Dailyhunt Logo
  • Light mode
    Follow system
    Dark mode
    • Play Story
    • App Story

ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ : ಏಳೇ ನಿಮಿಷಗಳಲ್ಲಿ ಸಿಗಲಿದೆ ಅತ್ಯಾಧುನಿಕ ಚಿಕಿತ್ಸೆ!

ಬೆಂಗಳೂರು : ಕ್ಯಾನ್ಸರ್ ಪೀಡಿತರ ಪಾಲಿಗೆ ವೈದ್ಯಕೀಯ ಲೋಕದಲ್ಲಿ ಹೊಸ ಭರವಸೆಯ ಕಿರಣವೊಂದು ಮೂಡಿದೆ. ಹೆಸರಾಂತ ರೋಚೆ ಫಾರ್ಮಾ ಇಂಡಿಯಾ (Roche Pharma India) ಕಂಪನಿಯು ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆಗಾಗಿ ವಿಶ್ವದ ಮೊದಲ ಸಬ್ ಕ್ಯುಟೇನಿಯಸ್ (ಚರ್ಮದ ಕೆಳಭಾಗಕ್ಕೆ ನೀಡುವ) ಇಮ್ಯುನೋಥೆರಪಿ ಔಷಧ 'ಟೆಸೆಂಟ್ರಿಕ್ ಎಸ್‌ಸಿ' (Tecentriq SC) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಈವರೆಗೆ ಗಂಟೆಗಟ್ಟಲೆ ತೆಗೆದುಕೊಳ್ಳುತ್ತಿದ್ದ ಇಂಟ್ರಾವೆನಸ್ ಇನ್ಫೂಷನ್ (IV) ಚಿಕಿತ್ಸೆಯ ಬದಲಾಗಿ, ಕೇವಲ ಏಳು ನಿಮಿಷಗಳಲ್ಲಿ ಚಿಕಿತ್ಸೆ ನೀಡುವ ಈ ಹೊಸ ವಿಧಾನವು ಕ್ಯಾನ್ಸರ್ ಆರೈಕೆ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಲಿದೆ. ಈ ಆವಿಷ್ಕಾರವು ರೋಗಿಗಳು ಆಸ್ಪತ್ರೆಯಲ್ಲಿ ಕಳೆಯುವ ಸಮಯವನ್ನು ಗಣನೀಯವಾಗಿ ತಗ್ಗಿಸಲಿದ್ದು, ಅವರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಕಾರಿಯಾಗಲಿದೆ.

ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡ ನಿವಾರಣೆಗೆ ಪೂರಕ

ಭಾರತದಂತಹ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶದಲ್ಲಿ ತೃತೀಯ ದರ್ಜೆಯ ಕ್ಯಾನ್ಸರ್ ಆಸ್ಪತ್ರೆಗಳ ಮೇಲಿನ ಒತ್ತಡ ಅಪಾರವಾಗಿದೆ. ಟೆಸೆಂಟ್ರಿಕ್ ಎಸ್‌ಸಿ ಬಳಕೆಯಿಂದ ಚಿಕಿತ್ಸಾ ಅವಧಿಯು ಶೇ. 80ರಷ್ಟು ಕಡಿಮೆಯಾಗುವುದರಿಂದ, ಒಂದು ಇಂಟ್ರಾವೆನಸ್ ಚಿಕಿತ್ಸೆಯ ಅವಧಿಯಲ್ಲಿ ಐವರು ರೋಗಿಗಳಿಗೆ ಸಬ್ ಕ್ಯುಟೇನಿಯಸ್ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಇದು ಆರೋಗ್ಯ ಸಂಪನ್ಮೂಲಗಳ ಸದ್ಬಳಕೆಗೆ ದಾರಿ ಮಾಡಿಕೊಡಲಿದೆ. ಜಾಗತಿಕವಾಗಿ ಈಗಾಗಲೇ ೮೫ಕ್ಕೂ ಹೆಚ್ಚು ದೇಶಗಳಲ್ಲಿ ಅನುಮೋದನೆ ಪಡೆದಿರುವ ಈ ಔಷಧವು, ಅರ್ಹ ವಯಸ್ಕರಲ್ಲಿ ಕೀಮೋಥೆರಪಿ ಮುಕ್ತ ಮೊನೊಥೆರಪಿಯಾಗಿ ಬಳಕೆಯಾಗುತ್ತಿದೆ. ಈ ಚಿಕಿತ್ಸಾ ವಿಧಾನವು ರೋಗಿಗಳ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ದೀರ್ಘ ಪ್ರಯಾಣ ಮತ್ತು ಆಸ್ಪತ್ರೆಯ ವಾಸ್ತವ್ಯದ ವೆಚ್ಚವನ್ನು ತಗ್ಗಿಸಲು ನೆರವಾಗಲಿದೆ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

ವಿಕೇಂದ್ರೀಕೃತ ಕ್ಯಾನ್ಸರ್ ಆರೈಕೆಗೆ ಹೊಸ ವೇಗ

ಈ ಹೊಸ ಔಷಧವು ಹ್ಯಾಲೋಜೈಮ್ ಥೆರಪಿಟಿಕ್ಸ್‌ನ 'Enhanze' ತಂತ್ರಜ್ಞಾನವನ್ನು ಒಳಗೊಂಡಿದ್ದು, ಔಷಧವು ಶೀಘ್ರವಾಗಿ ರಕ್ತ ಪರಿಚಲನೆಗೆ ಸೇರಲು ಸಹಾಯ ಮಾಡುತ್ತದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ವಿಕೇಂದ್ರೀಕೃತ ಕ್ಯಾನ್ಸರ್ ಆರೈಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ. ಸಣ್ಣ ಪಟ್ಟಣಗಳಿಂದ ದೊಡ್ಡ ನಗರಗಳಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಇದು ವರದಾನವಾಗಲಿದ್ದು, ಆಸ್ಪತ್ರೆಗಳ ಡೇಕೇರ್ ಕೇಂದ್ರಗಳಲ್ಲಿಯೂ ಸುಲಭವಾಗಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸುತ್ತದೆ. ಈ ಮೂಲಕ ಭಾರತದ ಕ್ಯಾನ್ಸರ್ ಆರೈಕೆ ವ್ಯವಸ್ಥೆಯು ಹೆಚ್ಚು ರೋಗಿ-ಕೇಂದ್ರಿತ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಸಜ್ಜಾದಂತಾಗಿದೆ ಎಂದು ರೋಚೆ ಫಾರ್ಮಾ ಇಂಡಿಯಾ ಸಂಸ್ಥೆ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat