Dailyhunt Logo
  • Light mode
    Follow system
    Dark mode
    • Play Story
    • App Story

ಸೌರ ವಿದ್ಯುತ್ ಗೆ ರಾಜ್ಯದ ರೈತರಿಂದ ಹೆಚ್ಚಿನ ಬೇಡಿಕೆ: ಕುಸುಮ್ ಬಿ ಯೋಜನೆಯಿಂದ ಮಹತ್ವದ ಬದಲಾವಣೆ: ಸಚಿವ ಕೆ.ಜೆ.ಜಾರ್ಜ್

Klive News 2 weeks ago

ರಾಜ್ಯ ಸರ್ಕಾರ ಕೃಷಿಯಲ್ಲಿ ಸೌರ ವಿದ್ಯುತ್ ಬಳಕೆಗೆ ಉತ್ತೇಜನ ಹೆಚ್ಚಿಸಿದ್ದು, ಒಂದು ಲಕ್ಷಕ್ಕೂ ಹೆಚ್ಚು ರೈತರು ಅರ್ಜಿ ಸಲ್ಲಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 27,700 ಕ್ಕೂ ಹೆಚ್ಚು ಸೌರ ಕೃಷಿ ಪಂಪ್‌ಸೆಟ್‌ಗಳು ಕಾರ್ಯಾರಂಭ ಮಾಡಿದ್ದು, ಈ ಸೌರ ಕೃಷಿ ಪಂಪ್‌ಸೆಟ್‌ಗಳಿಂದ ರಾಜ್ಯದಲ್ಲಿ ಸುಮಾರು 144 ಮೆಗಾವ್ಯಾಟ್ ಗ್ರಿಡ್ ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ.

ಆರಂಭಿಕ ವರ್ಷಗಳಲ್ಲಿ ನಿಧಾನಗತಿಯಲ್ಲಿ ಸಾಗುತ್ತಿದ್ದ ಯೋಜನೆಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ವಿಶೇಷ ಆಸಕ್ತಿ, ನಿರಂತರ ಮೇಲ್ವಿಚಾರಣೆ ಹಾಗೂ ಆಡಳಿತಾತ್ಮಕ ಹಸ್ತಕ್ಷೇಪದಿಂದ ಹೊಸ ಚೈತನ್ಯ ದೊರೆತಿದೆ. ಇಂಧನ ಇಲಾಖೆ, ಎಸ್ಕಾಂಗಳು, ಅನುಷ್ಠಾನ ಸಂಸ್ಥೆಗಳು ಹಾಗೂ ಪೂರೈಕೆದಾರರ ಸಮನ್ವಯದಿಂದ ಅನುಷ್ಠಾನದಲ್ಲಿದ್ದ ಸಮಸ್ಯೆಗಳನ್ನು ಪರಿಹರಿಸಿದ ಬಳಿಕ ರೈತರ ಸ್ಪಂದನೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಂದು ಲಕ್ಷಕ್ಕೂ ಹೆಚ್ಚು ರೈತರು ಅರ್ಜಿ ಸಲ್ಲಿಸಿದ್ದು, ಇದು ಸೌರ ಕೃಷಿ ಪಂಪ್‌ಸೆಟ್‌ಗಳತ್ತ ರೈತರ ವಿಶ್ವಾಸ ಹೆಚ್ಚುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಪ್ರಸ್ತುತ ರಾಜ್ಯದಲ್ಲಿ 27,700 ಕ್ಕೂ ಹೆಚ್ಚು ಸೌರ ಕೃಷಿ ಪಂಪ್‌ಸೆಟ್‌ಗಳು ಅಳವಡಿಕೆಯಾಗಿ ಕಾರ್ಯಾರಂಭ ಮಾಡಿದ್ದು, 40 ಸಾವಿರ ಪಂಪ್‌ಸೆಟ್‌ಗಳ ಗುರಿಯನ್ನು ಮುಟ್ಟುವತ್ತ ವೇಗವಾಗಿ ಮುನ್ನಡೆಯುತ್ತಿದೆ.

ಸೌರ ಕೃಷಿ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕರ್ನಾಟಕ ಸರ್ಕಾರವೇ ಶೇ.50ರಷ್ಟು ಆರ್ಥಿಕ ಸಹಾಯಧನ ನೀಡುತ್ತಿದೆ. ಇದರಿಂದ ಸಾವಿರಾರು ರೈತರು ಕಡಿಮೆ ವೆಚ್ಚದಲ್ಲಿ ಸೌರ ವಿದ್ಯುತ್ ಬಳಸಲು ಸಾಧ್ಯವಾಗಿದೆ. ಇದರಿಂದ ಸಾಂಪ್ರದಾಯಿಕ ವಿದ್ಯುತ್ ಮೇಲಿನ ಅವಲಂಬನೆಯೂ ಕಡಿಮೆಯಾಗಿದೆ.

ಕುಸುಮ್‌ ಬಿ ಯೋಜನೆ ಅಡಿಯಲ್ಲಿ ಅಳವಡಿಸಿರುವ ಸೌರ ಪಂಪ್‌ಸೆಟ್‌ಗಳು ರೈತರ ಬದುಕಿನಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ರಾತ್ರಿ ವೇಳೆ ಹೊಲಗಳಿಗೆ ತೆರಳಿ ಪಂಪ್‌ಗಳನ್ನು ಚಾಲನೆ ಮಾಡುವುದು, ನೀರಾವರಿಗಾಗಿ ಇಡೀ ರಾತ್ರಿ ಜಾಗರಣೆ ಮಾಡುವುದು ಮೊದಲಾದ ಸಮಸ್ಯೆಗಳಿಂದ ರೈತರಿಗೆ ಮುಕ್ತಿ ದೊರಕುತ್ತಿದೆ. ಹಗಲಿನ ವೇಳೆಯಲ್ಲೇ ವಿಶ್ವಾಸಾರ್ಹ ವಿದ್ಯುತ್ ಲಭ್ಯವಾಗುತ್ತಿರುವುದರಿಂದ ರೈತರ ಸುರಕ್ಷತೆ, ಅನುಕೂಲತೆ ಹಾಗೂ ಉತ್ಪಾದಕತೆ ಹೆಚ್ಚುತ್ತಿದೆ.

ಕಾರ್ಯಾರಂಭ ಮಾಡಿರುವ ಈ ಸೌರ ಕೃಷಿ ಪಂಪ್‌ಸೆಟ್‌ಗಳಿಂದ ರಾಜ್ಯದಲ್ಲಿ ಸುಮಾರು 144 ಮೆಗಾವ್ಯಾಟ್ ಗ್ರಿಡ್ ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ. ಇದರೊಂದಿಗೆ ವರ್ಷಕ್ಕೆ 240 ಮಿಲಿಯನ್ ಯೂನಿಟ್ ವಿದ್ಯುತ್ ಖರೀದಿಯನ್ನು ತಪ್ಪಿಸುವ ಮೂಲಕ ಎಸ್ಕಾಂಗಳಿಗೆ ಸುಮಾರು ₹146 ಕೋಟಿ ವಿದ್ಯುತ್ ಖರೀದಿ ವೆಚ್ಚ ಉಳಿತಾಯವಾಗಲಿದೆ. ಜೊತೆಗೆ, ಕೃಷಿ ಪಂಪ್‌ಸೆಟ್‌ಗಳಿಗೆ ನೀಡುವ ವಿದ್ಯುತ್ ಸಹಾಯಧನದಲ್ಲಿ ರಾಜ್ಯ ಸರ್ಕಾರಕ್ಕೆ ವರ್ಷಕ್ಕೆ ಸುಮಾರು ₹200 ಕೋಟಿ ಉಳಿತಾಯ ಆಗಲಿದೆ.

"ಕರ್ನಾಟಕದ ಸೌರ ಕೃಷಿ ಕ್ರಾಂತಿ ಸುಸ್ಥಿರ ಕೃಷಿ ಹಾಗೂ ಉತ್ತಮ ಆಡಳಿತಕ್ಕೆ ಹೊಸ ಮಾದರಿಯಾಗಿದೆ. ಯೋಜನೆಯ ಅನುಷ್ಠಾನದಲ್ಲಿದ್ದ ಅಡೆತಡೆಗಳನ್ನು ನಿವಾರಿಸಿ, ಪ್ರಕ್ರಿಯೆಯನ್ನು ಸರಳಗೊಳಿಸಿ ಹೊಸ ವೇಗ ನೀಡಿದ್ದೇವೆ. ಪ್ರತಿಯೊಂದು ಸೌರ ಕೃಷಿ ಪಂಪ್‌ಸೆಟ್ ಕರ್ನಾಟಕದ ಭವಿಷ್ಯಕ್ಕೆ ಮಾಡುವ ಶಾಶ್ವತ ಹೂಡಿಕೆಯಾಗಿದೆ. ಇದು ರಾಜ್ಯದ ವಿದ್ಯುತ್ ಖರೀದಿ ವೆಚ್ಚವನ್ನು ಕಡಿಮೆ ಮಾಡುತ್ತದೆ, ವಿದ್ಯುತ್ ಸಹಾಯಧನದ ಹೊರೆ ತಗ್ಗಿಸುತ್ತದೆ, ಇಂಧನ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ರೈತರ ಜೀವನಮಟ್ಟವನ್ನು ಸುಧಾರಿಸುತ್ತದೆ. ಇದು ಕೇವಲ ನವೀಕರಿಸಬಹುದಾದ ಇಂಧನ ಯೋಜನೆಯಲ್ಲ; ರಾಜ್ಯದ ಆರ್ಥಿಕ ಹಾಗೂ ಸಾಮಾಜಿಕ ಪರಿವರ್ತನೆಗೆ ದಾರಿಯಾಗಿರುವ ಮಹತ್ವದ ಕಾರ್ಯಕ್ರಮವಾಗಿದೆ." ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ ಜೆ ಜಾರ್ಜ್‌ ತಿಳಿಸಿದ್ದಾರೆ .

ಪ್ರಮುಖ ಅಂಶಗಳು:

Dailyhunt
Disclaimer: This content has not been generated, created or edited by Dailyhunt. Publisher: Klive.News