Dailyhunt

ಮಾರುಕಟ್ಟೆಗೆ ಲಗ್ಗೆ ಇಟ್ಟ ಹೊಸ 'ಓಬೆನ್ ರೋರ್ ಇವೊ' ಎಲೆಕ್ಟ್ರಿಕ್ ಬೈಕ್ : ಆರಂಭಿಕ ಬೆಲೆ ಕೇವಲ ₹99,999!

Karnatakanewsbeat 2 weeks ago

ವದೆಹಲಿ : ಭಾರತದ ಪ್ರಮುಖ ದೇಶೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ 'ಓಬೆನ್ ಎಲೆಕ್ಟ್ರಿಕ್' ಇಂದು ತನ್ನ ಬಹುನಿರೀಕ್ಷಿತ 'ರೋರ್ ಇವೊ' (Rorr EVO) ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಅನ್ನು ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆ ಮಾಡಿದೆ.

ಅತ್ಯಾಧುನಿಕ ವಿನ್ಯಾಸ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಹಾಗೂ ಭರ್ಜರಿ ಮೈಲೇಜ್ ಹೊಂದಿರುವ ಈ ಬೈಕ್‌ನ ಆರಂಭಿಕ ಬೆಲೆಯನ್ನು ಎಕ್ಸ್-ಶೋರೂಂ ದರದಂತೆ 99,999 ರೂಪಾಯಿಗಳಿಗೆ ನಿಗದಿಪಡಿಸಲಾಗಿದ್ದು, ಈ ವಿಶೇಷ ರಿಯಾಯಿತಿ ದರವು ಮೊದಲ 10,000 ಗ್ರಾಹಕರಿಗೆ ಮಾತ್ರ ಲಭ್ಯವಿರಲಿದೆ.

ಆಸಕ್ತ ಗ್ರಾಹಕರು ಕೇವಲ 777 ರೂಪಾಯಿಗಳ ಮುಂಗಡ ಹಣ ಪಾವತಿಸಿ ಬೈಕ್ ಅನ್ನು ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. 2026ರ ಜೂನ್ ತಿಂಗಳಿನಿಂದ ದೇಶಾದ್ಯಂತ ಇರುವ ಓಬೆನ್‌ನ 150 ಶೋರೂಮ್‌ಗಳಲ್ಲಿ ಟೆಸ್ಟ್ ರೈಡ್ ಹಾಗೂ ವಾಹನ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ರೋರ್ ಇವೊ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿದ್ದು, ಕೇವಲ ಮೂರು ಸೆಕೆಂಡುಗಳಲ್ಲಿ ಸೊನ್ನೆಯಿಂದ 40 ಕಿಲೋಮೀಟರ್ ವೇಗವನ್ನು ಪಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರ ಗರಿಷ್ಠ ವೇಗ ಗಂಟೆಗೆ 110 ಕಿಲೋಮೀಟರ್ ಆಗಿದ್ದು, ಒಂದು ಬಾರಿ ಪೂರ್ಣವಾಗಿ ಚಾರ್ಜ್ ಮಾಡಿದರೆ ಬರೋಬ್ಬರಿ 180 ಕಿಲೋಮೀಟರ್ (IDC) ವರೆಗೆ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಓಬೆನ್ ಪ್ಲಗ್ (ಫಾಸ್ಟ್ ಚಾರ್ಜರ್) ಮೂಲಕ ಕೇವಲ 90 ನಿಮಿಷಗಳಲ್ಲಿ ಶೂನ್ಯದಿಂದ ಶೇಕಡಾ 80ರಷ್ಟು ಚಾರ್ಜ್ ಮಾಡಿಕೊಳ್ಳುವ ಅವಕಾಶವನ್ನು ಒದಗಿಸಲಾಗಿದೆ. ಓಬೆನ್ ಕಂಪನಿಯು ಸಂಪೂರ್ಣ ಸ್ವದೇಶಿಯಾಗಿ ಅಭಿವೃದ್ಧಿಪಡಿಸಿರುವ 9 ಕಿಲೋವ್ಯಾಟ್ ಸಾಮರ್ಥ್ಯದ ಮೋಟಾರ್ ಹಾಗೂ ಸಿಂಗಲ್-ಸ್ಟೇಜ್ ಚೈನ್ ಡ್ರೈವ್ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದ್ದು, ಇದು ಬಾಳಿಕೆ ಹಾಗೂ ರಸ್ತೆ ಮೇಲಿನ ಎಳೆತದ ಸಾಮರ್ಥ್ಯವನ್ನು (ಟಾರ್ಕ್) ಹೆಚ್ಚಿಸುತ್ತದೆ. ಜೊತೆಗೆ, ಇದರಲ್ಲಿ 3.4 kWh ಸಾಮರ್ಥ್ಯದ ಹೈ-ಪರ್ಫಾರ್ಮೆನ್ಸ್ ಎಲ್‌ಎಫ್‌ಪಿ (LFP) ಬ್ಯಾಟರಿಯನ್ನು ಬಳಸಲಾಗಿದ್ದು, ಇದು ಸಾಮಾನ್ಯ ಲಿಥಿಯಂ-ಐಯಾನ್ ಬ್ಯಾಟರಿಗಳಿಗಿಂತ ಶೇಕಡಾ 50ರಷ್ಟು ಹೆಚ್ಚು ಉಷ್ಣ ನಿರೋಧಕ ಶಕ್ತಿ ಹಾಗೂ ದುಪ್ಪಟ್ಟು ಜೀವಿತಾವಧಿಯನ್ನು ಹೊಂದಿದೆ. ಈ ಬ್ಯಾಟರಿಗೆ ಕಂಪನಿಯು ಬರೋಬ್ಬರಿ ಎಂಟು ವರ್ಷಗಳ ವಾರಂಟಿಯನ್ನೂ ಘೋಷಿಸಿದೆ.

ಎಐ ರೈಡ್ ಮೋಡ್​

ಈ ಹೊಸ ಬೈಕ್‌ನ ಪ್ರಮುಖ ಆಕರ್ಷಣೆಯಾಗಿ 'ಸ್ಮಾರ್ಟ್ ಐಕ್ಯೂ' (SmartIQ) ಎಂಬ ಓಬೆನ್‌ನ ಹೊಸ ಎಐ (AI) ರೈಡ್ ಮೋಡ್ ಅನ್ನು ಪರಿಚಯಿಸಲಾಗಿದೆ. ಇದು ಸವಾರನ ಚಾಲನಾ ಶೈಲಿಯನ್ನು ನೈಜ ಸಮಯದಲ್ಲಿ ವಿಶ್ಲೇಷಿಸಿ, ಪವರ್ ಡೆಲಿವರಿಯನ್ನು ತಾನಾಗಿಯೇ ಹೊಂದಿಸುತ್ತದೆ. ಇದರಿಂದಾಗಿ ಬೈಕ್‌ನ ಮೈಲೇಜ್ ಶೇಕಡಾ 15ರಷ್ಟು ಹೆಚ್ಚಾಗುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಇದರಲ್ಲಿ ಐದು ಇಂಚಿನ ಕಲರ್ ಟಿಎಫ್‌ಟಿ ಡಿಸ್‌ಪ್ಲೇ ಅಳವಡಿಸಲಾಗಿದ್ದು, ಕಾಲ್, ಮೆಸೇಜ್, ಮ್ಯೂಸಿಕ್ ಹಾಗೂ ನ್ಯಾವಿಗೇಷನ್ ಅನ್ನು ಸುಲಭವಾಗಿ ನಿಯಂತ್ರಿಸಬಹುದು.

ಸವಾರ ಆಯತಪ್ಪಿ ಬಿದ್ದರೆ ಕೂಡಲೇ ಎಚ್ಚೆತ್ತುಕೊಂಡು, ಓಬೆನ್ ಆಯಪ್ ಮೂಲಕ ತುರ್ತು ಸಂಪರ್ಕಗಳಿಗೆ ಸಂದೇಶ ರವಾನಿಸುವ 'ಫಾಲ್ ಅಲರ್ಟ್' ತಂತ್ರಜ್ಞಾನವನ್ನು ಇದರಲ್ಲಿ ವಿಶೇಷವಾಗಿ ಅಳವಡಿಸಲಾಗಿದೆ. ಇದರೊಂದಿಗೆ ಯುನಿಫೈಡ್ ಬ್ರೇಕ್ ಅಸಿಸ್ಟ್ (UBA), ಡ್ರೈವರ್ ಅಲರ್ಟ್ ಸಿಸ್ಟಮ್, ಜಿಯೋ-ಫೆನ್ಸಿಂಗ್, ರಿಮೋಟ್ ಡಯಾಗ್ನೋಸ್ಟಿಕ್ಸ್ ಹಾಗೂ ಕಳ್ಳತನ ತಡೆಗಟ್ಟುವಂತಹ (Theft Protection) ಹಲವು ಅತ್ಯಾಧುನಿಕ ಭದ್ರತಾ ಫೀಚರ್‌ಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಬೋಲ್ಡ್ ಆದ 'ಸ್ಟ್ರೀಟ್‌ಫೈಟರ್' ವಿನ್ಯಾಸ ಹೊಂದಿರುವ ಈ ಬೈಕ್ ಪ್ರಾಯೋಗಿಕ ಬಳಕೆಗೂ ಅತ್ಯಂತ ಉಪಯುಕ್ತ ವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ. ತನ್ನ ವಿಭಾಗದಲ್ಲೇ ಅತಿ ಉದ್ದವಾದ 680 ಎಂಎಂ ಸೀಟು ಹಾಗೂ 780 ಎಂಎಂ ಸೀಟ್ ಎತ್ತರವನ್ನು ಹೊಂದಿದ್ದು, ಸವಾರರಿಗೆ ಅತ್ಯಂತ ಆರಾಮದಾಯಕ ಅನುಭವ ನೀಡುತ್ತದೆ. ಮೋಟಾರ್‌ಸೈಕಲ್ ವಿಭಾಗದಲ್ಲಿಯೇ ಮೊದಲ ಬಾರಿಗೆ 10 ಲೀಟರ್ ಸಾಮರ್ಥ್ಯದ ಸ್ಟೋರೇಜ್ ಸೌಲಭ್ಯವನ್ನು ಸೀಟಿನ ಅಡಿ ಮತ್ತು ಟ್ಯಾಂಕ್ ಪಾಡ್‌ನಲ್ಲಿ ನೀಡಲಾಗಿದ್ದು, ಡ್ಯುಯಲ್ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಕೂಡ ಇದೆ.

200 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 230 ಎಂಎಂ ವಾಟರ್-ವೇಡಿಂಗ್ (ನೀರಿನಲ್ಲಿ ಚಲಿಸುವ) ಸಾಮರ್ಥ್ಯವು ಭಾರತದ ಹವಾಮಾನ ಮತ್ತು ರಸ್ತೆಗಳಿಗೆ ಹೇಳಿ ಮಾಡಿಸಿದಂತಿದೆ. ಟ್ರಾಫಿಕ್‌ನಲ್ಲಿ ಬೈಕ್ ಅನ್ನು ಸುಲಭವಾಗಿ ಹಿಂದಕ್ಕೆ ಚಲಿಸಲು 'ರಿವರ್ಸ್ ಮೋಡ್' ಸೌಲಭ್ಯವನ್ನೂ ನೀಡಲಾಗಿದೆ. ಈ ವಾಹನವು ಪಲ್ಸ್ ರೆಡ್, ನ್ಯೂಟ್ರಾನ್ ಬ್ಲೂ, ಮ್ಯಾಗ್ನೆಟಿಕ್ ಬ್ಲ್ಯಾಕ್ ಮತ್ತು ಫೋಟಾನ್ ವೈಟ್ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಮುಂಬೈನಲ್ಲಿ ನಡೆದ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಓಬೆನ್ ಎಲೆಕ್ಟ್ರಿಕ್‌ನ ಸಂಸ್ಥಾಪಕಿ ಮತ್ತು ಸಿಇಒ ಮಧುಮಿತಾ ಅಗರವಾಲ್ ಅವರು, "ಭಾರತದಲ್ಲಿ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಯು ಹೊಸ ಹಂತಕ್ಕೆ ಕಾಲಿಡುತ್ತಿದ್ದು, ಜನರು ಇವುಗಳನ್ನು ಕೇವಲ ಪರ್ಯಾಯ ವಾಹನಗಳಾಗಿ ನೋಡದೆ ಮುಖ್ಯ ವಾಹನಗಳಾಗಿ ಸ್ವೀಕರಿಸುತ್ತಿದ್ದಾರೆ" ಎಂದು ಅಭಿಪ್ರಾಯಪಟ್ಟರು.

"ರೋರ್ ಇವೊ ವಾಹನವು ಯಾವುದೇ ರಾಜಿ ಇಲ್ಲದ ಉತ್ಪನ್ನವಾಗಿದ್ದು, ನೈಜ ಪ್ರಪಂಚದ ಸವಾರಿ ಅನುಭವವನ್ನು ಸಂಪೂರ್ಣವಾಗಿ ಬದಲಾಯಿಸಲಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಮೊದಲ ಹತ್ತು ಸಾವಿರ ಗ್ರಾಹಕರಿಗೆ 99,999 ರೂಪಾಯಿಗಳ ಆಫರ್ ಮುಗಿದ ಬಳಿಕ ವಾಹನದ ಬೆಲೆಯು 1,24,999 ರೂಪಾಯಿಗಳಿಗೆ (ಎಕ್ಸ್-ಶೋರೂಂ) ಏರಿಕೆಯಾಗಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಆಸಕ್ತರು ದೇಶದಾದ್ಯಂತ ಇರುವ 68,000ಕ್ಕೂ ಹೆಚ್ಚು ಚಾರ್ಜಿಂಗ್ ನೆಟ್‌ವರ್ಕ್ ಸೌಲಭ್ಯದ ಲಾಭವನ್ನು ಸಹ ಓಬೆನ್ ಆಯಪ್ ಮೂಲಕ ಪಡೆಯಬಹುದಾಗಿದೆ.

ಇದನ್ನೂ ಓದಿ : ಪಶ್ಚಿಮ ಬಂಗಾಳದಲ್ಲಿ ಕೇಸರಿ ಸುನಾಮಿ : 15 ವರ್ಷಗಳ TMC ಆಡಳಿತ ಅಂತ್ಯ, ಬಿಜೆಪಿಗೆ ಬೃಹತ್ ಜಯದ ಮುನ್ಸೂಚನೆ!

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat