ಸುದ್ದಿ
ರಾಷ್ಟ್ರೀಯ ಬಾಲ ಪುರಸ್ಕಾರ' ಪ್ರಶಸ್ತಿಗೆ ಪುತ್ತೂರಿನ ರಾಕೇಶ್ ಕೃಷ್ಣ ಮತ್ತು ಬೆಂಗಳೂರಿನ ವೀರ್ ಕಶ್ಯಪ್ ಆಯ್ಕೆ

ಪುತ್ತೂರು : ಪ್ರತೀ ವರ್ಷ ಗಣರಾಜ್ಯೋತ್ಸವದ ಸಂದರ್ಭ ಕೇಂದ್ರ ಸರಕಾರ ನೀಡುವ 'ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ' ಪ್ರಶಸ್ತಿಗೆ ಈ ಬಾರಿ ಕರ್ನಾಟಕದ ಇಬ್ಬರು ಆಯ್ಕೆಯಾಗಿದ್ದಾರೆ.
ವಿಜ್ಞಾನ ಅನ್ವೇಷಣೆ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ರಾಕೇಶ್ ಕೃಷ್ಣ ಹಾಗೂ ದಿಲ್ಲಿ ಆರ್ಮಿ ಪಬ್ಲಿಕ್ ಸ್ಕೂಲಿನಲ್ಲಿ ಕಲಿಯುತ್ತಿರುವ ಬೆಂಗಳೂರಿನ ವೀರ್ ಕಶ್ಯಪ್ ಪ್ರಶಸ್ತಿಗೆ ಆಯ್ಕೆಯಾದ ಕನ್ನಡಿಗರು. ಇವರಿಬ್ಬರಿಗೂ ಆವಿಷ್ಕಾರ ವಿಭಾಗದಲ್ಲಿ ಪುರಸ್ಕಾರ ಲಭಿಸಿದೆ. ಒಟ್ಟು 32 ಮಕ್ಕಳು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಿಜೇತರೊಂದಿಗೆ ಪ್ರಧಾನಿ ಮೋದಿ ಇಂದು ಮಧ್ಯಾಹ್ನ 12 ಗಂಟೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದ್ದಾರೆ. ಕೇಂದ್ರ ಸರಕಾರ ಪ್ರತೀ ವರ್ಷ ಬಾಲ ಪ್ರತಿಭೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡುತ್ತಿದೆ. ಪ್ರಶಸ್ತಿಯ ಪದಕ 1 ಲಕ್ಷ ರೂ. ನಗದು ಒಳಗೊಂಡಿದೆ.
ರಾಕೇಶ್ ಕೃಷ್ಣ ಅವರು ಬನ್ನೂರು ನಿವಾಸಿ ರವಿಶಂಕರ್ ನೆಕ್ಕಿಲ ಮತ್ತು ಡಾ.ದುರ್ಗಾರತ್ನಾ ದಂಪತಿಯ ಪುತ್ರ. ಇವರು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ.
ಭಾರತ ಸರಕಾರದ ವಿಜ್ಞಾನ ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಇನ್ ಸ್ಪೈರ್ ಅವಾರ್ಡ್ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದರು. ಅಲ್ಲದೆ ಜಪಾನಿನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವಿಜ್ಞಾನ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.
"ಸಂಘದ ಸಹಕಾರ, ಶಿಕ್ಷಕರ ಮಾರ್ಗದರ್ಶನ ಪೋಷಕರ ಪ್ರೋತ್ಸಾಹ ತನ್ನ ಈ ಸಾಧನೆಯಲ್ಲಿ ಪ್ರಧಾನ ಪಾತ್ರ ವಹಿಸಿದೆ" ಎಂದು ರಾಕೇಶ್ ಪ್ರಶಸ್ತಿಯ ಸಂತಸ ಹಂಚಿಕೊಂಡಿದ್ದಾರೆ.
ವೀರ್ ಕಶ್ಯಪ್ ಅವರು ಕೊರೋನ ವೈರಸ್ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಹಾವು-ಏಣಿ ಮಾದರಿಯ 'ಕೊರೋನ ಯುಗ' ಎಂಬ ವಿಶಿಷ್ಟ ಆಟ ಕಂಡುಹಿಡಿದಿದ್ದರು.
ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯಿಂದ ಪುರಸ್ಕೃತರಾಗಿರುವ ರಾಕೇಶ್ ಕೃಷ್ಣ ಮತ್ತು ವೀರ್ ಕಶ್ಯಪ್ ಅವರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದಿಸಿದ್ದಾರೆ.
related stories
-
ಯಾದಗಿರಿ ಸುವರ್ಣಾ ಜಂಪಾಗೆ ಪ್ರಶಸ್ತಿ
-
ರಾಷ್ಟ್ರೀಯ ತೆರೆಮರೆಯ ಸಾಧಕರಿಗೆ ಮಾ.7ರಂದು ಪ್ರಣಾಮ್ ಕಾರ್ಯಕ್ರಮ
-
ಬೆಂಗಳೂರು ನಗರ ಖ್ಯಾತ ಕವಿ ಎನ್.ಎಸ್ ಲಕ್ಷ್ಮೀನಾರಾಯಣ ಭಟ್ ವಿಧಿವಶ