Dailyhunt Logo
  • Light mode
    Follow system
    Dark mode
    • Play Story
    • App Story
"ನೀವು ಕೆಂಪುಕೋಟೆ ಸ್ಫೋಟಕ್ಕೆ ಹಣ ನೀಡಿದ್ದೀರಿ" : ವೃದ್ಧ ದಂಪತಿಯನ್ನು 'ಡಿಜಿಟಲ್ ಅರೆಸ್ಟ್' ಮಾಡಿ 30 ಲಕ್ಷ ದೋಚಿದ ಗ್ಯಾಂಗ್!

"ನೀವು ಕೆಂಪುಕೋಟೆ ಸ್ಫೋಟಕ್ಕೆ ಹಣ ನೀಡಿದ್ದೀರಿ" : ವೃದ್ಧ ದಂಪತಿಯನ್ನು 'ಡಿಜಿಟಲ್ ಅರೆಸ್ಟ್' ಮಾಡಿ 30 ಲಕ್ಷ ದೋಚಿದ ಗ್ಯಾಂಗ್!

ವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೈಬರ್ ವಂಚಕರ ತಂಡವೊಂದು ವೃದ್ಧ ದಂಪತಿಯನ್ನು ಸತತ ಏಳು ದಿನಗಳ ಕಾಲ 'ಡಿಜಿಟಲ್ ಅರೆಸ್ಟ್'ನಲ್ಲಿಟ್ಟು, ಅವರಿಂದ ಬರೋಬ್ಬರಿ 30 ಲಕ್ಷ ರೂಪಾಯಿಗಳನ್ನು ದೋಚಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಭಯೋತ್ಪಾದನಾ ನಿಗ್ರಹ ಪಡೆ (ATS) ಅಧಿಕಾರಿಗಳಂತೆ ನಟಿಸಿದ ವಂಚಕರು, ವೃದ್ಧರ ಬ್ಯಾಂಕ್ ಖಾತೆಯಿಂದ ಭಯೋತ್ಪಾದಕರಿಗೆ ಹಣ ವರ್ಗಾವಣೆಯಾಗಿದೆ ಎಂದು ಹೆದರಿಸಿ ಈ ಕೃತ್ಯ ಎಸಗಿದ್ದಾರೆ.

ದೆಹಲಿಯ ದ್ವಾರಕಾ ನಿವಾಸಿಯಾಗಿರುವ 74 ವರ್ಷದ ನಿವೃತ್ತ ರೈಲ್ವೆ ಉದ್ಯೋಗಿಗೆ ಕಳೆದ ವರ್ಷ ನವೆಂಬರ್ 23 ರಂದು ಕರೆಯೊಂದು ಬಂದಿತ್ತು. ಕರೆ ಮಾಡಿದ ವ್ಯಕ್ತಿ ತನ್ನನ್ನು ಎನ್‌ಐಎ (NIA) ಅಧಿಕಾರಿ ಎಂದು ಪರಿಚಯಿಸಿಕೊಂಡು, ನವೆಂಬರ್ 10 ರಂದು ಕೆಂಪುಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣದ ಆರೋಪಿ ಉಮರ್ ನಬಿಗೆ ನಿಮ್ಮ ಖಾತೆಯಿಂದ ಹಣ ತಲುಪಿದೆ ಎಂದು ಹೆದರಿಸಿದ್ದ.

ಮರುದಿನ ವಿಡಿಯೋ ಕರೆ ಮಾಡಿದ ವಂಚಕರು ತಮ್ಮನ್ನು ಎನ್‌ಐಎ ಮತ್ತು ಎಟಿಎಸ್ ಉನ್ನತಾಧಿಕಾರಿಗಳು ಎಂದು ಹೇಳಿಕೊಂಡು, ವೃದ್ಧ ದಂಪತಿಯನ್ನು ಸಂಪೂರ್ಣ ಡಿಜಿಟಲ್ ಬಂಧನದಲ್ಲಿಟ್ಟರು. ಈ ವಿಷಯವನ್ನು ಮಕ್ಕಳು ಸೇರಿದಂತೆ ಯಾರೊಂದಿಗೂ ಹಂಚಿಕೊಳ್ಳಬಾರದೆಂದು ಬೆದರಿಸಿದಲ್ಲದೆ, ವಾಟ್ಸ್ ಆಯಪ್ ಮೂಲಕ ನಕಲಿ 'ರಹಸ್ಯ ಒಪ್ಪಂದ' (Confidentiality Agreement) ಪತ್ರವನ್ನು ಕಳುಹಿಸಿ ಅದಕ್ಕೆ ಸಹಿಯನ್ನೂ ಪಡೆದುಕೊಂಡಿದ್ದರು.

ಆರ್‌ಬಿಐ ನಕಲಿ ಪತ್ರ ಕಳುಹಿಸಿ 30 ಲಕ್ಷ ರೂ. ವಂಚನೆ

ತನಿಖೆಯ ನೆಪದಲ್ಲಿ ದಂಪತಿಯ ಎಲ್ಲಾ ಫಿಕ್ಸ್ಡ್ ಡೆಪಾಸಿಟ್ ಹಾಗೂ ಬ್ಯಾಂಕ್ ಖಾತೆಗಳ ವಿವರ ಪಡೆದ ಸೈಬರ್ ಖದೀಮರು, ಹಣದ ಮೂಲವನ್ನು ಪರಿಶೀಲಿಸಬೇಕೆಂದು ನಂಬಿಸಿದರು. 'ಆರ್‌ಬಿಐ ಅನುಮೋದಿತ' ಖಾತೆಗೆ ಹಣ ವರ್ಗಾಯಿಸಿದರೆ, ಪರಿಶೀಲನೆ ಮುಗಿದ ನಂತರ ಸಂಪೂರ್ಣ ಹಣವನ್ನು ವಾಪಸ್ ನೀಡುವುದಾಗಿ ಭರವಸೆ ನೀಡಿದ್ದರು.

ಇದನ್ನು ನಂಬಿದ ವೃದ್ಧ ದಂಪತಿ ಡಿಸೆಂಬರ್ 3 ಮತ್ತು 4 ರಂದು ತಮ್ಮ ನಿಶ್ಚಿತ ಠೇವಣಿಯಲ್ಲಿದ್ದ ಹಣವನ್ನು ಹಿಂಪಡೆದು, ಆರ್‌ಟಿಜಿಎಸ್ (RTGS) ಮೂಲಕ ಎರಡು ಕಂತುಗಳಲ್ಲಿ ಒಟ್ಟು 30 ಲಕ್ಷ ರೂ.ಗಳನ್ನು ವಂಚಕರ ಖಾತೆಗೆ ವರ್ಗಾಯಿಸಿದರು. ಹಣ ತಲುಪಿದ ತಕ್ಷಣ ವಂಚಕರು ಆರ್‌ಬಿಐ ಗವರ್ನರ್ ಮುದ್ರೆಯಿರುವ ನಕಲಿ ಪರಿಶೀಲನಾ ಪತ್ರವನ್ನು ವಾಟ್ಸ್ ಆಯಪ್‌ಗೆ ಕಳುಹಿಸಿ, ನಂತರ ಫೋನ್ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದರು. ಆಗ ತಾವು ಮೋಸ ಹೋಗಿರುವುದಾಗಿ ದಂಪತಿಗೆ ಅರಿವಾಗಿದೆ.

ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ ಕ್ರೈಮ್ ಬ್ರಾಂಚ್

ದಂಪತಿಯ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರ ಕ್ರೈಮ್ ಬ್ರಾಂಚ್ ತನಿಖೆ ಆರಂಭಿಸಿತು. ಆರು ತಿಂಗಳ ಸುದೀರ್ಘ ಹಣದ ವಹಿವಾಟು ಹಾದಿಯನ್ನು ಹಿಂಬಾಲಿಸಿದ ಪೊಲೀಸರಿಗೆ ಮೇ ತಿಂಗಳಿನಲ್ಲಿ ಪ್ರಮುಖ ಸುಳಿವು ಸಿಕ್ಕಿತು. ವಂಚನೆಯ ಹಣವು ಹರ್ಯಾಣದ ಫತೇಹಾಬಾದ್‌ನ ಸುನಿಲ್ ಸಿಂಗ್ಲಾ ಎಂಬಾತನ 'ಶ್ರೀ ಬಾಲಾಜಿ ಟ್ರ್ಯಾಕ್ಟರ್' ಎಂಬ ಕಂಪನಿಯ ಖಾತೆಗೆ ಜಮೆಯಾಗಿರುವುದು ಪತ್ತೆಯಾಯಿತು.

ಮೇ 11 ರಂದು ಸುನಿಲ್ ಸಿಂಗ್ಲಾನನ್ನು ಬಂಧಿಸಿದ ಪೊಲೀಸರು, ಆತನ ಖಾತೆಯನ್ನು ಹಲವು ಸೈಬರ್ ವಂಚನೆಗಳಿಗೆ ಬಳಸಿರುವುದನ್ನು ಬಹಿರಂಗಪಡಿಸಿದ್ದಾರೆ. ಕಮಿಷನ್ ಆಸೆಗೆ ಬಿದ್ದು ತನ್ನ ಖಾತೆಯನ್ನು ವಂಚಕರಿಗೆ ನೀಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಸದ್ಯ ಪೊಲೀಸರು ಸಂತ್ರಸ್ತ ದಂಪತಿಯ 15 ಲಕ್ಷ ರೂ. ಕಂತನ್ನು ತಡೆಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಅದರಲ್ಲಿ 12 ಲಕ್ಷ ರೂ.ಗಳನ್ನು ಮರುಪಾವತಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat