Dailyhunt Logo
  • Light mode
    Follow system
    Dark mode
    • Play Story
    • App Story

ಮತದಾರರೇ ಅಭಿಮಾನಿ ದೇವರು ; ವಿದಾಯ ಭಾಷಣದಲ್ಲಿ ಅಣ್ಣಾವ್ರರನ್ನ ನೆನಪಿಸಿಕೊಂಡ ಸಿದ್ದರಾಮಯ್ಯ!

ಬೆಂಗಳೂರು : "ಕರ್ನಾಟಕ ಮೇರು ನಟ ಡಾ.ರಾಜಕುಮಾರ್ ಅವರು ಅಭಿಮಾನಿ ದೇವರು ಎಂದು ಕರೆಯುತ್ತಿದ್ದರು. ನಾನು ರಾಜಕಾರಣಿ, ನನಗೆ ಸಂವಿಧಾನವೇ ಧರ್ಮವಾಗಿದೆ. ಮತದಾರರೇ ನಮ್ಮ ಅಭಿಮಾನಿ ದೇವರು ಕನ್ನಡ ನಾಡಿನ ಏಳು ಕೋಟಿ ಜನರಿಗೆ ಸೇವೆ ಮಾಡುವ ಅವಕಾಶ ಸಿಕ್ಕಿತ್ತು" ಎಂದು ರಾಜೀನಾಮೆ ಸಲ್ಲಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಬಳಿಕ ಸಿಎಂ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ಪತ್ರಿಕಾಗೋಷ್ಠಿಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಪ್ರಿಯಾಂಕ್ ಖರ್ಗೆ, ಬೈರತಿ ಸುರೇಶ್, ಕೆ.ಜೆ ಜಾರ್ಜ್, ಚೆಲುವರಾಯಸ್ಚಾಮಿ, ಡಾ.ಜಿ ಪರಮೇಶ್ವರ್ ಸೇರಿ ಹಲವು ರಾಜಕೀಯ ನಾಯಕರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ನಾನು ರಾಜ್ಯಪಾಲರ ಭವನದಲ್ಲಿ ರಾಜೀನಾಮೆ ಸಲ್ಲಿಸಿದ್ದೇನೆ. ರಾಜ್ಯಪಾಲರು ಬೆಂಗಳೂರಿನಲ್ಲಿ ಇಲ್ಲ, ರಾತ್ರಿ ಬರ್ತಾರೆ. ಹಾಗಾಗಿ ರಾಜೀನಾಮೆ ಪತ್ರವನ್ನು ಅವರ ಕಚೇರಿ ಕಾರ್ಯದರ್ಶಿ ಬಳಿ ನೀಡಿದ್ದೇನೆ ಎಂದು ತಿಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು, ನಾನು ಹಳ್ಳಿಯಿಂದ ಬಂದವನು. ಮುಂದೊಂದು ದಿನ ಶಾಸಕನಾಗುತ್ತೇನೆ, ಸಚಿವನಾಗುತ್ತೇನೆ, ಸಿಎಂ ಆಗುತ್ತೇನೆ ಎಂಬ ಕನಸು ಕಂಡಿಲ್ಲ. ರಾಜ ಕಾರಣಕ್ಕೆ ಬಂದಿದ್ದು ಆಕಸ್ಮಿಕವಾಗಿತ್ತು. ರಾಜಕಾರಣಕ್ಕೆ ಬಂದಂದಿನಿಂದ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ತತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದೆ. ಸಂವಿಧಾನದಲ್ಲಿ ಅಪಾರ ಗೌರವ ಇಟ್ಟುಕೊಂಡವನು ಎಂದು ತಮ್ಮ ಬದ್ಧತೆಯನ್ನು ತಿಳಿಸಿದರು. ಎಂಟು ವರ್ಷ ಸಿಎಂ ಆಗಿದ್ದ, ಎರಡು ಬಾರಿ ವಿಪಕ್ಷ ನಾಯಕನಾಗಿದ್ದು, ಇದಕ್ಕೆ ಕಾಂಗ್ರೆಸ್ ಪಕ್ಷ ಅವಕಾಶ ನೀಡಿದೆ ಹಾಗಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ, ಅವರು ಯಾವಾಗ ರಾಜೀನಾಮೆ ಕೊಡುವಂತೆ ಸೂಚಿಸುತ್ತಾರೆ, ಅವಾಗ ರಾಜೀನಾಮೆ ಕೊಡುತ್ತೇನೆ ಎಂದಿದ್ದೆ. ಮೊನ್ನೆ ಹೈಕಮಾಂಡ್ ನಾಯಕರು ರಾಜೀನಾಮೆ ಕೊಡಿ ಎಂದಾಗ, ಗುರುವಾರ ರಾಜೀನಾಮೆ ಕೊಡುತ್ತೇನೆ ಎಂದಿದ್ದೆ. ಹಾಗಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ರಾಜ್ಯಪಾಲರು ಬಂದ ಬಳಿಕ ನನ್ನ ರಾಜೀನಾಮೆ ಪತ್ರ ಅಂಗೀಕಾರ ಮಾಡ್ತಾರೆ ಎಂದು ಸಂಪೂರ್ಣ ವಿಶ್ವಾಸ ಇದೆ. ಸಂವಿಧಾನದ ಪ್ರಕಾರ ಮಾಡಲೇ ಬೇಕಾಗಿದೆ. ಅವರು ಯಾವ ಪ್ರಕ್ರಿಯೆ ಪಾಲನೆ ಮಾಡುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದು. ಒಂದು ಬಾರಿ ಸಿಎಂ ರಾಜೀನಾಮೆ ಕೊಟ್ಟ ಬಳಿಕ ಅಂಗೀಕಾರ ಮಾಡುವುದು ಅವರ ಜವಾಬ್ದಾರಿಯಾಗಿದೆ. ನಮ್ಮ ಪಕ್ಷ 135+1 ಸ್ಥಾನ ಪಡೆದಿದ್ದೇವೆ. ಜೊತೆಗೆ ಇಬ್ಬರು ಪಕ್ಷೇತರರ ಬೆಂಬಲ ಇದೆ. ಹಾಗಾಗಿ ನಾವು ಸಂಪೂರ್ಣ ಬಹುಮತ ಹೊಂದಿದ್ದೇವೆ. ಹಾಗಾಗಿ ಮುಂದಿನ ಸಿಎಂಗೆ ಅವಕಾಶ ಮಾಡಿ ಕೊಡಬೇಕಾಗಿದ್ದು, ಸಂವಿಧಾನ ಬದ್ಧವಾಗಿದೆ.

ಎರಡು ಬಾರಿ ಸಿಎಂ, ಎರಡು ಬಾರಿ ವಿಪಕ್ಷ ನಾಯಕನಾಗಿದ್ದೆ. ಈ ಅವಕಾಶ ಒದಗಿಸಿಕೊಟ್ಟ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಈ ಸಂದರ್ಭದಲ್ಲಿ ಅಪಾರ ಧನ್ಯವಾದ ಸಲ್ಲಿಸುತ್ತೇನೆ. ಕಾಂಗ್ರೆಸ್ ಸೇರಿದ್ದು 2006 ರಲ್ಲಿ. ಅಲ್ಲಿಂದ ಕಾಂಗ್ರೆಸ್ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಶಾಸಕರು, ಲೋಕಸಭೆ, ರಾಜ್ಯಸಭೆ ಸದಸ್ಯರು ಪ್ರೀತಿ ನೀಡಿದ್ದಾರೆ ಹಾಗೂ ಅವಕಾಶವನ್ನು ನೀಡಿದ್ದಾರೆ. ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಎರಡು ಬಾರಿ ಸಿಎಂ ಆಗಿದ್ದ ಸಂದರ್ಭದಲ್ಲಿ ನನ್ನ ಜೊತೆಗೆ ಕೆಲಸ ಮಾಡಿದ ಸಹೋದ್ಯೋಗಿಗಳು ಎಲ್ಲಾ ರೀತಿಯಲ್ಲಿ ಸಹಕಾರ, ಪ್ರೀತಿ ನೀಡಿದ್ದಾರೆ. ಅದಕ್ಕೆ ನಾನು ಋಣಿಯಾಗಿದ್ದೇನೆ ಎಂದಿದ್ದಾರೆ.

ಅಧಿಕಾರ, ಹಣದ ಹಿಂದೆ ಹೋಗಿಲ್ಲ.‌ಆಸ್ತಿ ಪಾಸ್ತಿ ಮಾಡುವ ಯೋಚನೆ ಮಾಡಿಲ್ಲ ಮತದಾರ ದೇವರು ಅಧಿಕಾರ ಕೊಟ್ಟಿದ್ದಾರೆ, 50 ವರ್ಷಗಳ ಸುದೀರ್ಘ ರಾಜಕಾರಣ ಜೀವನ ನಡೆಸಿದ್ದೇನೆ. ರಾಜಕೀಯ ಜೀವನ ತೆರೆದ ಪುಸ್ತಕವಾಗಿದೆ. ರಾಜಕೀಯದಲ್ಲಿ ಜನಶಕ್ತಿ ಮಾತ್ರ ಉಳಿಸುತ್ತದೆ. ಹಾಗಾಗಿ ನಾನೆಂದೂ ನಂಬಿದ ಮೌಲ್ಯಗಳ ಜೊತೆ ರಾಜಿ ಮಾಡಿಲ್ಲ. ಸಿದ್ದಾಂತದಲ್ಲಿ ರಾಜಿಯಾಗಿಲ್ಲ. ಮನುಷ್ಯನಿಗೆ ಬದುಕಿನ ಪ್ರಾಥಮಿಕ ಆದ್ಯತೆ ಕೊಡಿಸಬೇಕು ಎಂದು ನಂಬಿದ್ದೇನೆ. ಅದಕ್ಕಾಗಿ ಸಮಾಜದ ಎಲ್ಲಾ ಬಡವರಿಗೆ ಗ್ಯಾರಂಟಿ ಮೂಲಕ ಅನುಕೂಲ ಮಾಡಲಾಗಿದೆ. ಬರ ಬಂದಾಗ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನೆಲ, ಜಲ, ಭಾಷೆ ವಿಚಾರವಾಗಿ ರಾಜಿ ಮಾಡಿಲ್ಲ ಎಂದರು. ಕೊನೆ ಉಸಿರು ಇರುವವರೆಗೂ ಕೋಮುವಾದಿ ಶಕ್ತಿಗಲ ವಿರುದ್ಧ ಹೋರಾಟ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳೀದ್ದಾರೆ.

ಇದನ್ನೂ ಓದಿ : ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ - ರಾಜ್ಯಪಾಲರ ಕಾರ್ಯದರ್ಶಿಗೆ ಪತ್ರ ಹಸ್ತಾಂತರ!

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat