Saturday, 07 Nov, 5.51 pm Masth Magaa

ಎಲ್ಲಾ ಸುದ್ದಿ
ಹಸಿರು ಪಟಾಕಿಗೆ ಸಂಬಂಧಿಸಿದಂತೆ ಮಾರ್ಗಸೂಚಿ ಬಿಡುಗಡೆ

masthmagaa.com:

ಕೊರೋನಾ ಹಿನ್ನೆಲೆ ಈ ಬಾರಿಯ ದೀಪಾವಳಿ ಹಬ್ಬಕ್ಕೆ ಪಟಾಕಿ ಬ್ಯಾನ್ ಮಾಡಿರುವ ರಾಜ್ಯ ಸರ್ಕಾರ ಕೇವಲ ಹಸಿರು ಪಟಾಕಿಗೆ ಅವಕಾಶ ನೀಡಿದೆ. ಇದೀಗ ಹಸಿರು ಪಟಾಕಿ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಇದರ ಪ್ರಕಾರ..

- ಹಸಿರು ಪಟಾಕಿಯನ್ನು ಬಿಟ್ಟು ಯಾವುದೇ ಇತರೆ ಪಟಾಕಿಗಳನ್ನು ಮಾರಾಟ ಮಾಡಬಾರದು ಮತ್ತು ಹಚ್ಚಬಾರದು.

- ಹಸಿರು ಪಟಾಕಿ ಮಾರಾಟದ ಅಂಗಡಿಗಳನ್ನು ನವೆಂಬರ್ 7ನೇ ತಾರೀಖಿನಿಂದ ನವೆಂಬರ್ 16ನೇ ತಾರೀಖಿನವರೆಗೆ ಮಾತ್ರ ತೆರೆಯಲು ಅವಕಾಶ.

- ಅಂಗಡಿ ತೆರೆಯಲು ನೀಡಿರುವ ಲೈಸೆನ್ಸ್​ನಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳಗಳಲ್ಲಿ ಮಾತ್ರ ತಾತ್ಕಾಲಿಕ ಹಸಿರು ಪಟಾಕಿ ಅಂಗಡಿಗಳನ್ನ ತೆರೆಯಬೇಕು. ಬೇರೆ ಸ್ಥಳ ಅಥವಾ ದಿನಾಂಕಗಳಲ್ಲಿ ಅಂಗಡಿ ತೆರೆಯಬಾರದು.

- ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ಮೈದಾನ ಅಥವಾ ಬಯಲು ಪ್ರದೇಶದಲ್ಲಿ ಹಸಿರು ಪಟಾಕಿ ಅಂಗಡಿಗಳನ್ನ ತೆರೆಯಬೇಕು. ಇದಕ್ಕಾಗಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದಿರಬೇಕು.

- ಒಂದು ಅಂಗಡಿಯಿಂದ ಮತ್ತೊಂದು ಅಂಗಡಿಗೆ 6 ಮೀಟರ್ ಅಂತರವಿರಬೇಕು. ಜೊತೆಗೆ ಅಂಗಡಿಗಳಲ್ಲಿ ಎರಡೂ ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು.

- ಅಂಗಡಿ ತೆರೆಯಲು ನೀಡಿರುವ ಲೈಸೆನ್ಸ್ ಪ್ರತಿಯನ್ನು ಎಲ್ಲರಿಗೂ ಕಾಣುವಂತೆ ಪ್ರದರ್ಶಿಸಬೇಕು.

- ಹಸಿರು ಪಟಾಕಿ ಅಂಗಡಿಗಳ ಸುತ್ತಮುತ್ತ ಪ್ರತಿದಿನ ಸ್ಯಾನಿಟೈಸ್ ಮಾಡಬೇಕು. ಪಟಾಕಿ ಖರೀದಿಗೆ ಬರುವ ಗ್ರಾಹಕರಿಗೆ ಸ್ಯಾನಿಟೈಸರ್ ಮತ್ತು ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಬೇಕು. ಕನಿಷ್ಠ 6 ಅಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಪಟಾಕಿ ಮಾರುವವರು ಮತ್ತು ಕೊಳ್ಳುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.

- ಹಸಿರು ಪಟಾಕಿಯ ಖರೀದಿ ವೇಳೆ ಯಾವುದೇ ಕಾರಣಕ್ಕೂ ಜನದಟ್ಟಣೆ ಆಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು.

- ಕೊರೋನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ, ಆರೋಗ್ಯ ಇಲಾಖೆ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಿಯಮಗಳನ್ನು ಪಾಲಿಸಬೇಕು.

- ಕೊರೋನಾ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ವಿಪತ್ತು ನಿರ್ವಹಣಾ ಅಧಿನಿಯಮ- 2005 ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.

ಹಸಿರು ಪಟಾಕಿ ಅಂದ್ರೆ ಅಲ್ಯುಮೀನಿಯಂ, ಬೇರಿಯಂ, ಪೊಟ್ಯಾಶಿಯಂ ನೈಟ್ರೇಟ್​ ಮತ್ತು ಕಾರ್ಬನ್ ಮುಂತಾದ ಹಾನಿಕಾರಕ ರಾಸಾಯನಿಕಗಳನ್ನ ಬಳಸದೇ ತಯಾರಿಸಿದ ಪಟಾಕಿಗಳು. ಹಸಿರು ಪಟಾಕಿಗಳ ಬಳಕೆಯಿಂದ ವಾಯು ಮಾಲಿನ್ಯವನ್ನು ಶೇ. 30ರಷ್ಟು ಕಡಿಮೆ ಮಾಡಬಹುದು ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

-masthmagaa.com

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Masth Magaa
Top