂಟುಮಾಡಿತು.

ಇದನ್ನೂ ಓದಿ : ಪತ್ನಿಯ ಮಾಂಗಲ್ಯ ಅಡವಿಟ್ಟು ಬೆಳೆದಿದ್ದ 3 ಎಕರೆ ಬಾಳೆ ತೋಟ ನೆಲಸಮ.. ರೈತ ಕಂಗಾಲು!

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat