Dailyhunt Logo
  • Light mode
    Follow system
    Dark mode
    • Play Story
    • App Story
ಸಂಧಾನಕ್ಕೆ ತೆರಳುತ್ತಿದ್ದ ಇರಾನ್ ನಾಯಕರ ಹತ್ಯೆಗೆ ಇಸ್ರೇಲ್ ಸಂಚು : ಮಧ್ಯಪ್ರವೇಶಿಸಿ ರಕ್ಷಿಸಿದ ಅಮೆರಿಕ!

ಸಂಧಾನಕ್ಕೆ ತೆರಳುತ್ತಿದ್ದ ಇರಾನ್ ನಾಯಕರ ಹತ್ಯೆಗೆ ಇಸ್ರೇಲ್ ಸಂಚು : ಮಧ್ಯಪ್ರವೇಶಿಸಿ ರಕ್ಷಿಸಿದ ಅಮೆರಿಕ!

Karnatakanewsbeat 2 weeks ago

ವಾಷಿಂಗ್ಟನ್ : ಪಶ್ಚಿಮ ಏಷ್ಯಾದ ಯುದ್ಧ ಅಂತ್ಯಕ್ಕೆ ಶಾಂತಿ ಮಾತುಕತೆ ಪ್ರಯತ್ನ ನಡೆದಿರುವಾಗಲೇ, ಇರಾನ್‌ನ ಉನ್ನತ ರಾಜತಾಂತ್ರಿಕರು ಮತ್ತು ಸಂಧಾನಕಾರರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ರೂಪಿಸಿದ್ದ ರಹಸ್ಯ ಹತ್ಯೆ ಯೋಜನೆಯನ್ನು ಅಮೆರಿಕ ಜಾಣ್ಮೆಯಿಂದ ವಿಫಲಗೊಳಿಸಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಮತ್ತು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಘಾಲಿಬಾಫ್ ಅವರ ಹತ್ಯೆಗೆ ಇಸ್ರೇಲ್ ಸಂಚು ರೂಪಿಸಿತ್ತು. ಆದರೆ ಪ್ರಸ್ತುತ ನಡೆಯುತ್ತಿರುವ ಕದನ ವಿರಾಮ ಮಾತುಕತೆಗಳು ಹಳಿತಪ್ಪದಂತೆ ತಡೆಯಲು ಅಮೆರಿಕವು ಮಧ್ಯಪ್ರಾಚ್ಯದ ತನ್ನ ಮಿತ್ರರಾಷ್ಟ್ರಗಳ ಮೂಲಕ ಇರಾನ್‌ಗೆ ಮುನ್ನೆಚ್ಚರಿಕೆ ಸಂದೇಶ ರವಾನಿಸಿ ಇಬ್ಬರು ನಾಯಕರನ್ನು ರಕ್ಷಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ಹೊರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡುವುದು ಮತ್ತು ಟೆಹ್ರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಮುಂದಿನ ಹಂತದ ಮಾತುಕತೆಗಳಿಗೆ ಚೌಕಟ್ಟನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಇರಾನ್ ಉನ್ನತ ನಾಯಕರಾದ ಅರಾಗ್ಚಿ ಮತ್ತು ಘಾಲಿಬಾಫ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಒಂದು ವೇಳೆ ಇಸ್ರೇಲ್ ಈ ಇಬ್ಬರು ನಾಯಕರನ್ನು ಹತ್ಯೆ ಮಾಡಿದ್ದರೆ, ಪ್ರಾದೇಶಿಕ ಶಾಂತಿ ಮಾತುಕತೆಗಳು ಸಂಪೂರ್ಣವಾಗಿ ಹಳಿತಪ್ಪಿ ಗಲ್ಫ್ ವಲಯದಲ್ಲಿ ಮತ್ತೊಮ್ಮೆ ಭೀಕರ ಯುದ್ಧ ಆರಂಭವಾಗುತ್ತಿತ್ತು ಎಂಬ ಆತಂಕ ಅಮೆರಿಕವನ್ನು ಕಾಡಿತ್ತು. ಹೀಗಾಗಿಯೇ ಅಮೆರಿಕ ಈ ರಹಸ್ಯ ಕಾರ್ಯಾಚರಣೆಗೆ ಬ್ರೇಕ್ ಹಾಕಿದೆ.

ಇಸ್ರೇಲ್‌ನ ಭೀಕರ ಹತ್ಯಾ ತಂತ್ರ

ಯುದ್ಧದ ಆರಂಭದಿಂದಲೂ ಇರಾನ್‌ನ ಪ್ರಮುಖ ನಾಯಕತ್ವವನ್ನು ಸದೆಬಡಿಯುವುದು ಇಸ್ರೇಲ್‌ನ ಪ್ರಮುಖ ಕಾರ್ಯತಂತ್ರವಾಗಿದೆ. ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯಿಂದ ಹಿಡಿದು ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯದರ್ಶಿ ಅಲಿ ಲಾರಿಜಾನಿ ಅವರವರೆಗೆ ಈಗಾಗಲೇ 50ಕ್ಕೂ ಹೆಚ್ಚು ಉನ್ನತ ನಾಯಕರನ್ನು ಇಸ್ರೇಲ್ ಪಡೆಗಳು ಗುರಿಯಾಗಿಸಿ ಹತ್ಯೆಗೈದಿವೆ. ಅಮೆರಿಕದ ಗುಪ್ತಚರ ಮಾಹಿತಿಯನ್ನು ಬಳಸಿಕೊಂಡು ಇಸ್ರೇಲ್ ಈ ದಾಳಿಗಳನ್ನು ನಡೆಸುತ್ತಿತ್ತಾದರೂ, ರಾಜತಾಂತ್ರಿಕ ಮಾತುಕತೆ ನಡೆಸಬಲ್ಲ ಇರಾನ್‌ನ ಉದಾರವಾದಿ ನಾಯಕರನ್ನೂ ಇಸ್ರೇಲ್ ಹತ್ಯೆ ಮಾಡುತ್ತಿರುವುದು ಅಮೆರಿಕದ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿಂದೆ ಸಂಧಾನ ತಂಡದ ಭಾಗವಾಗಿದ್ದ ಅಲಿ ಲಾರಿಜಾನಿ ಮತ್ತು ಮಾಜಿ ವಿದೇಶಾಂಗ ಸಚಿವ ಕಮಾಲ್ ಖರಾಜಿ ಅವರನ್ನು ಇಸ್ರೇಲ್ ವಾಯುದಾಳಿಯಲ್ಲಿ ಕೊಂದು ಹಾಕಿತ್ತು.

ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದ ಘಾಲಿಬಾಫ್

ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ಮಾರ್ಚ್ ತಿಂಗಳಿನಲ್ಲೇ ಇಸ್ರೇಲ್‌ನ ಹಿಟ್-ಲಿಸ್ಟ್‌ನಲ್ಲಿ ಅರಾಗ್ಚಿ ಮತ್ತು ಘಾಲಿಬಾಫ್ ಹೆಸರೂ ಸೇರಿತ್ತು. ಆದರೆ ಟ್ರಂಪ್ ಆಡಳಿತದ ತೀವ್ರ ಒತ್ತಡದ ನಂತರ ಇಸ್ರೇಲ್ ತಾತ್ಕಾಲಿಕವಾಗಿ ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿತ್ತು. ಇರಾನ್ ಸಂಸತ್ತಿನ ಸ್ಪೀಕರ್ ಘಾಲಿಬಾಫ್ ಅವರು ಕಳೆದ ವರ್ಷ ಜೂನ್‌ನಲ್ಲಿ ನಡೆದ ಯುದ್ಧದ ವೇಳೆ ಮತ್ತು ಈ ವರ್ಷ ನಡೆದ ಸಂಘರ್ಷದ ಸಂದರ್ಭದಲ್ಲಿ ಇಸ್ರೇಲ್‌ನ ಮಾರಣಾಂತಿಕ ದಾಳಿಯಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಭೂಗತ ಬಂಕರ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಘಾಲಿಬಾಫ್ ಅವರನ್ನು ಇರಾನ್ ಅಧಿಕಾರಿಗಳು ಅತ್ಯಂತ ಸಾಹಸದಿಂದ ರಕ್ಷಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ವಾಯುಪಡೆಯಿಂದ ರಕ್ಷಣೆ

ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರನ್ನು ಭೇಟಿಯಾಗಲು ಇರಾನ್ ನಿಯೋಗವು ಇಸ್ಲಾಮಾಬಾದ್‌ಗೆ ಪ್ರಯಾಣ ಬೆಳೆಸಿದಾಗ ಭದ್ರತೆ ಮತ್ತಷ್ಟು ಕಠಿಣವಾಗಿತ್ತು. ಇಸ್ರೇಲ್ ಯಾವುದೇ ರಹಸ್ಯ ಕಾರ್ಯಾಚರಣೆ ನಡೆಸದಂತೆ ಪಾಕಿಸ್ತಾನ ಮತ್ತು ಕತಾರ್ ಮೂಲಕ ಅಮೆರಿಕದಿಂದ ಇರಾನ್ ಭರವಸೆ ಪಡೆದಿತ್ತು. ಈ ಪ್ರವಾಸದ ವೇಳೆ ಇರಾನ್ ವಿಮಾನಕ್ಕೆ ಪಾಕಿಸ್ತಾನದ ಯುದ್ಧ ವಿಮಾನಗಳು ವಿಶೇಷ ರಕ್ಷಣೆ ನೀಡಿದ್ದವು. ಆದರೆ, ಇಸ್ಲಾಮಾಬಾದ್‌ನಿಂದ ಟೆಹ್ರಾನ್‌ಗೆ ವಾಪಸಾಗುವಾಗ ಇಸ್ರೇಲ್‌ನಿಂದ ತೀವ್ರ ಭದ್ರತಾ ಭೀತಿ ಎದುರಾದ ಕಾರಣ, ಇರಾನ್ ನಿಯೋಗದ ವಿಮಾನವನ್ನು ಗಡಿಭಾಗದ ಮಶ್ಹದ್ ನಗರದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ನಂತರ ನಾಯಕರು ಅಲ್ಲಿಂದ 8 ಗಂಟೆಗಳ ಕಾಲ ರಸ್ತೆ ಮಾರ್ಗದ ಮೂಲಕ ಟೆಹ್ರಾನ್ ತಲುಪಬೇಕಾಯಿತು. ಈ ಎಲ್ಲಾ ಅಪಾಯಗಳ ನಡುವೆಯೂ ಉಭಯ ನಾಯಕರು ಕತಾರ್, ಸ್ವಿಜರ್ಲೆಂಡ್ ಮತ್ತು ಇತ್ತೀಚೆಗೆ ಭಾರತದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲೂ ಭಾಗವಹಿಸಿ ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.

ಅಮೆರಿಕ -ಇಸ್ರೇಲ್ ಭಿನ್ನಾಭಿಪ್ರಾಯ

ಈ ಬೆಳವಣಿಗೆಯು ಯುದ್ಧದ ವಿಚಾರದಲ್ಲಿ ಅಮೆರಿಕ ಮತ್ತು ಇಸ್ರೇಲ್‌ನ ಭಿನ್ನ ಆಲೋಚನೆಗಳನ್ನು ಬಹಿರಂಗಪಡಿಸಿದೆ. ಅಮೆರಿಕವು ಹೇಗಾದರೂ ಮಾಡಿ ಶಾಂತಿ ಒಪ್ಪಂದ ಏರ್ಪಡಿಸಲು ಶ್ರಮಿಸುತ್ತಿದ್ದರೆ, ಇಸ್ರೇಲ್ ಮಾತ್ರ ಯುದ್ಧವನ್ನು ಮುಂದುವರಿಸಲು ಬಯಸುತ್ತಿದೆ. ಇರಾನ್‌ನಲ್ಲಿ ಆಡಳಿತ ಬದಲಾವಣೆ ತರುವುದು, ಅಲ್ಲಿನ ಪ್ರಾದೇಶಿಕ ಸೇನೆಗಳನ್ನು ನಾಶಪಡಿಸುವುದು ಮತ್ತು ಇರಾನ್‌ನ ಕ್ಷಿಪಣಿ ಯೋಜನೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವುದು ಇಸ್ರೇಲ್‌ನ ಮುಖ್ಯ ಉದ್ದೇಶವಾಗಿದೆ. ಈಗ ಕದನ ವಿರಾಮ ಘೋಷಣೆಯಾದರೆ ಇರಾನ್‌ಗೆ ಬಿಲಿಯನ್ ಗಟ್ಟಲೆ ಹಣ ಹರಿದುಬರಲಿದ್ದು, ಅದು ಮತ್ತೆ ಬಲಿಷ್ಠವಾಗಬಹುದು ಎಂಬುದು ಇಸ್ರೇಲ್ ಆತಂಕವಾಗಿದೆ. ಆದರೆ ಪ್ರಾದೇಶಿಕ ಸ್ಥಿರತೆಗಾಗಿ ಅಮೆರಿಕ ಇಸ್ರೇಲ್‌ನ ಆಕ್ರಮಣಕಾರಿ ಹೆಜ್ಜೆಗೆ ಸದ್ಯಕ್ಕೆ ಬ್ರೇಕ್ ಹಾಕಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat