Thursday, 22 Apr, 7.19 am myKhel ಕನ್ನಡ

ಮುಖಪುಟ
ಐಪಿಎಲ್: ನೂತನ ದಾಖಲೆ ಬರೆದ ಎಂಎಸ್ ಧೋನಿ

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಸೋಲುವುದರ ಮೂಲಕ ಕಹಿ ಅನುಭವದೊಂದಿಗೆ ಟೂರ್ನಿಯನ್ನು ಆರಂಭಿಸಿತ್ತು. ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯೂ ಸಹ ಕಳಪೆ ಪ್ರದರ್ಶನ ನೀಡಲಿದೆ ಎಂದು ಚೆನ್ನೈನ ಮೊದಲ ಪಂದ್ಯ ಮುಗಿದ ನಂತರ ಹಲವಾರು ಮಂದಿ ಟೀಕಿಸಿದ್ದರು. ಆದರೆ ನಂತರದ 3 ಪಂದ್ಯಗಳಲ್ಲಿಯೂ ಸತತವಾಗಿ ಜಯ ಸಾಧಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟೀಕಾಕಾರರ ಬಾಯಿ ಮುಚ್ಚಿಸಿದೆ.

ಬುಧವಾರ (ಏಪ್ರಿಲ್ 21) ನಡೆದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮೂರನೇ ಗೆಲುವು ದಾಖಲಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅಷ್ಟೇ ಅಲ್ಲದೆ ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ವಿಕೆಟ್ ಕೀಪರ್‌ ಆಗಿ ಐಪಿಎಲ್ ಇತಿಹಾಸದಲ್ಲಿ ಯಾವ ವಿಕೆಟ್ ಕೀಪರ್ ಕೂಡ ಬರೆಯದ ನೂತನ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ. ಕೊಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ವಿಕೆಟ್ ಕೀಪರ್ ಆಗಿ ಒಟ್ಟು 3 ಕ್ಯಾಚ್‌ಗಳನ್ನು ಹಿಡಿಯುವುದರ ಮೂಲಕ ಐಪಿಎಲ್ ಇತಿಹಾಸದಲ್ಲಿ 150 ಬಾರಿ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ ಮೊದಲ ಹಾಗೂ ಏಕೈಕ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ.

ವಿಕೆಟ್ ಕೀಪರ್ ಆಗಿ ಐಪಿಎಲ್ ಇತಿಹಾಸದಲ್ಲಿ 150 ಔಟ್‌ಗಳನ್ನು ಮಾಡಿರುವ ಎಂ ಎಸ್ ಧೋನಿ ಅವರ ಈ ದಾಖಲೆಯಲ್ಲಿ 111 ಕ್ಯಾಚ್‌ಗಳು ಮತ್ತು 39 ಸ್ಟಂಪಿಂಗ್‍ಗಳು ಸೇರಿವೆ. ಇನ್ನು ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಮುಂದಿನ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಏಪ್ರಿಲ್ 25ರ ಭಾನುವಾರದಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಡಲಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Mykhel Kannada
Top