Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ದಿಢೀರ್ ರದ್ದು!

ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ದಿಢೀರ್ ರದ್ದು!

ಮಂಗಳೂರು : ಕರಾವಳಿ ಮತ್ತು ರಾಜಧಾನಿ ನಡುವೆ ಸಂಚರಿಸಲಿರುವ ಬಹುನಿರೀಕ್ಷಿತ ಬೆಂಗಳೂರು - ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಪ್ರಾಯೋಗಿಕ (ಟ್ರಯಲ್ ರನ್) ಸಂಚಾರಕ್ಕೆ ತಡೆಯುಂಟಾಗಿದೆ. ಜೂನ್ 3ರಂದು ನಡೆಸಲು ಉದ್ದೇಶಿಸಲಾಗಿದ್ದ ಈ ಹೈಸ್ಪೀಡ್ ರೈಲಿನ ಪ್ರಾಯೋಗಿಕ ಓಟವನ್ನು ದಕ್ಷಿಣ ಪಶ್ಚಿಮ ರೈಲ್ವೆ ಇಲಾಖೆಯು ಹಠಾತ್ತನೆ ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಈ ಸಂಬಂಧ ಮುಖ್ಯ ಪ್ರಯಾಣಿಕ ಸಂಚಾರ ವ್ಯವಸ್ಥಾಪಕರ (CPTM) ಕಚೇರಿಯಿಂದ ಅಧಿಕೃತ ಸುತ್ತೋಲೆ ಬಿಡುಗಡೆಯಾಗಿದ್ದು, ಈ ಮುಂಚೆ ಟ್ರಯಲ್ ರನ್‌ಗಾಗಿ ಮಾಡಿಕೊಳ್ಳಲಾಗಿದ್ದ ಎಲ್ಲ ಸಿದ್ಧತೆಗಳು ಹಾಗೂ ನಿಲ್ದಾಣಗಳ ತಾತ್ಕಾಲಿಕ ವ್ಯವಸ್ಥೆಗಳನ್ನು ವಾಪಸ್ ಪಡೆಯಲಾಗಿದೆ.

ರೈಲ್ವೆ ಇಲಾಖೆಯ ಅಧಿಕೃತ ಸಂದೇಶ ಸಂಖ್ಯೆ T.454/YPR-MAQ ವಂದೇ ಭಾರತ್/2026-27(241) ರ ಪ್ರಕಾರ, ಜೂನ್ 3ರ ಬುಧವಾರದಂದು ಯಶವಂತಪುರದಿಂದ ಮಂಗಳೂರಿಗೆ ಮತ್ತು ಅಲ್ಲಿಂದ ಪುನಃ ಯಶವಂತಪುರಕ್ಕೆ 8 ಬೋಗಿಗಳ ವಂದೇ ಭಾರತ್ ರೈಲನ್ನು ಪ್ರಾಯೋಗಿಕವಾಗಿ ಓಡಿಸುವ ಪ್ರಸ್ತಾವನೆಯನ್ನು ಸದ್ಯಕ್ಕೆ ಕೈಬಿಡಲಾಗಿದೆ. ಘಾಟ್ ಸೆಕ್ಷನ್‌ನಲ್ಲಿ ಈ ಅತ್ಯಾಧುನಿಕ ರೈಲಿನ ವೇಗ, ಹಳಿಗಳ ಸಾಮರ್ಥ್ಯ ಹಾಗೂ ಸುರಂಗ ಮಾರ್ಗಗಳಲ್ಲಿನ ಸುರಕ್ಷತೆಯನ್ನು ಪರೀಕ್ಷಿಸಲು ರೈಲು ಪ್ರೇಮಿಗಳು ಮತ್ತು ಸಾರ್ವಜನಿಕರು ಭಾರಿ ಕುತೂಹಲದಿಂದ ಕಾಯುತ್ತಿದ್ದರು.

ಪ್ರಾಯೋಗಿಕ ಸಂಚಾರವನ್ನು ರದ್ದುಪಡಿಸಿರುವುದಕ್ಕೆ ರೈಲ್ವೆ ಇಲಾಖೆಯು ಯಾವುದೇ ನಿರ್ದಿಷ್ಟ ಕಾರಣವನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ತಾಂತ್ರಿಕ ಸಿದ್ಧತೆಗಳ ಕೊರತೆ, ಕಾರ್ಯಾಚರಣೆಯ ತುರ್ತು ಆದ್ಯತೆಗಳು ಹಾಗೂ ವಂದೇ ಭಾರತ್ ರೈಲಿನ ವಿಶೇಷ ಬೋಗಿಗಳ (ರೇಕ್) ಅಲಭ್ಯತೆಯೇ ಇದಕ್ಕೆ ಪ್ರಮುಖ ಕಾರಣ ಇರಬಹುದು ಎಂದು ರೈಲ್ವೆ ಮೂಲಗಳು ಶಂಕಿಸಿವೆ. ಸದ್ಯಕ್ಕೆ ಶಿರಾಡಿ ಘಾಟ್ ರೈಲ್ವೆ ಮಾರ್ಗದಲ್ಲಿ ಗೂಡ್ಸ್ ರೈಲುಗಳ ಸಂಚಾರ ಎಂದಿನಂತೆ ಸುಗಮವಾಗಿ ನಡೆಯುತ್ತಿರುವುದರಿಂದ ಹಳಿಗಳ ತಾಂತ್ರಿಕ ಸಮಸ್ಯೆಯ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.

ಬೆಂಗಳೂರು ಮತ್ತು ಮಂಗಳೂರು ನಡುವೆ ವಂದೇ ಭಾರತ್ ರೈಲು ಸೇವೆ ಆರಂಭಗೊಂಡರೆ ಉಭಯ ನಗರಗಳ ನಡುವಿನ ಪ್ರಯಾಣದ ಅವಧಿ ಗಣನೀಯವಾಗಿ ಕಡಿತಗೊಳ್ಳಲಿದೆ. ಇದು ಕರಾವಳಿ ಭಾಗದ ಪ್ರವಾಸೋದ್ಯಮ, ವಾಣಿಜ್ಯ ವ್ಯವಹಾರ ಹಾಗೂ ಪ್ರಯಾಣಿಕರಿಗೆ ವರದಾನವಾಗಲಿದೆ ಎಂದು ನಂಬಲಾಗಿತ್ತು. ಸದ್ಯಕ್ಕೆ ಈ ಪ್ರಾಯೋಗಿಕ ಸಂಚಾರ ಮುಂದೂಡಲ್ಪಟ್ಟಿದ್ದರೂ, ರೈಲ್ವೆ ಇಲಾಖೆಯು ಶೀಘ್ರದಲ್ಲೇ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿ ಹೊಸ ದಿನಾಂಕವನ್ನು ನಿಗದಿಪಡಿಸುವ ನಿರೀಕ್ಷೆಯಿದೆ.

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ.ಕಡ್ಡಾಯ ಫೀಲ್ಡ್ಗಳನ್ನು * ಮೂಲಕ ಗುರುತಿಸಲಾಗಿದೆ

ಪ್ರತಿಕ್ರಿಯೆ

ಹೆಸರು

ಇಮೇಲ್

ಊರು

ನಂತರದ ಪ್ರತಿಕ್ರಿಯೆಗಾಗಿ ನನ್ನ ಹೆಸರು, ಇಮೇಲ್ ಮತ್ತು ವೆಬ್‌ಸೈಟ್ ಅನ್ನು ಈ ಬ್ರೌಸರ್‌ನಲ್ಲಿ ಉಳಿಸಿ.

Dailyhunt
Disclaimer: This content has not been generated, created or edited by Dailyhunt. Publisher: Megamedia News Kannada