Dailyhunt Logo
  • Light mode
    Follow system
    Dark mode
    • Play Story
    • App Story
ನಟ ದರ್ಶನ್‌ಗೆ ಹೊಸ ಸಂಕಷ್ಟ - ಸಾಕ್ಷಿಗೆ ಬೆದರಿಕೆ ಹಾಕಿದ ಕೇಸ್‌ನಲ್ಲಿ ಮೂವರ ಬಂಧನ!

ನಟ ದರ್ಶನ್‌ಗೆ ಹೊಸ ಸಂಕಷ್ಟ - ಸಾಕ್ಷಿಗೆ ಬೆದರಿಕೆ ಹಾಕಿದ ಕೇಸ್‌ನಲ್ಲಿ ಮೂವರ ಬಂಧನ!

Karnatakanewsbeat 3 weeks ago

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಪ್ರಕರಣದ ವಿಚಾರಣೆ ನಡೆಯುತ್ತಿರುವ ನಡುವೆಯೇ, ಪ್ರಮುಖ ಸಾಕ್ಷಿದಾರನಿಗೆ ಬೆದರಿಕೆ ಹಾಕಿದ ಆರೋಪ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದ 49ನೇ ಸಾಕ್ಷಿದಾರ ಸಂದೀಪ್ ನೀಡಿದ ದೂರಿನ ಮೇರೆಗೆ ಕಾಮಾಕ್ಷಿಪಾಳ್ಯ ಪೊಲೀಸರು ಪುನೀತ್, ವೇಣು ಮತ್ತು ಸುಹಾಸ್ ಎಂಬ ಮೂವರನ್ನು ಬಂಧಿಸಿದ್ದಾರೆ.

ಕಳೆದ ಜೂನ್ 25ರಂದು ಟ್ರಯಲ್ ಕೋರ್ಟ್‌ನಲ್ಲಿ ಸಾಕ್ಷ್ಯ ನೀಡಿದ್ದ ಸಂದೀಪ್, ತನ್ನ ವಿರುದ್ಧ ಬೆದರಿಕೆ ಹಾಗೂ ಒತ್ತಡ ನಡೆಯುತ್ತಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ದರ್ಶನ್ ವಿರುದ್ಧ ಸಾಕ್ಷಿ ಹೇಳದಂತೆ ಪುನೀತ್, ವೇಣು ಮತ್ತು ಸುಹಾಸ್ ಮೂಲಕ ಬೆದರಿಕೆ ಹಾಕಲಾಗುತ್ತಿದೆ ಎಂದು ಸಂದೀಪ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಟ್ರಯಲ್ ಕೋರ್ಟ್ ಸುಮೋಟೋ ಪ್ರಕರಣ ದಾಖಲಿಸಲು ಸೂಚನೆ ನೀಡಿದ್ದು, ಕಾಮಾಕ್ಷಿಪಾಳ್ಯ ಪೊಲೀಸರು ಎಫ್‌ಐಆರ್ ದಾಖಲಿಸಿ ಮೂವರನ್ನು ಬಂಧಿಸಿದ್ದಾರೆ.

ಸಂದೀಪ್ ತುಮಕೂರಿನ ದುರ್ಗಾ ಬಾರ್‌ನಲ್ಲಿ ಕ್ಯಾಶಿಯರ್ ಆಗಿದ್ದು, ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತರುವ ವೇಳೆ ಆರೋಪಿಗಳು ತುಮಕೂರಿನ ದುರ್ಗಾ ಬಾರ್‌ನಲ್ಲಿ ಮದ್ಯ ಖರೀದಿಸಿದ್ದರು. ಈ ವೇಳೆ ಹಣ ಪಾವತಿಸಿದ್ದ ವ್ಯಕ್ತಿ ರೇಣುಕಾಸ್ವಾಮಿ ಎಂಬುದನ್ನು ಸಂದೀಪ್ ಗುರುತಿಸಿದ್ದರಿಂದ, ಅವರನ್ನು ಪ್ರಕರಣದ ಪ್ರಮುಖ ಸಾಕ್ಷಿದಾರನಾಗಿ ಪರಿಗಣಿಸಲಾಗಿದೆ.

ಬಂಧಿತ ಪುನೀತ್ ಕೂಡ ಮೂಲ ಕೊಲೆ ಪ್ರಕರಣದಲ್ಲಿ ಸಾಕ್ಷಿದಾರನಾಗಿದ್ದಾನೆ. ರೇಣುಕಾಸ್ವಾಮಿ ಹತ್ಯೆಯ ಬಳಿಕ ಮೃತದೇಹ ಸಾಗಿಸಲು ಬಳಸಲಾಗಿದ್ದ ಸ್ಕಾರ್ಪಿಯೋ ವಾಹನದ ಮಾಲೀಕ ಪುನೀತ್ ಆಗಿದ್ದು, ಚಿಕ್ಕಬಳ್ಳಾಪುರದಿಂದ ದರ್ಶನ್ ಫಾರ್ಮ್‌ಹೌಸ್‌ಗೆ ಮೇಕೆಗಳನ್ನು ಸಾಗಿಸಲು ವಾಹನ ನೀಡಿದ್ದೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದ. ಬಳಿಕ ಆ ವಾಹನವನ್ನು ದರ್ಶನ್ ಅವರ ಮ್ಯಾನೇಜರ್ ನಾಗರಾಜ್ ಪಡೆದಿದ್ದರು ಎಂದು ಕೂಡ ತನಿಖೆಯಲ್ಲಿ ತಿಳಿಸಿದ್ದ.

ಮೂಲತಃ ಹಾಸನ ಜಿಲ್ಲೆಯ ಅರಸೀಕೆರೆ ನಿವಾಸಿಯಾಗಿರುವ ಪುನೀತ್, ಬೆಂಗಳೂರಿನ ಮಹದೇವಪುರದಲ್ಲಿ ವಾಸವಾಗಿದ್ದಾನೆ. ಕಳೆದ ಸುಮಾರು ಎಂಟು ವರ್ಷಗಳಿಂದ ದರ್ಶನ್ ಹೆಸರಿನ ಸಾಮಾಜಿಕ ಜಾಲತಾಣಗಳಾದ 'ಡಿ ಕಂಪನಿ', 'ದರ್ಶನ್ ತೂಗುದೀಪ ಶ್ರೀನಿವಾಸ್', 'ದಾಸ ದರ್ಶನ್' ಸೇರಿದಂತೆ ಹಲವು ಫ್ಯಾನ್ ಪೇಜ್‌ಗಳನ್ನು ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಸದ್ಯ ಸಾಕ್ಷಿದಾರನಿಗೆ ಬೆದರಿಕೆ ಪ್ರಕರಣದ ತನಿಖೆ ಮುಂದುವರಿದಿದ್ದು, ಈ ಕೃತ್ಯದ ಹಿಂದೆ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಆಯಾಮದಲ್ಲೂ ಕಾಮಾಕ್ಷಿಪಾಳ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat