Dailyhunt Logo
  • Light mode
    Follow system
    Dark mode
    • Play Story
    • App Story
ಟೆಂಡರ್ ಕ್ರಾಂತಿ : ಶೇ.40ರ ಕಮಿಷನ್ ದಂಧೆಗೆ ಸಿಎಂ ವಿಜಯ್ ಬ್ರೇಕ್.. ತಮಿಳುನಾಡಿಗೆ ಕೋಟ್ಯಂತರ ರೂ. ಉಳಿತಾಯ!

ಟೆಂಡರ್ ಕ್ರಾಂತಿ : ಶೇ.40ರ ಕಮಿಷನ್ ದಂಧೆಗೆ ಸಿಎಂ ವಿಜಯ್ ಬ್ರೇಕ್.. ತಮಿಳುನಾಡಿಗೆ ಕೋಟ್ಯಂತರ ರೂ. ಉಳಿತಾಯ!

Karnatakanewsbeat 2 weeks ago

ಚೆನ್ನೈ : ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ (TVK) ಸರ್ಕಾರವು ಸಾರ್ವಜನಿಕ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ತಂದಿರುವ ಐತಿಹಾಸಿಕ ಪಾರದರ್ಶಕತೆಯು ರಾಜ್ಯದ ಬೊಕ್ಕಸಕ್ಕೆ ಭಾರಿ ಪ್ರಮಾಣದ ಹಣವನ್ನು ಉಳಿಸುತ್ತಿದೆ. ಮೇ 10ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೇ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಒತ್ತು ನೀಡಿದ್ದ ಮುಖ್ಯಮಂತ್ರಿ ವಿಜಯ್, ಇಲಾಖೆಗಳ ಸಣ್ಣಪುಟ್ಟ ನಾಗರಿಕ ಕಾಮಗಾರಿಗಳನ್ನೂ ಮುಕ್ತ ಜಾಗತಿಕ ಸ್ಪರ್ಧಾತ್ಮಕ ಟೆಂಡರ್‌ ಮೂಲಕವೇ ನಡೆಸುವಂತೆ ಸೂಚಿಸಿದ್ದರು.

ಇದರ ಪರಿಣಾಮವಾಗಿ ಗುತ್ತಿಗೆದಾರರು ಸರ್ಕಾರಿ ಅಂದಾಜು ದರಕ್ಕಿಂತ ಅತ್ಯಂತ ಕಡಿಮೆ ಮೊತ್ತಕ್ಕೆ ಬಿಡ್ ಮಾಡುತ್ತಿದ್ದು, ರಾಜ್ಯದ ಖಜಾನೆಗೆ ಭಾರೀ ಪ್ರಮಾಣದಲ್ಲಿ ಲಾಭವಾಗುತ್ತಿದೆ ಎನ್ನಲಾಗಿದೆ.

ಕಮಿಷನ್ ಮುಕ್ತ ವ್ಯವಸ್ಥೆಯಿಂದ ಕುಸಿದ ಟೆಂಡರ್ ದರ

ವಿಜಯ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಒಂದು ತಿಂಗಳಲ್ಲೇ ಸಾರ್ವಜನಿಕ ಕಾಮಗಾರಿ ಇಲಾಖೆಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿದೆ. ಈ ಹಿಂದೆ ನಡೆಯುತ್ತಿದ್ದ ಒಳ ಒಪ್ಪಂದಗಳು ಹಾಗೂ ಕಮಿಷನ್ ಆಧಾರಿತ ಟೆಂಡರ್ ಹಂಚಿಕೆಗೆ ವಿಜಯ್ ಸಂಪೂರ್ಣ ಬ್ರೇಕ್ ಹಾಕಿದ್ದಾರೆ. ಗ್ರೇಟರ್ ಚೆನ್ನೈ ಕಾರ್ಪೊರೇಷನ್ (GCC) ಇತ್ತೀಚೆಗೆ ನಡೆಸಿದ ರಸ್ತೆ ದುರಸ್ತಿ ಕಾಮಗಾರಿಗಳ ಟೆಂಡರ್‌ನಲ್ಲಿ ಗುತ್ತಿಗೆದಾರರು ನಿಗದಿಗಿಂತ ಶೇ.25ರಿಂದ 30ರಷ್ಟು ಕಡಿಮೆ ದರವನ್ನು ಉಲ್ಲೇಖಿಸಿದ್ದಾರೆ. ಈ ಹಿಂದೆ ಇದೇ ಕಾಮಗಾರಿಗಳಿಗೆ ಅಂದಾಜು ವೆಚ್ಚಕ್ಕಿಂತ ಶೇ.10ರಷ್ಟು ಹೆಚ್ಚಿನ ಹಣವನ್ನು ಸರ್ಕಾರಗಳು ಪಾವತಿಸುತ್ತಿದ್ದವು ಎಂದು ಗ್ರೇಟರ್ ಚೆನ್ನೈ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಮರಾವ್ ತಿಳಿಸಿದ್ದಾರೆ.

25 ಲಕ್ಷದ ಯೋಜನೆ ಕೇವಲ 16 ಲಕ್ಷಕ್ಕೆ ಪೂರ್ಣ!

ಅಂಬತ್ತೂರು ವಲಯದಲ್ಲಿ ನಡೆದ ರಸ್ತೆ ಅಭಿವೃದ್ಧಿ ಕಾಮಗಾರಿಯೊಂದಕ್ಕೆ ಸರ್ಕಾರ 25 ಲಕ್ಷ ರೂ. ಅಂದಾಜು ವೆಚ್ಚ ನಿಗದಿಪಡಿಸಿತ್ತು. ಈ ಮುಕ್ತ ಟೆಂಡರ್‌ನಲ್ಲಿ 9 ಗುತ್ತಿಗೆದಾರರು ಭಾಗವಹಿಸಿದ್ದು, ಈ ಪೈಕಿ ಒಬ್ಬರನ್ನು ಹೊರತುಪಡಿಸಿ ಉಳಿದ ಎಂಟು ಮಂದಿ ಕಡಿಮೆ ದರಕ್ಕೆ ಬಿಡ್ ಮಾಡಿದ್ದರು. ಅಂತಿಮವಾಗಿ ಶೇ. 25.9ರಷ್ಟು ಕಡಿಮೆ ದರ ಅಂದರೆ ಕೇವಲ 16 ರಿಂದ 17 ಲಕ್ಷ ರೂ.ಗೆ ಗುತ್ತಿಗೆದಾರರೊಬ್ಬರು ಈ ಯೋಜನೆಯನ್ನು ಪಡೆದುಕೊಂಡಿದ್ದಾರೆ. ಇದರಿಂದ ಒಂದೇ ಒಂದು ಟೆಂಡರ್‌ನಲ್ಲಿ ಪಾಲಿಕೆಗೆ 9 ಲಕ್ಷ ರೂ. ಉಳಿತಾಯವಾಗಿದೆ. ಇದೇ ಮಾದರಿಯಲ್ಲಿ ಶೋಲಿಂಗನಲ್ಲೂರ್‌ನಲ್ಲಿ ಶೇ.36ರಷ್ಟು ಹಾಗೂ ತೊಂಡಿಯಾರ್‌ಪೇಟೆಯಲ್ಲಿ ಶೇ.25ರಷ್ಟು ಕಡಿಮೆ ದರಕ್ಕೆ ಗುತ್ತಿಗೆದಾರರು ಬಿಡ್ ಸಲ್ಲಿಸಿದ್ದಾರೆ.

ಹಿಂದಿನ ಸರ್ಕಾರಗಳ ಭ್ರಷ್ಟಾಚಾರ ಬಯಲು

ಈ ಹಠಾತ್ ದರ ಕಡಿತವು ಹಿಂದಿನ ಸರ್ಕಾರಗಳ ಅವಧಿಯಲ್ಲಿ ಯೋಜನೆಗಳ ವೆಚ್ಚವನ್ನು ಎಷ್ಟು ಪ್ರಮಾಣದಲ್ಲಿ ಅತಿಯಾಗಿ ಬಿಂಬಿಸಲಾಗುತ್ತಿತ್ತು ಎಂಬುದನ್ನು ಬಹಿರಂಗಪಡಿಸಿದೆ. ಈ ಕುರಿತು ಮಾತನಾಡಿರುವ ಲೋಕೋಪಯೋಗಿ ಮತ್ತು ಕ್ರೀಡಾ ಸಚಿವ ಆಧವ್ ಅರ್ಜುನ್, ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕೇಂದ್ರೀಕೃತ ಭ್ರಷ್ಟಾಚಾರ, ವ್ಯವಸ್ಥಿತ ನಿಯಮ ಉಲ್ಲಂಘನೆ ಮತ್ತು ಲಂಚದ ಹಾವಳಿ ಜೋರಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ. ಹಲವು ಪ್ರಕರಣಗಳಲ್ಲಿ ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿ ಕಾಮಗಾರಿ ನೀಡದೆ ವಂಚಿಸಲಾಗಿದೆ ಎಂದೂ ಅವರು ಹೇಳಿದ್ದಾರೆ. ಪ್ರಸ್ತುತ ವ್ಯವಸ್ಥೆಯಲ್ಲಿ ಯಾವುದೇ ಕಮಿಷನ್ ಅಥವಾ ಲಂಚಕ್ಕೆ ಅವಕಾಶವಿಲ್ಲ ಎಂದು ಜೂನ್ ಮೊದಲ ವಾರದಲ್ಲೇ ಸಚಿವರು ಸ್ಪಷ್ಟಪಡಿಸಿದ್ದರು.

ದೇಶಕ್ಕೆ ಮಾದರಿಯಾದ ವಿಜಯ್ ಆಡಳಿತ

ತಮಿಳುನಾಡಿನಲ್ಲಿ ನಡೆದಿರುವ ಈ ಆಡಳಿತಾತ್ಮಕ ಬದಲಾವಣೆಯು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. ಹಣಕಾಸು ತಜ್ಞ ವೆಂಕಟೇಶ್ವರ ರಾವ್ ಪಾತಕೋಟ ಮತ್ತು ರಾಜಕೀಯ ವಿಶ್ಲೇಷಕ ಮುತ್ತುಕೃಷ್ಣನ್ ದಂಡಪಾಣಿ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಗುತ್ತಿಗೆದಾರರು ಯಾವುದೇ ಖಾಸಗಿ ವ್ಯಕ್ತಿಗಳ ಜೇಬು ತುಂಬಿಸುವ ಅಗತ್ಯವಿಲ್ಲದ ಕಾರಣ, ಅವರು 25-30% ಕಡಿಮೆ ದರಕ್ಕೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ. ವಿಜಯ್ ಅವರು ಶೇ.40ರಷ್ಟು ಕಮಿಷನ್ ಸಂಸ್ಕೃತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡುವಲ್ಲಿ ಯಶಸ್ವಿಯಾದರೆ, ಅದು ಇಡೀ ಭಾರತಕ್ಕೆ ಮಾದರಿ ಆಡಳಿತವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಭ್ರಷ್ಟಾಚಾರ ವಿರೋಧಿ ಕ್ರಮಗಳು, ಮಾದಕ ದ್ರವ್ಯ ಮುಕ್ತ ಅಭಿಯಾನ ಮತ್ತು ಮಹಿಳಾ ಸುರಕ್ಷತೆಗೆ ಆದ್ಯತೆ ನೀಡುತ್ತಿರುವ ಸಿಎಂ ವಿಜಯ್ ಅವರ ಈ 'ಯೋಜನೆಗಳು' ದೀರ್ಘಕಾಲದವರೆಗೆ ಕಾಮಗಾರಿಗಳ ಗುಣಮಟ್ಟವನ್ನು ಹೇಗೆ ಕಾಯ್ದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

Dailyhunt
Disclaimer: This content has not been generated, created or edited by Dailyhunt. Publisher: Karnatakanewsbeat