ಲಕ್ನೋ :ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿರುವ ಅಪರೂಪದ ಹಾಗೂ ಅಚ್ಚರಿಯ ಮದುವೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನಕ್ಕೆ ಹಾಗೂ ಚರ್ಚೆಗೆ ಕಾರಣವಾಗಿದೆ. ಒಂದೇ ಮಂಟಪದಲ್ಲಿ, ಒಂದೇ ವರನೊಂದಿಗೆ ಮೂವರು ಯುವತಿಯರು ಸಾಂಪ್ರದಾಯಿಕವಾಗಿ ಸಪ್ತಪದಿ ತುಳಿದು, ಮಾಂಗಲ್ಯ ಧಾರಣೆ ಮಾಡಿಸಿಕೊಳ್ಳುವ ದೃಶ್ಯಗಳು ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಈ ವಿಚಿತ್ರ ಕಲ್ಯಾಣದ ವಿಡಿಯೋಗಳನ್ನು ನೆಟ್ಟಿಗರು ಪರ-ವಿರೋಧದ ಚರ್ಚೆಯಲ್ಲಿ ತೊಡಗಿದ್ದಾರೆ.
ಅಮ್ರೋಹಾದ ಧೋರಿಯಾ ಗ್ರಾಮದ ಸರೋಜಾ, ಸಾವಿತ್ರಿ ಮತ್ತು ಸಂತೋಷ್ ಎಂಬ ಯುವತಿಯರು ವಿಕಾಸ್ ಅಲಿಯಾಸ್ ವಿಕ್ಕು ಎಂಬ ಯುವಕನನ್ನು ಮದುವೆಯಾಗಿದ್ದಾರೆ. ಈ ಪೈಕಿ ಇಬ್ಬರು ಸೋದರಿಯರಾದರೆ, ಮತ್ತೊಬ್ಬರು ಅವರ ಚಿಕ್ಕಮ್ಮ/ದೊಡ್ಡಮ್ಮನ ಮಗಳು. ವಿಕಾಸ್ ಈ ಯುವತಿಯರ ಸೋಷಿಯಲ್ ಮೀಡಿಯಾ ವೀಡಿಯೋಗಳಿಗೆ ಕ್ಯಾಮೆರಾಮ್ಯಾನ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಆರು ತಿಂಗಳಿನಿಂದ ಅವರ ವೀಡಿಯೋಗಳಲ್ಲಿ ಗಂಡನ ಪಾತ್ರದಲ್ಲೂ ನಟಿಸುತ್ತಿದ್ದ. ಆರಂಭದಲ್ಲಿ ನೆಟ್ಟಿಗರು ಇದನ್ನು ಕೇವಲ 'ರೀಲ್ಸ್'ಗಾಗಿ ಮಾಡಿದ ನಕಲಿ ಮದುವೆ ಎಂದು ಭಾವಿಸಿದ್ದರು. ಆದರೆ, ಕ್ಯಾಮೆರಾ ಮುಂದೆ ಬಂದ ನಾಲ್ವರೂ ಇದು ಯಾವುದೇ ನಾಟಕವಲ್ಲ, ಪರಸ್ಪರ ಒಪ್ಪಿಗೆಯಿಂದ ನಡೆದ ನಿಜವಾದ ಮದುವೆ ಎಂದು ಸ್ಪಷ್ಟಪಡಿಸಿದ್ದಾರೆ.
"ಬೇರೆಯಾಗಲು ಇಷ್ಟವಿಲ್ಲದೆ ಒಂದೇ ವರನಿಗೆ ಜೈ ಎಂದೆವು"
ಚಿಕ್ಕಂದಿನಿಂದಲೂ ಜೊತೆಯಾಗಿ ಬೆಳೆದ ನಮಗೆ ಮದುವೆಯಾಗಿ ಬೇರೆ ಬೇರೆ ಮನೆಗೆ ಹೋಗಲು ಇಷ್ಟವಿರಲಿಲ್ಲ ಎಂದು ಯುವತಿಯರು ಹೇಳಿಕೊಂಡಿದ್ದಾರೆ. "ಮನೆಯವರು ನಮಗೆ ಬೇರೆ ಬೇರೆ ಸಂಬಂಧ ಹುಡುಕಲು ಪ್ರಾರಂಭಿಸಿದಾಗ ನಾವು ಮಾನಸಿಕವಾಗಿ ಕುಗ್ಗಿಹೋದೆವು. ಒಂದು ಹಂತದಲ್ಲಿ ಪ್ರಾಣ ಕಳೆದುಕೊಳ್ಳುವ ಆಲೋಚನೆಯೂ ಬಂದಿತ್ತು. ನಂತರ, ಸಾಯುವ ಬದಲು ನಾವೆಲ್ಲರೂ ಪ್ರಾಪ್ತ ವಯಸ್ಕರಾಗಿರುವುದರಿಂದ ಒಬ್ಬನೇ ಯುವಕನನ್ನು ಮದುವೆಯಾಗಿ ಒಂದೇ ಮನೆಯಲ್ಲಿ ಜೀವಿಸಲು ನಿರ್ಧರಿಸಿದೆವು" ಎಂದು ಯುವತಿಯರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ವರ ವಿಕಾಸ್ ಕೂಡ ಅವರ ಬಾಂಧವ್ಯವನ್ನು ಗೌರವಿಸಿ ಈ ಮದುವೆಗೆ ಒಪ್ಪಿಗೆ ನೀಡಿದ್ದಾಗಿ ತಿಳಿಸಿದ್ದಾನೆ.
ಮಂದಿರ ಮಂಡಳಿಯ ಸ್ಪಷ್ಟನೆ ಮತ್ತು ಧಾರ್ಮಿಕ ಚರ್ಚೆ
ಹಾಸನ್‌ಪುರದ ಪ್ರಸಿದ್ಧ ಮಾ ಚಾಮುಂಡಾ ದೇವಾಲಯದಲ್ಲಿ ಈ ಮದುವೆ ನಡೆದಿದೆ ಎಂದು ಹೇಳಲಾಗುತ್ತಿದೆಯಾದರೂ, ದೇವಾಲಯದ ಆಡಳಿತ ಮಂಡಳಿ ಇದನ್ನು ಸಂಪೂರ್ಣವಾಗಿ ನಿರಾಕರಿಸಿದೆ. "ದೇವಾಲಯದಲ್ಲಿ ನವೀಕರಣ ಕೆಲಸ ನಡೆಯುತ್ತಿದ್ದಾಗ, ಅರ್ಚಕರಿಲ್ಲದ ಸಮಯದಲ್ಲಿ ಈ ವಿಡಿಯೋ ಶೂಟ್ ಮಾಡಲಾಗಿದೆ. ನಮ್ಮ ಸಮ್ಮುಖದಲ್ಲಿ ಯಾವುದೇ ಮದುವೆ ನಡೆದಿಲ್ಲ" ಎಂದು ದೇವಾಲಯದ ಸಿಬ್ಬಂದಿ ತಿಳಿಸಿದ್ದಾರೆ. ಇತ್ತ, ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿರುವವರಿಗೆ ತಿರುಗೇಟು ನೀಡಿರುವ ಸೋದರಿಯರು, "ಪೌರಾಣಿಕ ಕಾಲದಲ್ಲಿ ದಶರಥ ಮಹಾರಾಜನಿಗೆ ಮೂವರು ರಾಣಿಯರಿದ್ದದ್ದು ಅಪಚಾರವೇ?" ಎಂದು ಪ್ರಶ್ನಿಸಿದ್ದಾರೆ.
ಕಾನೂನು ಪ್ರಕಾರ ಈ ಮದುವೆ ಸಿಂಧುವೇ?
ಈ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಕಾನೂನಾತ್ಮಕ ಮತ್ತು ಸಾಮಾಜಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಆರಂಭವಾಗಿದೆ. ಭಾರತೀಯ ಹಿಂದೂ ವಿವಾಹ ಕಾಯ್ದೆ 1955ರ ಪ್ರಕಾರ ಬಹುಪತ್ನಿತ್ವಕ್ಕೆ ಕಟ್ಟುನಿಟ್ಟಾದ ನಿಷೇಧವಿದೆ. ಕಾಯ್ದೆಯ ಸೆಕ್ಷನ್ 5ರ ಪ್ರಕಾರ, ಮೊದಲ ಹೆಂಡತಿ ಬದುಕಿರುವಾಗ ಅಥವಾ ಅಧಿಕೃತ ವಿಚ್ಛೇದನವಾಗದೇ ಎರಡನೇ ಮದುವೆಯಾಗುವುದು ಕಾನೂನುಬಾಹಿರ. ಜೊತೆಗೆ, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 82ರ ಅಡಿಯಲ್ಲಿಯೂ ಇದು ಶಿಕ್ಷಾರ್ಹ ಅಪರಾಧವಾಗುತ್ತದೆ. ಹೀಗಾಗಿ, ಪರಸ್ಪರ ಸಮ್ಮತಿಯಿಂದ ನಡೆದಿದ್ದರೂ, ಕಾನೂನಿನ ದೃಷ್ಟಿಯಲ್ಲಿ ಈ ಮದುವೆಗೆ ಮಾನ್ಯತೆ ಸಿಗುವುದಿಲ್ಲ.

