Dailyhunt Logo
  • Light mode
    Follow system
    Dark mode
    • Play Story
    • App Story
ಕೆನಡಾದಲ್ಲಿ ಉರಿಯುತ್ತಿದ್ದ ಕಾರಿನಲ್ಲಿ ಭಾರತೀಯ ಯುವಕನ ಶವ ಪತ್ತೆ; ಪೂರ್ವನಿಯೋಜಿತ ಹತ್ಯೆಯ ಶಂಕೆ

ಕೆನಡಾದಲ್ಲಿ ಉರಿಯುತ್ತಿದ್ದ ಕಾರಿನಲ್ಲಿ ಭಾರತೀಯ ಯುವಕನ ಶವ ಪತ್ತೆ; ಪೂರ್ವನಿಯೋಜಿತ ಹತ್ಯೆಯ ಶಂಕೆ

ಕೆನಡಾ: ಕೆನಡಾದ ಬ್ರಿಟಿಷ್ ಕೊಲಂಬಿಯಾದ ಲ್ಯಾಂಗ್ಲಿ ಪ್ರದೇಶದಲ್ಲಿ ಹೊತ್ತಿ ಉರಿಯುತ್ತಿದ್ದ ಕಾರಿನೊಳಗೆ 25 ವರ್ಷದ ಭಾರತೀಯ ಯುವಕನೊಬ್ಬನ ಶವ ಪತ್ತೆಯಾಗಿದೆ. ಮೃತನನ್ನು ಸರ್ರೆ ನಿವಾಸಿ ತುಷಾರ್ ಶರ್ಮಾ ಎಂದು ಗುರುತಿಸಲಾಗಿದೆ. ಇದೊಂದು ಪೂರ್ವನಿಯೋಜಿತ ಹತ್ಯೆಯಾಗಿರಬಹುದು ಎಂದು ಕೆನಡಾ ಪೊಲೀಸರು ಶಂಕಿಸಿದ್ದು, ಪ್ರಕರಣದ ಕುರಿತು ತೀವ್ರ ತನಿಖೆ ಆರಂಭಿಸಿದ್ದಾರೆ.

ಲ್ಯಾಂಗ್ಲಿಯ ರಾಲಿನ್ಸನ್ ಕ್ರೆಸೆಂಟ್ ಪ್ರದೇಶದಲ್ಲಿ ಕಾರೊಂದು ಹೊತ್ತಿ ಉರಿಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಲ್ಯಾಂಗ್ಲಿ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಮುಂದಾದಾಗ, ಕಾರಿನೊಳಗೆ ಮನುಷ್ಯನ ದೇಹದ ಅವಶೇಷಗಳು ಪತ್ತೆಯಾಗಿವೆ. ಬಳಿಕ ಮೃತ ವ್ಯಕ್ತಿ ತುಷಾರ್ ಶರ್ಮಾ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ.

ತನಿಖೆ ಚುರುಕುಗೊಳಿಸಿದ ವಿಶೇಷ ತಂಡ

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವ ಕೆನಡಾದ ಸಮಗ್ರ ಹತ್ಯೆ ತನಿಖಾ ತಂಡ (IHIT) ತನಿಖೆಯ ನೇತೃತ್ವ ವಹಿಸಿಕೊಂಡಿದೆ. ಇವರಿಗೆ ಲ್ಯಾಂಗ್ಲಿ ಆರ್‌ಸಿಎಂಪಿ (RCMP), ವಿಧಿವಿಜ್ಞಾನ ತಜ್ಞರು ಮತ್ತು ಬಿಸಿ ಕರೋನರ್ಸ್ ಸೇವೆಯ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ. ತುಷಾರ್ ಸಾವಿಗೂ ಮುನ್ನ ಎಲ್ಲಿದ್ದರು, ಯಾರೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಘಟನೆಗೆ ಕಾರಣವಾದ ಅಂಶಗಳೇನು ಎಂಬುದನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ಶ್ರಮಿಸುತ್ತಿದ್ದಾರೆ.

ಹತ್ಯೆಯ ಉದ್ದೇಶ ನಿಗೂಢ

ತನಿಖಾಧಿಕಾರಿಗಳ ಮಾಹಿತಿಯಂತೆ, ಮೃತ ತುಷಾರ್ ಶರ್ಮಾ ಯಾವುದೇ ಅಪರಾಧ ಹಿನ್ನೆಲೆಯನ್ನು ಹೊಂದಿರಲಿಲ್ಲ ಮತ್ತು ಕೆನಡಾದಲ್ಲಿ ಅವರಿಗೆ ದೊಡ್ಡ ಮಟ್ಟದ ಸ್ನೇಹಿತರ ಬಳಗವೂ ಇರಲಿಲ್ಲ. ಆದರೂ, ಅವರನ್ನು ಗುರಿಯಾಗಿಸಿಕೊಂಡೇ ಈ ಹತ್ಯೆ ನಡೆಸಲಾಗಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರಿಗೆ ಯಾರೊಂದಿಗಾದರೂ ವೈಯಕ್ತಿಕ ದ್ವೇಷವಿತ್ತೇ ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಈ ಕೃತ್ಯ ನಡೆದಿದೆಯೇ ಎಂಬ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಜೊತೆಗೆ, ಈ ಕೃತ್ಯದಲ್ಲಿ ಎಷ್ಟು ಮಂದಿ ಭಾಗಿಯಾಗಿದ್ದಾರೆ ಮತ್ತು ಸಾಕ್ಷ್ಯ ನಾಶಪಡಿಸಲು ಕಾರಿಗೆ ಬೆಂಕಿ ಹಚ್ಚಲಾಯಿತೇ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.

ಸಾರ್ವಜನಿಕರ ನೆರವು ಕೋರಿದ ಪೊಲೀಸರು

ಐಎಚ್‌ಐಟಿ (IHIT) ಸಾರ್ಜೆಂಟ್ ಫ್ರೆಡಾ ಫಾಂಗ್ ಮಾತನಾಡಿ, ತುಷಾರ್ ಅವರ ಕುಟುಂಬಸ್ಥರು ಮತ್ತು ಸ್ನೇಹಿತರನ್ನು ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೆ, ವಿದೇಶದಲ್ಲಿರುವ ಅವರ ಸಂಬಂಧಿಕರು ಮತ್ತು ಪರಿಚಯಸ್ಥರನ್ನೂ ಸಂಪರ್ಕಿಸಿ ಅವರ ದೈನಂದಿನ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ. ಘಟನೆ ನಡೆದ ಸಮಯದಲ್ಲಿ ಆ ಪ್ರದೇಶದಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಿದ್ದರೆ ಅಥವಾ ಸಿಸಿಟಿವಿ ದೃಶ್ಯಾವಳಿಗಳಿದ್ದರೆ ತಕ್ಷಣವೇ ಪೊಲೀಸರೊಂದಿಗೆ ಹಂಚಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat