ನವದೆಹಲಿ : ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಆರಂಭಗೊಂಡ ಮೊದಲ ದಿನವೇ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ಸ್ವಯಂಪ್ರೇರಿತರಾಗಿ ಮುಂದಾಗಿದ್ದರು ಎಂದು ಬಿಜೆಪಿ ಹಿರಿಯ ನಾಯಕ ಕೈಲಾಶ್ ವಿಜಯವರ್ಗೀಯ ಹೇಳಿದ್ದಾರೆ.
ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಮಧ್ಯಪ್ರದೇಶದ ಸಚಿವ ಕೈಲಾಶ್ ವಿಜಯವರ್ಗೀಯ ಈ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇಂದೋರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮೇಂದ್ರ ಪ್ರಧಾನ್ ಅವರೊಂದಿಗಿನ ದಶಕಗಳ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.
ವಿದ್ಯಾರ್ಥಿ ರಾಜಕಾರಣದ ದಿನಗಳಿಂದಲೂ ಅವರ ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ಹತ್ತಿರದಿಂದ ಕಂಡಿರುವುದಾಗಿ ಹೇಳಿದ ಅವರು, "ಚಳವಳಿ ಆರಂಭವಾದ ಮೊದಲ ದಿನವೇ ಪ್ರಧಾನ್ ಅವರು ಪಕ್ಷದ ಅಧ್ಯಕ್ಷರಿಗೆ ಕರೆ ಮಾಡಿ, 'ನನ್ನ ರಾಜೀನಾಮೆಯಿಂದ ಅನುಕೂಲವಾಗುವುದಾದರೆ ನಾನು ಹುದ್ದೆ ತೊರೆಯಲು ಸಿದ್ಧ' ಎಂದು ತಿಳಿಸಿದ್ದರು. ಆದರೆ ಆಗ ಪಕ್ಷದ ವರಿಷ್ಠರು ಅದಕ್ಕೆ ಒಪ್ಪಿರಲಿಲ್ಲ. ಮುಂದೆ ಪರಿಸ್ಥಿತಿ ತೀವ್ರಗೊಂಡು ಪಕ್ಷ ನಿರ್ಧಾರ ಕೈಗೊಂಡ ತಕ್ಷಣ, ಯಾವುದೇ ಹಿಂಜರಿಕೆಯಿಲ್ಲದೆ ಒಂದೇ ಕ್ಷಣದಲ್ಲಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದು ಒಬ್ಬ ಪಕ್ಷದ ಕಾರ್ಯಕರ್ತನ ನೈಜ ಲಕ್ಷಣ" ಎಂದು ಅವರು ಕೊಂಡಾಡಿದ್ದಾರೆ.
"ದೇಶವಿರೋಧಿ, ವಿದೇಶಿ ಶಕ್ತಿಗಳ ಹುನ್ನಾರ ವಿಫಲ"
ಪ್ರಧಾನ್ ಅವರ ರಾಜೀನಾಮೆ ನಿರ್ಧಾರವನ್ನು ಸಮರ್ಥಿಸಿಕೊಂಡ ವಿಜಯವರ್ಗೀಯ, ಈ ನಿರ್ಗಮನದ ಮೂಲಕ ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಸಂಚು ರೂಪಿಸಿದ್ದ ದೇಶವಿರೋಧಿ ಹಾಗೂ ವಿದೇಶಿ ಶಕ್ತಿಗಳ ಯತ್ನ ಸಂಪೂರ್ಣ ವಿಫಲವಾಗಿದೆ ಎಂದಿದ್ದಾರೆ. ನೆರೆಯ ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ನಡೆದಂತಹ ಹಿಂಸಾತ್ಮಕ ಪರಿಸ್ಥಿತಿಯನ್ನು ಭಾರತದಲ್ಲೂ ಮರುಸೃಷ್ಟಿಸಿ, ದೇಶವನ್ನು ಅಸ್ಥಿರಗೊಳಿಸಲು ಕೆಲ ಶಕ್ತಿಗಳು ಪ್ರತಿಭಟನೆಯನ್ನು ಬಳಸಿಕೊಳ್ಳಲು ಸಂಚು ರೂಪಿಸಿದ್ದವು. ವಿದ್ಯಾರ್ಥಿಗಳ ಚಳವಳಿಯನ್ನು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯುವ ಉದ್ದೇಶದಿಂದಲೇ ಪ್ರಧಾನ್ ಈ ಹೆಜ್ಜೆ ಇಟ್ಟಿದ್ದಾರೆ ಎಂದು ಅವರು ವಿಶ್ಲೇಷಿಸಿದ್ದಾರೆ.
ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ
ಇದೇ ವೇಳೆ 'ಕಾಕ್ರೋಚ್ ಜನತಾ ಪಾರ್ಟಿ' (CJP) ನೇತೃತ್ವದಲ್ಲಿ ನಡೆದ ಯುವಜನರ ಪ್ರತಿಭಟನೆಯನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಯತ್ನಿಸಿದ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳ ವಿರುದ್ಧ ವಿಜಯವರ್ಗೀಯ ತೀವ್ರ ವಾಗ್ದಾಳಿ ನಡೆಸಿದರು. "ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಸೋಲಿನ ನಂತರ ಸಂಪೂರ್ಣವಾಗಿ ನೈತಿಕ ಸ್ಥೈರ್ಯ ಕಳೆದುಕೊಂಡಿದ್ದ ವಿರೋಧ ಪಕ್ಷಗಳು, ನಿರಾಶೆಯ ವಾತಾವರಣದಲ್ಲಿದ್ದಾಗ ಸಿಜೆಪಿ ಪ್ರತಿಭಟನೆಯಲ್ಲಿ ತಮಗೆ ಬೇಕಾದ ರಾಜಕೀಯ ಅವಕಾಶವನ್ನು ಕಂಡುಕೊಳ್ಳಲು ಯತ್ನಿಸಿದವು. ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಹೋರಾಟ ಪ್ರಾರಂಭಿಸಿದರೆ, ಕಾಂಗ್ರೆಸ್ ಹಿಂಬಾಗಿಲ ಮೂಲಕ ಅವರ ಹಿಂದೆ ನಿಂತು ರಾಜಕೀಯ ಮಾಡಲು ನೋಡಿತು" ಎಂದು ಅವರು ಆರೋಪಿಸಿದ್ದಾರೆ.

