ಜೆರುಸಲೇಂ/ನವದೆಹಲಿ : ಆಗಸದಲ್ಲಿ ಭೀಕರ ಉಗ್ರ ದಾಳಿಯನ್ನು ವಿಫಲಗೊಳಿಸಿ 174 ಪ್ರಯಾಣಿಕರ ಪ್ರಾಣ ಉಳಿಸಿದ 'ಫ್ಲೈದುಬೈ' ವಿಮಾನ ದ ಸಾಹಸಿ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ವೀರಾವೇಶವನ್ನು ಇಡೀ ಜಗತ್ತೇ ಕೊಂಡಾಡುತ್ತಿದೆ. ಇದೀಗ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಕ್ಯಾಪ್ಟನ್ ಸ್ಮಿತ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಅವರ ಅಸಾಮಾನ್ಯ ಧೈರ್ಯವನ್ನು ಶ್ಲಾಘಿಸಿದ್ದಾರಲ್ಲದೆ, ಇಸ್ರೇಲ್‌ನ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನ ನೀಡಿದ್ದಾರೆ.
ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್‌ನ ಅತ್ಯುನ್ನತ ಗೌರವ
ದೂರವಾಣಿ ಕರೆಯಲ್ಲಿ ಕ್ಯಾಪ್ಟನ್ ಸ್ಮಿತ್ ಅವರ ಕ್ಷೇಮ ವಿಚಾರಿಸಿದ ನೆತನ್ಯಾಹು, "ನೀವು ಇಸ್ರೇಲ್, ಭಾರತ ಹಾಗೂ ಇಡೀ ಜಗತ್ತಿಗೆ ನಿಜವಾದ ಹೀರೋ. ನಿಮ್ಮ ಈ ಅಪ್ರತಿಮ ಸಾಹಸಕ್ಕೆ ಗೌರವ ಸೂಚಿಸುವ ಸಲುವಾಗಿ ಇಸ್ರೇಲ್‌ನ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ 'ಟಾರ್ಚ್ ಲೈಟಿಂಗ್' (Torch Lighting) ಬೆಳಗಿಸಲು ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ" ಎಂದು ಪ್ರಕಟಿಸಿದ್ದಾರೆ.ಸಾಮಾನ್ಯವಾಗಿ ಈ ಅತ್ಯುನ್ನತ ಗೌರವವನ್ನು ಕೇವಲ ಇಸ್ರೇಲಿ ನಾಗರಿಕರಿಗೆ ಮಾತ್ರ ನೀಡಲಾಗುತ್ತದೆ. ಆದರೆ, ಕ್ಯಾಪ್ಟನ್ ಸ್ಮಿತ್ ಅವರ ಜೀವದ ಹಂಗನ್ನು ಲೆಕ್ಕಿಸದೆ ತೋರಿದ ಶೌರ್ಯವನ್ನು ಇಡೀ ಇಸ್ರೇಲ್ ದೇಶವೇ ಹೆಮ್ಮೆಯಿಂದ ಅಪ್ಪಿಕೊಳ್ಳಲಿದೆ ಎಂದು ನೆತನ್ಯಾಹು ಭಾವನಾತ್ಮಕವಾಗಿ ನುಡಿದಿದ್ದಾರೆ. ಇದೇ ವೇಳೆ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಈ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದಾರೆ.ಸಂಭಾಷಣೆಯ ವೇಳೆ ಘಟನೆಯ ವಿವರಗಳನ್ನು ಕೇಳಿ ತಿಳಿದುಕೊಂಡ ನೆತನ್ಯಾಹು, "ಸಾಧ್ಯವೇ ಇಲ್ಲದಂತಹ ಅತಿ ಕಠಿಣ ಪರಿಸ್ಥಿತಿಯಲ್ಲೂ ನೀವು ತೋರಿದ ಧೈರ್ಯ ಮತ್ತು ಸಮಯಪ್ರಜ್ಞೆ ನನಗೆ ವಿಸ್ಮಯ ಮೂಡಿಸಿದೆ. ನೀವು ನೂರಾರು ಅಮಾಯಕರ ಜೀವ ಉಳಿಸಿದ್ದೀರಿ. ಇದು ಮತ್ತೊಂದು 9/11 ಮಾದರಿಯ ಭೀಕರ ದುರಂತವಾಗುವುದನ್ನು ತಪ್ಪಿಸಿದೆ" ಎಂದು ಕೊಂಡಾಡಿದರು.ಕ್ಯಾಪ್ಟನ್ ಸ್ಮಿತ್ ಮತ್ತು ಅವರ ಕುಟುಂಬಕ್ಕೆ ಶುಭ ಹಾರೈಸಿದ ಇಸ್ರೇಲಿ ಪ್ರಧಾನಿ, ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ಹಾರೈಸಿದರು.
ಕಾಕ್‌ಪಿಟ್ ಒಳಗೆ ನಡೆದ ಜೀವನ್ಮರಣ ಹೋರಾಟ
ಸೆಪ್ಟೆಂಬರ್ 30 ರಂದು ದುಬೈನಿಂದ ಟೆಲ್ ಅವೀವ್‌ಗೆ ಹೊರಟಿದ್ದ ಫ್ಲೈದುಬೈ ಎಫ್‌ಝಡ್ 1073 ವಿಮಾನದಲ್ಲಿ ಸಹ-ಪೈಲಟ್ ಹಮಾಮ್ ಅಲ್-ಹಮ್ಮಾಮಿ ಎಂಬಾತ ಕ್ಯಾಪ್ಟನ್ ಸ್ಮಿತ್ ಮೇಲೆ ಕೊಡಲಿಯಿಂದ ಏಕಾಏಕಿ ಭೀಕರ ದಾಳಿ ನಡೆಸಿದ್ದ. ಕೇವಲ ಎರಡೇ ನಿಮಿಷಗಳಲ್ಲಿ ವಿಮಾನವು ಸುಮಾರು 17,000 ಅಡಿಗಳಷ್ಟು ಕೆಳಗೆ ಕುಸಿದಿತ್ತು.ತೀವ್ರವಾಗಿ ಗಾಯಗೊಂಡು, ಕಣ್ಣುಗಳು ಮಂಜಾಗಿದ್ದರೂ ಧೃತಿಗೆಡದ ಸ್ಮಿತ್, ತಮ್ಮಲ್ಲಿದ್ದ ಕೊನೆಯ ಶಕ್ತಿಯನ್ನು ಕ್ರೋಡೀಕರಿಸಿ ಕಾಕ್‌ಪಿಟ್ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ತಕ್ಷಣವೇ ಹೊರಗಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಒಳನುಗ್ಗಿ ದಾಳಿಕೋರ ಸಹ-ಪೈಲಟ್‌ನನ್ನು ಹತ್ತಿಕ್ಕಿ ವಿಮಾನವನ್ನು ಸುರಕ್ಷಿತವಾಗಿ ಭೂಸ್ಪರ್ಶ ಮಾಡಲು ನೆರವಾಗಿದ್ದರು. ಪ್ರಸ್ತುತ ಚೇತರಿಸಿಕೊಳ್ಳುತ್ತಿರುವ ಸ್ಮಿತ್ ಅವರಿಗೆ ಜಗತ್ತಿನಾದ್ಯಂತ ಶ್ಲಾಘನೆಗಳ ಸುರಿಮಳೆಯಾಗುತ್ತಿದೆ.

