ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ರೈತರು ಬೆಳೆದ ಬೆಳೆಗಳು ಆನೆಗಳ ದಾಳಿಗೆ ತುತ್ತಾಗುತ್ತಿವೆ. ಶಿವಮೊಗ್ಗ ತಾಲೂಕಿನ ಆಯನೂರು ಸಮೀಪದ ಸಿರಿಗೆರೆ, ಮಂಜರಿಕೊಪ್ಪ ಹಾಗೂ ಮಲೆಶಂಕರ ಭಾಗದಲ್ಲಿ ಕಾಡಾನೆಗಳ ಹಿಂಡು ನಿರಂತರವಾಗಿ ತೋಟ ಹಾಗೂ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡುತ್ತಿದೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಆನೆಗಳ ದಾಳಿ ಪದೇಪದೆ ನಡೆಯುತ್ತಿದ್ದು, ಭತ್ತ, ಅಡಿಕೆ ಹಾಗೂ ಜೋಳದ ಬೆಳೆಗಳು ನಾಶವಾಗಿವೆ. ಅಷ್ಟೇ ಅಲ್ಲದೆ, ತೋಟದಲ್ಲಿ ಅಳವಡಿಸಿದ್ದ ಬೋರ್‌ವೆಲ್ ಪೈಪ್‌ಗಳು, ಕೇಬಲ್‌ಗಳು ಹಾಗೂ ಪಂಪ್‌ಗಳಿಗೂ ಹಾನಿಯಾಗಿದೆ. ರಾತ್ರಿ ವೇಳೆ ಆನೆಗಳ ಭಯದಿಂದ ರೈತರು ಹೊಲಗದ್ದೆಗಳಿಗೆ ತೆರಳಲು ಹಿಂದೇಟು ಹಾಕುವಂತಾಗಿದೆ.
ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕಾಡಾನೆಗಳು ನಾಶಪಡಿಸುತ್ತಿರುವುದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ ರಕ್ಷಣೆಗಾಗಿ ರಾತ್ರಿ ಇಡೀ ಕಾವಲು ಕಾಯುತ್ತಿದ್ದರೂ ಆನೆಗಳ ಹಿಂಡು ದಾಳಿ ನಡೆಸುತ್ತಿರುವುದರಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ಇನ್ನೊಂದೆಡೆ, ಹಾಸನ ಭಾಗದಿಂದ 56 ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಯುತ್ತಿರುವುದು ಸ್ಥಳೀಯ ರೈತರ ಆತಂಕಕ್ಕೆ ಕಾರಣವಾಗಿದೆ. ಈ ಆನೆಗಳೂ ಈ ಭಾಗಕ್ಕೆ ಬಂದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂಬ ಭೀತಿ ರೈತರಲ್ಲಿದೆ.
ಆನೆಗಳ ಹಾವಳಿ ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆನೆ ಕಂದಕಗಳ ನಿರ್ಮಾಣ, ವಿದ್ಯುತ್ ಬೇಲಿ ಅಳವಡಿಕೆ ಸೇರಿದಂತೆ ಬೆಳೆ ರಕ್ಷಣೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕು. ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

