Dailyhunt Logo
  • Light mode
    Follow system
    Dark mode
    • Play Story
    • App Story
ಮೇಲಿಂದ ತಳ್ಳಿದರೂ ಸಾಯದ ಪತಿ ; IV ಲೈನ್ ಮೂಲಕ ಟಾಯ್ಲೆಟ್ ಕ್ಲೀನರ್ ಇಂಜೆಕ್ಟ್ ಮಾಡಿ ಕೊಂದ ಪತ್ನಿ!

ಮೇಲಿಂದ ತಳ್ಳಿದರೂ ಸಾಯದ ಪತಿ ; IV ಲೈನ್ ಮೂಲಕ ಟಾಯ್ಲೆಟ್ ಕ್ಲೀನರ್ ಇಂಜೆಕ್ಟ್ ಮಾಡಿ ಕೊಂದ ಪತ್ನಿ!

ನಿಜಾಮಾಬಾದ್ : ಪತಿಯನ್ನು ಪತ್ನಿಯೇ ಕೊಲ್ಲುವಂತಹ ಘಟನೆಗಳಿಗೆ ಹೊಸ ಸೇರ್ಪಡೆ ಎಂಬಂತೆ ಇದೀಗ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಭೀಕರ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕಟ್ಟಡದ ಮೇಲಿನಿಂದ ತಳ್ಳಿದರೂ ಬದುಕುಳಿದಿದ್ದ ಗಂಡನನ್ನು, ಆಸ್ಪತ್ರೆಯಲ್ಲಿದ್ದಾಗ ಆತನಿಗೆ ಅಳವಡಿಸಲಾಗಿದ್ದ ಐವಿ (IV) ಲೈನ್ ಮೂಲಕ ಟಾಯ್ಲೆಟ್ ಕ್ಲೀನಿಂಗ್ ಲಿಕ್ವಿಡ್ ಇಂಜೆಕ್ಟ್ ಮಾಡಿ ನರ್ಸ್ ಆಗಿರುವ ಹೆಂಡತಿಯೇ ಕ್ರೂರವಾಗಿ ಕೊಂದಿದ್ದಾಳೆ.

ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಹತ್ಯೆ ಮಾಡಲು ಈಕೆ ತನ್ನ ವೈದ್ಯಕೀಯ ತರಬೇತಿಯನ್ನೇ ಆಯುಧವನ್ನಾಗಿ ಬಳಸಿಕೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಘಟನೆಗೆ ಸಂಬಂಧಿಸಿದಂತೆ ಮೃತನ ಪತ್ನಿ ಸಂಧ್ಯಾ, ಆಕೆಯ ಪ್ರಿಯಕರ ಅನಿಲ್ ಮತ್ತು ಆತನ ಸ್ನೇಹಿತ ವೆಂಕಟ್ ಸಾಯಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಅನೈತಿಕ ಸಂಬಂಧವೇ ಕಾರಣ

ಮೃತನನ್ನು ಇತ್ತೀಚೆಗಷ್ಟೇ ಗಲ್ಫ್ ದೇಶದಿಂದ ಹಿಂದಿರುಗಿದ್ದ ಪ್ರಶಾಂತ್ ಎಂದು ಗುರುತಿಸಲಾಗಿದೆ. ಪ್ರಶಾಂತ್ ಮತ್ತು ಆತನ ಪತ್ನಿ ಸಂಧ್ಯಾ ನಡುವೆ ಕಳೆದ ಕೆಲವು ಸಮಯದಿಂದ ಕೌಟುಂಬಿಕ ಕಲಹ ನಡೆಯುತ್ತಿತ್ತು. ಸಂಧ್ಯಾಳಿಗೆ ಅನಿಲ್ ಎಂಬಾತನೊಂದಿಗೆ ಇದ್ದ ಅನೈತಿಕ ಸಂಬಂಧವೇ ಇದಕ್ಕೆ ಕಾರಣವಾಗಿತ್ತು. ಪ್ರಶಾಂತ್ ತಮ್ಮ ಪ್ರೀತಿಗೆ ಅಡ್ಡಿಯಾಗುತ್ತಿದ್ದಾನೆ ಎಂದು ಭಾವಿಸಿದ ಸಂಧ್ಯಾ ಮತ್ತು ಅನಿಲ್, ಆತನನ್ನು ಮುಗಿಸಲು ವೆಂಕಟ್ ಸಾಯಿ ಜೊತೆ ಸೇರಿ ಸ್ಕೆಚ್ ಹಾಕಿದ್ದರು. ಅದರಂತೆ ಮೊದಲಿಗೆ ಪ್ರಶಾಂತ್‌ಗೆ ಅತಿಯಾಗಿ ಮದ್ಯ ಕುಡಿಸಿದ್ದ ಅನಿಲ್ ಮತ್ತು ವೆಂಕಟ್ ಸಾಯಿ, ಆತನ ಮೇಲೆ ಹಲ್ಲೆ ನಡೆಸಿ ಮನೆಯ ಮಹಡಿಯ ಮೇಲಿನಿಂದ ಕೆಳಗೆ ತಳ್ಳಿದ್ದರು.

ಬದುಕುಳಿದಿದ್ದ ಗಂಡನಿಗೆ ಆಸ್ಪತ್ರೆಯಲ್ಲೇ ಹೊಂಚು

ಆದರೆ ಮಹಡಿಯಿಂದ ಬಿದ್ದರೂ ತೀವ್ರ ಗಾಯಗಳೊಂದಿಗೆ ಪ್ರಶಾಂತ್ ಬದುಕುಳಿದಿದ್ದ. ತಕ್ಷಣವೇ ಎಚ್ಚೆತ್ತ ಆರೋಪಿಗಳು, ನೀನು ಅತಿಯಾಗಿ ಮದ್ಯಪಾನ ಮಾಡಿದ್ದರಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದೆ ಎಂದು ಕಥೆ ಕಟ್ಟಿ ಪ್ರಶಾಂತ್‌ನನ್ನು ನಂಬಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹಂತಕರು ಅಲ್ಲಿಗೇ ಸುಮ್ಮನಾಗದೆ ಆಸ್ಪತ್ರೆಯಲ್ಲೇ ತಮ್ಮ ಎರಡನೇ ಹಂತದ ಭೀಕರ ಸಂಚನ್ನು ರೂಪಿಸಿದ್ದರು. ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸಂಧ್ಯಾ, ತನ್ನ ವೈದ್ಯಕೀಯ ಜ್ಞಾನವನ್ನು ದುರುಪಯೋಗಪಡಿಸಿಕೊಂಡು, ಚಿಕಿತ್ಸೆ ಪಡೆಯುತ್ತಿದ್ದ ಪತಿಯ ಗ್ಲುಕೋಸ್ (IV) ಲೈನ್‌ಗೆ ಟಾಯ್ಲೆಟ್ ಕ್ಲೀನರ್ ದ್ರವವನ್ನು ಇಂಜೆಕ್ಷನ್ ಮೂಲಕ ಚುಚ್ಚಿದ್ದಾಳೆ. ದೇಹ ಸೇರಿದ ಆ ವಿಷಕಾರಿ ದ್ರವದ ತೀವ್ರತೆಗೆ ಪ್ರಶಾಂತ್ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾನೆ.

ತಾಯಿಯ ಸಂಶಯದಿಂದ ಬಯಲಾಯ್ತು ರಹಸ್ಯ

ಪ್ರಶಾಂತ್ ಸಾವಿನ ಸುತ್ತ ಅನುಮಾನ ವ್ಯಕ್ತಪಡಿಸಿದ ಆತನ ತಾಯಿ ಜುಲೈ 1 ರಂದು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಇಡೀ ಕೊಲೆ ರಹಸ್ಯ ಬಯಲಾಗಿದೆ. ಮೊದಲ ಯತ್ನದಲ್ಲಿ ಪ್ರಶಾಂತ್‌ನನ್ನು ಮಹಡಿಯಿಂದ ತಳ್ಳಲು ಸಹಾಯ ಮಾಡಿದ್ದಾಗಿ ವೆಂಕಟ್ ಸಾಯಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಸದ್ಯ ಬಂಧಿತ ಮೂವರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೃತನ ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ (Forensic) ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಮೇಘಾಲಯ ಹನಿಮೂನ್ ಮರ್ಡರ್, ಮೀರತ್ ಟ್ಯಾಂಕ್ ಮರ್ಡರ್, ಪುಣೆ ಲೋಹಗಢ ಕೋಟೆ ಕೊಲೆಯ ಬೆನ್ನಲ್ಲೇ ಈ ಹತ್ಯೆ ಪ್ರಕರಣವೂ ಎಲ್ಲರನ್ನು ಬೆಚ್ಚಿಬೀಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat