Dailyhunt Logo
  • Light mode
    Follow system
    Dark mode
    • Play Story
    • App Story

"ಪೊಲೀಸರಿಂದಲೇ ಡೀಲ್ ಬಂದಿದೆ" ಎಂದು ತಂದೆ-ಮಗನ ಮೇಲೆ ಹಲ್ಲೆ - ಪುಂಡರ ವಿರುದ್ದ FIR!

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಪೊಲೀಸರ ಮೇಲೆಯೇ ಗಂಭೀರ ಆರೋಪ ಕೇಳಿಬಂದಿದ್ದು, ಪೊಲೀಸರಿಂದಲೇ ಡೀಲ್ ಪಡೆದು ತಂದೆ-ಮಗನ ಮೇಲೆ ಯುವಕರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಈ ಘಟನೆ ಪೊಲೀಸ್ ಇಲಾಖೆಯ ಮೇಲೆಯೇ ಅನುಮಾನ ಮೂಡಿಸಿದ್ದು, ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಾಗಿದೆ.

ಮಂಜುನಾಥ್ ಹಾಗೂ ಅವರ ಪುತ್ರ ವಿಶ್ವನಾಥ್ ಎಂಬವರ ಮೇಲೆ ದುಷ್ಕರ್ಮಿಗಳು ಲಾಂಗ್ ಮತ್ತು ಕಟ್ಟಿಗೆಯಿಂದ ದಾಳಿ ನಡೆಸಿದ್ದಾರೆ. ಕೊಲೆ ಪ್ರಕರಣವೊಂದರ ತನಿಖೆ ವೇಳೆ ವಿಶ್ವನಾಥ್ ಕ್ರೈಮ್ ಸ್ಪಾಟ್‌ನಲ್ಲಿ ಇದ್ದಾನೆಯೇ ಎಂಬ ಅನುಮಾನದಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಪ್ರಕರಣದಲ್ಲಿ ಯಾವುದೇ ಪಾತ್ರ ಇಲ್ಲ ಎಂಬುದು ಗೊತ್ತಾದ ನಂತರ ವಿಶ್ವನಾಥ್‌ನನ್ನು ಪೊಲೀಸರು ಬಿಡುಗಡೆ ಮಾಡಿದ್ದರು ಎನ್ನಲಾಗಿದೆ.

ಆದರೆ, ಬಿಡುಗಡೆ ಮಾಡುವ ವೇಳೆ ಕೆಲ ಪೊಲೀಸರು ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದರು ಎಂಬ ಆರೋಪ ಕೇಳಿಬಂದಿದೆ. ನಂತರ ವಿಶ್ವನಾಥ್ ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಪುತ್ರ ಎಂಬುದು ತಿಳಿಯುತ್ತಿದ್ದಂತೆ ಪೊಲೀಸರು ಬಿಟ್ಟು ಕಳಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಾದ ಕೆಲವೇ ದಿನಗಳಲ್ಲಿ ವಿಶ್ವನಾಥ್ ಮನೆ ಸಮೀಪ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಯುವಕರು ಮಾರಕಾಸ್ತ್ರಗಳೊಂದಿಗೆ ದಾಳಿ ನಡೆಸಿದ್ದಾರೆ. "ಪೊಲೀಸರಿಂದ ಡೀಲ್ ಬಂದಿದೆ" ಎಂದು ಹೇಳುತ್ತಲೇ ವಿಶ್ವನಾಥ್ ಹಾಗೂ ಅವರ ತಂದೆ ಮಂಜುನಾಥ್ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಯಲ್ಲಿ ಲಾಂಗ್ ಹಾಗೂ ಕಟ್ಟಿಗೆಯನ್ನು ಬಳಸಲಾಗಿದ್ದು, ಇಬ್ಬರೂ ಗಾಯಗೊಂಡಿದ್ದಾರೆ.

ಘಟನೆ ಬಳಿಕ ಇದೀಗ ಪೊಲೀಸರೇ ಯುವಕರಿಗೆ ಹೇಳಿ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿದೆ. ಗೋವಿಂದರಾಜನಗರ ಪೊಲೀಸ್ ಠಾಣೆಯ ಪ್ರಸನ್ನ ಹಾಗೂ ನೇತಾಜಿ ಎಂಬ ಪೊಲೀಸ್ ಸಿಬ್ಬಂದಿಗಳ ಮೇಲೆ ಡೀಲ್ ಕೊಟ್ಟ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಸದ್ಯ ಹಲ್ಲೆ ನಡೆಸಿ ಪರಾರಿಯಾಗಿರುವ ಪ್ರಜ್ವಲ್ ಹಾಗೂ ಮತ್ತೊಬ್ಬ ಆರೋಪಿಯ ವಿರುದ್ಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ : ಮಂಡ್ಯದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat