ಸುದ್ದಿ
ತೊಕ್ಕೊಟ್ಟುವಿನಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಮರಳು ಸಾಗಾಟದ ಲಾರಿ ಢಿಕ್ಕಿ ಹೊಡೆದು ಮೃತ್ಯು

ಉಳ್ಳಾಲ : ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟುವಿನಲ್ಲಿ ರಸ್ತೆ ದಾಟುತ್ತಿದ್ದ ವ್ಯಕ್ತಿಯೊಬ್ಬರು ಮರಳು ಸಾಗಾಟದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಭಾನುವಾರ ನಡೆದಿದೆ.
ಮೃತರನ್ನು ಪಾಣೆಮಂಗಳೂರು ನಿವಾಸಿ ಹಮ್ಮಬ್ಬ(60) ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ತೊಕ್ಕೊಟ್ಟಿನ ಸಹರಾ ಆಸ್ಪತ್ರೆಯ ಎದುರು ಹೆದ್ದಾರಿ ದಾಟುತ್ತಿದ್ದ ವೇಳೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾಗಿದೆ. ಇದರಿಂದ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದ ಹಮ್ಮಬ್ಬ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಹಮ್ಮಬ್ಬ ತೊಕ್ಕೊಟ್ಟು ಬಳಿಯ ಕಲ್ಲಾಪುವಿನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು.
ನಾಗುರಿ ಸಂಚಾರಿ ಠಾಣಾ ಪೊಲೀಸರು ಪರಾರಿಯಾಗಲೆತ್ನಿಸಿದ್ದ ವಾಹನವನ್ನು ಪತ್ತೆ ಹಚ್ಚಿದ್ದಾರೆ. ತಲಪಾಡಿಗೆ ಸೇರಿದ ಮರಳು ಸಾಗಾಟದ ಟಿಪ್ಪರ್ ಲಾರಿಯನ್ನು ವಶಪಡಿಸಿಕೊಂಡು ಚಾಲಕನನ್ನು ಬಂಧಿಸಿದ್ದಾರೆ.
ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿ ಸಂಜೆಯೊಳಗೆ ಢಿಕ್ಕಿ ಹೊಡೆದ ವಾಹನವನ್ನು ಪತ್ತೆಹಚ್ಚಿದ್ದಾರೆ. ಸಿಸಿಟಿವಿಯಲ್ಲಿ ಸೆರೆಸಿಕ್ಕ ದಾಖಲೆಗಳ ಆಧಾರದಲ್ಲಿ ತಲಪಾಡಿಯತ್ತ ತೆರಳುತ್ತಿದ್ದ ಮರಳು ಸಾಗಾಟದ ಲಾರಿಯನ್ನು ವಶಕ್ಕೆ ಪಡೆದುಕೊಂಡು ಚಾಲಕನನ್ನು ಬಂಧಿಸಿದ್ದಾರೆ.