Dailyhunt Logo
  • Light mode
    Follow system
    Dark mode
    • Play Story
    • App Story
ಸಾಗರದ ಡೇರೆ ಹೂವಿಗೆ ಜಾಗತಿಕ ಮನ್ನಣೆ: ಭೌಗೋಳಿಕ ದಾಖಲೀಕರಣಕ್ಕೆ ಒತ್ತು

ಸಾಗರದ ಡೇರೆ ಹೂವಿಗೆ ಜಾಗತಿಕ ಮನ್ನಣೆ: ಭೌಗೋಳಿಕ ದಾಖಲೀಕರಣಕ್ಕೆ ಒತ್ತು

Klive News 1 hr ago

ಡೇರೆ ಹೂವುಗಳನ್ನು ಮಲೆನಾಡಿನಲ್ಲಿ ಅದರಲ್ಲೂ ಸಾಗರ ತಾಲೂಕಿನಲ್ಲಿ ಮಳೆಗಾಲದ ಅವಧಿಯಲ್ಲಿ ಹವ್ಯಾಸವಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.. ಇದರಲ್ಲಿ ವಿಶಿಷ್ಟವಾದ ಮತ್ತು ವಿಶೇಷವಾದ ನೂರಾರು ತಳಿಗಳಿದ್ದು ಭವಿಷ್ಯದ ದೃಷ್ಟಿಯಿಂದ ಇವೆಲ್ಲದರ ಭೌಗೋಳಿಕ ದಾಖಲೀಕರಣ ಮಾಡಬೇಕಾದ ಅವಶ್ಯಕತೆ ಇದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರೂ ಮತ್ತು ಸಸ್ಯ ವಿಜ್ಞಾನಿಗಳೂ ಆದ ಡಾ.

ನಾಗರಾಜ ಅಡಿವೆಪ್ಪನವರು ಡೇರೆ ಹೂವುಗಳ ಬೆಳೆಯುವುದು ಮತ್ತು ಮಾರಾಟ ಮಾಡುವ ವ್ಯಾಪಕವಾಗಿ ಇರುವ ಅವಕಾಶಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಸಾಗರ ತಾಲೂಕಿನ ಕವಲುಕೋಡಿನ ವೆಂಕಟೇಶ್ ಅವರ ಮನೆ ಅಂಗಳದಲ್ಲಿ ನಡೆದ ಆಸಕ್ತ ಡೇರೆ ಹೂ ಕೃಷಿಕರ ಸಂವಾದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಡೇರೆ ಹೂವಿನ ಕೃಷಿಯು ಮಲೆನಾಡಿನ, ಸಾಗರದ ಹೆಗ್ಗಳಿಕೆಯಾಗಿದ್ದು ಈ ಭಾಗದಲ್ಲಿ ಸಾವಿರಾರು ರೈತ ಮಹಿಳೆಯರು ನೂರಾರು ಜಾತಿಯ, ಪ್ರಬೇಧದ ಹೂವುಗಳನ್ನು ವರ್ಷಾನುಗಟ್ಟಲೆಯಿಂದ ಸಾಂಪ್ರದಾಯಿಕವಾಗಿ ತಮ್ಮ ಮನೆ ಅಂಗಳದಲ್ಲಿ ಬೆಳೆಯುತ್ತಾ ಬಂದಿದ್ದಾರೆ… ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ವ್ಯವಸ್ಥಿತವಾಗಿ, ವೈಜ್ಞಾನಿಕವಾಗಿ ಮಾಡಬೇಕಿದೆ ಎಂದು ಹೇಳಿದರು… ತಳಿ ಅಭಿವೃದ್ಧಿಯ ಜೊತೆಗೆ ಈಗಾಗಲೇ ಬೆಳೆವ ವಿಶೇಷ ಮತ್ತು ವಿಶಿಷ್ಟ ತಳಿಗಳನ್ನು ಬೆಳೆಗಾರರ ಹೆಸರಿನಲ್ಲಿ ನೋಂದಾವಣೆ ಮಾಡಬೇಕಾಗಿದೆ ಎಂದರು.. ಸಾಂಘಿಕವಾಗಿ ಇದರ ಕೃಷಿ ಮಾಡಿದಲ್ಲಿ ಇದು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಿ ಪಡೆಯಬಹುದಾಗಿದೆ ಎಂದರು… ವಿಶೇಷ ತಳಿಯ ಡೇರೆ ಹೂವುಗಳ ಗುರುತಿಸುವಿಕೆ, ನೋಂದಣಿ, ಸಸ್ಯಾಭಿವೃದ್ಧಿ ಮತ್ತು ಸಂಶೋಧನೆ ವಿಷಯದಲ್ಲಿ ಕೃಷಿಕರಿಗೆ ತಮ್ಮ ವಿಶ್ವ ವಿದ್ಯಾಲಯ ನೆರವಾಗಲಿದೆ ಎಂದರು.. ಸಂಬಂಧಿಸಿದ ಇಲಾಖೆ, ಮಲೆನಾಡು ಗಿಡ್ಡ ರೈತೋತ್ಪಾದಕ ಕಂಪನಿ ಮತ್ತು ಸ್ಥಳೀಯ ಸಂಸ್ಥೆಗಳ ಒಡಗೂಡಿ ಸಾಗರದ ಈ ವಿಶಿಷ್ಟ ಪುಷ್ಪ ಕೃಷಿಯನ್ನು ಜಾಗತಿಕವಾಗಿ ಬೆಳೆಸುವಲ್ಲಿ ತಮ್ಮ ವಿಶ್ವ ವಿದ್ಯಾಲಯ ಕೆಲಸ ಮಾಡಲಿದೆ ಎಂದು ಹೇಳಿದರು.

ತೋಟಗಾರಿಕೆ ಇಲಾಖೆಯ ಶ್ರೀ ಮಹಾಬಲೇಶ್ವರ ಮಾತನಾಡಿ ಡೇರೆ ಹೂವಿನ ಬೆಳೆಗಾರರಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಇಲಾಖೆಯು ಮುಂದಿನ ದಿನಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ಹೇಳಿದರು.

ವಿಷಯ ವಿಸ್ತರಣೆ ಮಾಡಿ ಮಾತನಾಡಿದ ಮಲೆನಾಡು ಗಿಡ್ಡ ರೈತೋತ್ಪಾದಕ ಕಂಪನಿಯ ಅಧ್ಯಕ್ಷ ನಾಗೇಂದ್ರ ಸಾಗರ್ ಮಾತನಾಡಿ ಮಲೆನಾಡಿನ ವಿಶೇಷ ಎನ್ನಿಸಿದ ಡೇರೇ ಹೂವು ಮಾತ್ರವಲ್ಲದೆ ದಾಸವಾಳ, ಸಂಪಿಗೆ, ಜಾಜಿ, ಮಲ್ಲಿಗೆ, ಸುರಿಗೆ ಇವೇ ಮುಂತಾದ ಹೂವುಗಳು ಕೃಷಿಗೆ ವಿಪುಲವಾದ ಅವಕಾಶಗಳಿವೆ.. ಆಸಕ್ತ ಮಹಿಳೆಯರಿಗೆ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಮತ್ತು ತರಬೇತಿ ನೀಡಿ ಉನ್ನತೀಕರಿಸುವ ಆವಶ್ಯಕತೆ ಇದೆ ಎಂದರು.. ಸಂಬಂಧಿಸಿದ ಇಲಾಖೆ ಮತ್ತು ಸಂಶೋಧನಾ ಕೇಂದ್ರಗಳು ಸಹಾಯ ಮತ್ತು ಸಹಕಾರ ಪಡೆದು ತಮ್ಮ ಸಂಸ್ಥೆಯು ಇದನ್ನು ಲಾಭದಾಯಕ ಉದ್ಯಮ ಮಾಡುವ ಕೆಲಸ ಮಾಡಲಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಇಲಾಖೆಯ ಆತ್ಮ ಯೋಜನೆಯ ಅಧಿಕಾರಿಗಳಾದ ವಿನಾಯಕ ರಾವ್ ಮಾತನಾಡಿ ತಮ್ಮ ಇಲಾಖೆಯು ಸಾಗರದಲ್ಲಿ ಪುಷ್ಪ ಕೃಷಿಯನ್ನು ಇನ್ನಷ್ಟು ಹೆಚ್ಚು ವಿಸ್ತರಿಸುವ ದೃಷ್ಟಿಯಿಂದ ಕೆಲಸ ಮಾಡಲಿದೆ ಎಂದು ಹೇಳಿದರು… ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ವಿ.ಶಂ. ರಾಮಚಂದ್ರ ಭಟ್, ಹಿರಿಯರಾದ ಕೆ. ಭೀಮರಾವ್ ವೇದಿಕೆ ಮೇಲೆ ಉಪಸ್ಥಿತರಿದ್ದರು.. ಡೇರೆ ಹೂವಿನ ಕೃಷಿ ಮಾಡುತ್ತಿರುವ ಶ್ರೀಮತಿ ಸಹನಾ ಮಾವಿನಸರ ಅಧ್ಯಕ್ಷತೆ ವಹಿಸಿದ್ದರು… ಕವಲುಕೋಡು ವೆಂಕಟೇಶ್ ಸ್ವಾಗತಿಸಿದರು ಮತ್ತು ರಾಧಾಕೃಷ್ಣ ಬಂದಗದ್ದೆ ವಂದಿಸಿದರು.

ಸಾಗರ ತಾಲೂಕು ಮಾತ್ರವಲ್ಲದೆ ನೆರೆಯ ಜಿಲ್ಲೆಯ ಡೇರೆ ಹೂವಿನ ಅರವತ್ತಕ್ಕೂ ಹೆಚ್ಚಿನ ಡೇರೆ ಹೂವಿನ ಕೃಷಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು

Dailyhunt
Disclaimer: This content has not been generated, created or edited by Dailyhunt. Publisher: Klive.News