Dailyhunt Logo
  • Light mode
    Follow system
    Dark mode
    • Play Story
    • App Story
ಏಷ್ಯಾಕಪ್‌ ಕೈತಪ್ಪಿದ ಬೆನ್ನಲ್ಲೇ ಯಸ್ತಿಕಾ ಭಾಟಿಯಾಗೆ ಒಲಿದ ನಾಯಕತ್ವ!

ಏಷ್ಯಾಕಪ್‌ ಕೈತಪ್ಪಿದ ಬೆನ್ನಲ್ಲೇ ಯಸ್ತಿಕಾ ಭಾಟಿಯಾಗೆ ಒಲಿದ ನಾಯಕತ್ವ!

ವದೆಹಲಿ : ಇತ್ತೀಚೆಗಷ್ಟೇ ಮಹಿಳಾ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಪ್ರಕಟಿಸಲಾಗಿದ್ದ ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಅವಕಾಶ ವಂಚಿತಳಾಗಿದ್ದ ವಿಕೆಟ್-ಕೀಪರ್ ಹಾಗೂ ಬ್ಯಾಟರ್ ಯಸ್ತಿಕಾ ಭಾಟಿಯಾ ಅವರಿಗೆ ಇದೀಗ ಹೊಸ ಹಾಗೂ ದೊಡ್ಡ ಜವಾಬ್ದಾರಿಯೊಂದು ಒಲಿದುಬಂದಿದೆ.

ಮುಂಬರುವ ಆಸ್ಟ್ರೇಲಿಯಾ 'ಎ' ವಿರುದ್ಧದ ಸರಣಿಯ ಏಕದಿನ ಹಾಗೂ ಬಹು-ದಿನಗಳ ಪಂದ್ಯಗಳಿಗೆ ಯಸ್ತಿಕಾ ಅವರನ್ನು 'ಇಂಡಿಯಾ ಎ' ತಂಡದ ನಾಯಕಿಯನ್ನಾಗಿ ಭಾರತೀಯ ಮಹಿಳಾ ಆಯ್ಕೆ ಸಮಿತಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಇತ್ತೀಚೆಗಷ್ಟೇ ಟಿ20 ವಿಶ್ವಕಪ್‌ನಲ್ಲಿ ಆಡಿದ್ದ ಈ ಎಡಗೈ ಬ್ಯಾಟರ್‌ಗೆ ಈ ನಾಯಕತ್ವವು ಸೀನಿಯರ್ ತಂಡಕ್ಕೆ ಮರಳಲು ಉತ್ತಮ ವೇದಿಕೆಯೊದಗಿಸಲಿದೆ.

ಮಹಿಳಾ ಆಯ್ಕೆ ಸಮಿತಿಯು ಗುರುವಾರದಂದು ಮುಂಬರುವ ಆಸ್ಟ್ರೇಲಿಯಾ 'ಎ' ಪ್ರವಾಸಕ್ಕಾಗಿ ಮೂರು ಮಾದರಿಯ (ಟಿ20, ಏಕದಿನ ಮತ್ತು ನಾಲ್ಕು ದಿನಗಳ ಪಂದ್ಯ) ಕ್ರಿಕೆಟ್‌ಗೆ ಮೂರು ಪ್ರತ್ಯೇಕ ತಂಡಗಳನ್ನು ಪ್ರಕಟಿಸಿದೆ. ಈ ಪೈಕಿ ಏಕದಿನ ಹಾಗೂ ನಾಲ್ಕು ದಿನಗಳ ಟೆಸ್ಟ್ ಮಾದರಿಯ ಪಂದ್ಯಗಳಿಗೆ ಯಸ್ತಿಕಾ ಭಾಟಿಯಾ ನಾಯಕಿಯಾಗಿ ಮುನ್ನಡೆಸಲಿದ್ದಾರೆ. ಇದೇ ವೇಳೆ ಟಿ20 ಸರಣಿಗೆ ಅನುಷ್ಕಾ ಶರ್ಮಾ ಅವರನ್ನು ನಾಯಕಿಯನ್ನಾಗಿ ಮಹಿಳಾ ಆಯ್ಕೆ ಸಮಿತಿ ನೇಮಕ ಮಾಡಿದೆ. ಯಸ್ತಿಕಾ ಅವರು ಈ ಹಿಂದೆ ಇಂಗ್ಲೆಂಡ್ ವಿರುದ್ಧ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಆಡಿ ಶತಕ ಕೂಡ ಸಿಡಿಸಿದ್ದು, 25 ವರ್ಷದ ಆಟಗಾರ್ತಿಗೆ ಇದು ಅದ್ಭುತ ಅವಕಾಶ ಎನ್ನಲಾಗಿದೆ.

ಆಸ್ಟ್ರೇಲಿಯಾ ತಂಡಕ್ಕೂ ಮೂವರು ನಾಯಕಿಯರು!

ಇದೇ ವೇಳೆ ಭಾರತ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ 'ಎ' ತಂಡವು ಕೂಡ ಬಲಿಷ್ಠ ಆಟಗಾರ್ತಿಯರನ್ನು ಒಳಗೊಂಡಿದೆ. ಸುದೀರ್ಘ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ಅನುಭವಿ ಆಟಗಾರ್ತಿಯರಾದ ಡಾರ್ಸಿ ಬ್ರೌನ್ ಮತ್ತು ಟೈಲಾ ವ್ಲಾಮಿನ್ಕ್ ಅವರಂತಹ ಪ್ರಮುಖರು ಆಸೀಸ್ ಪಡೆಯಲ್ಲಿ ಸ್ಥಾನ ಪಡೆದಿದ್ದಾರೆ. ವಿಶೇಷವೆಂದರೆ ಆಸ್ಟ್ರೇಲಿಯಾ ತಂಡವು ಕೂಡ ಭಿನ್ನ ಮಾದರಿಯ ಕ್ರಿಕೆಟ್‌ಗೆ ಮೂವರು ವಿಭಿನ್ನ ನಾಯಕಿಯರನ್ನು ನಿಯೋಜಿಸಿದೆ. ಟಿ20 ತಂಡವನ್ನು ನಿಕೋಲ್ ಫಾಲ್ಟಮ್ ಮುನ್ನಡೆಸಿದರೆ, 50 ಓವರ್‌ಗಳ ಏಕದಿನ ಸರಣಿಗೆ ತಾಲಿಯಾ ವಿಲ್ಸನ್ ನಾಯಕಿಯಾಗಲಿದ್ದಾರೆ ಹಾಗೂ ನಾಲ್ಕು ದಿನಗಳ ಪಂದ್ಯವನ್ನು ರಾಚೆಲ್ ಟ್ರೆನಾಮನ್ ಮುನ್ನಡೆಸಲಿದ್ದಾರೆ.

ಸೆಪ್ಟೆಂಬರ್ 12 ರಿಂದ ಆರಂಭವಾಗಲಿದೆ ಕ್ರಿಕೆಟ್ ಸಮರ

ಭಾರತ ಹಾಗೂ ಆಸ್ಟ್ರೇಲಿಯಾ 'ಎ' ತಂಡಗಳ ನಡುವಿನ ಈ ರೋಚಕ ಸರಣಿಯು ಸೆಪ್ಟೆಂಬರ್ 12ರಂದು ನ್ಯೂ ಚಂಡೀಗಢದಲ್ಲಿ ನಡೆಯುವ ಟಿ20 ಸರಣಿಯೊಂದಿಗೆ ಅದ್ದೂರಿಯಾಗಿ ಆರಂಭವಾಗಲಿದೆ. ಟಿ20 ಪಂದ್ಯಗಳು ಸೆಪ್ಟೆಂಬರ್ 12, 15 ಮತ್ತು 17 ರಂದು ನಡೆಯಲಿವೆ. ಆನಂತರ ಮೊಹಾಲಿಯ ಪಿಸಿಎ (PCA) ಸ್ಟೇಡಿಯಂನಲ್ಲಿ ಸೆಪ್ಟೆಂಬರ್ 20, 23 ಮತ್ತು 25 ರಂದು ಮೂರು ಏಕದಿನ ಪಂದ್ಯಗಳು ಜರುಗಲಿವೆ. ಸರಣಿಯ ಅಂತಿಮ ಹಂತವಾಗಿ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 2 ರವರೆಗೆ ಧರ್ಮಶಾಲಾದ ರಮಣೀಯ ಮೈದಾನದಲ್ಲಿ ನಾಲ್ಕು ದಿನಗಳ ಮುಕ್ತಾಯದ ಪಂದ್ಯ ನಡೆಯಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat