Thursday, 22 Apr, 8.45 am myKhel ಕನ್ನಡ

ಮುಖಪುಟ
CSK vs KKR: ಈ ಬಾರಿ ಅತಿಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ಪಂದ್ಯ ಯಾವುದು?

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಉದ್ಘಾಟನಾ ಪಂದ್ಯ ಏಪ್ರಿಲ್ 9ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆದಿತ್ತು. ಈ ಪಂದ್ಯವನ್ನು ಸುಮಾರು 6.7 ಮಿಲಿಯನ್ ವೀಕ್ಷಕರು ಡಿಸ್ನಿ + ಹಾಟ್‌ಸ್ಟಾರ್ ನಲ್ಲಿ ವೀಕ್ಷಿಸಿದ್ದರು.

ಆದರೆ ಇದು ಕಳೆದ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯಕ್ಕಿಂತ 25 - 30% ಕಡಿಮೆ ವೀಕ್ಷಣೆಯಾಗಿತ್ತು. ಹೀಗಾಗಿ ಈ ಬಾರಿಯ ಮೊದಲ ಪಂದ್ಯವನ್ನು ಕಡಿಮೆ ವೀಕ್ಷಕರು ವೀಕ್ಷಿಸಿದ್ದರು, ಆದರೆ ಇದೀಗ ಈ ಬಾರಿಯ ಐಪಿಎಲ್ ಟೂರ್ನಿಯ ಪಂದ್ಯವೊಂದು 7 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಈ ಬಾರಿಯ ಐಪಿಎಲ್ ಟೂರ್ನಿಯ 15ನೇ ಪಂದ್ಯ ಬುಧವಾರ (ಏಪ್ರಿಲ್ 21) ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ರುತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ಭರ್ಜರಿ ಆರಂಭ ನೀಡಿದರು. 115 ರನ್‌ಗಳ ಜತೆಯಾಟವಾಡಿದ ಈ ಜೋಡಿ ಚೆನ್ನೈ ಸೂಪರ್ ಕಿಂಗ್ಸ್ ದೊಡ್ಡ ಮೊತ್ತ ಕಲೆಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿತು. ಚೆನ್ನೈ ಸೂಪರ್ ಕಿಂಗ್ಸ್ ತಂಡ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತು.

221 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ಮೊದಲ 5 ವಿಕೆಟ್‍ಗಳನ್ನು 31 ರನ್‌ಗಳಿಗೆ ಕಳೆದುಕೊಂಡರೂ ಸಹ ಮಧ್ಯಮ ಕ್ರಮಾಂಕದ ಆಟಗಾರರಾದ ರಸೆಲ್ , ದಿನೇಶ್ ಕಾರ್ತಿಕ್ ಮತ್ತು ಪ್ಯಾಟ್ ಕಮಿನ್ಸ್ ಅವರ ಭರ್ಜರಿ ಆಟದ ನೆರವಿನಿಂದ 200 ರನ್‌ಗಳ ಗಡಿ ದಾಟಿತು.

34 ರನ್‌ಗಳಿಗೆ 66 ರನ್ ಬಾರಿಸಿದ ಪ್ಯಾಟ್ ಕಮಿನ್ಸ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಭರವಸೆಯನ್ನು ಮೂಡಿಸಿ ಕೊನೆಯ ಹಂತದಲ್ಲಿ ವಿಫಲರಾದರು. ಕೊನೆಗೆ 19.1 ಓವರ್‌ಗಳಲ್ಲಿ 202 ರನ್‌ಗಳಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಆಲ್ ಔಟ್ ಆಗುವುದರ ಮೂಲಕ ಚೆನ್ನೈ 18 ರನ್‌ಗಳ ಜಯ ಗಳಿಸಿತು.

ಇನ್ನು ಈ ಪಂದ್ಯ ಆರಂಭವಾದಾಗಿನಿಂದ ಮುಗಿಯುವ ತನಕವೂ ರೋಚಕವಾಗಿದ್ದ ಕಾರಣ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ನಡೆದಿರುವ ಪಂದ್ಯಗಳ ಪೈಕಿ ಅತಿ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡ ಪಂದ್ಯವೆನಿಸಿಕೊಂಡಿದೆ.

ಹೌದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯವನ್ನು ಡಿಸ್ನಿ + ಹಾಟ್‌ಸ್ಟಾರ್ ನಲ್ಲಿ 7 ಮಿಲಿಯನ್ ಜನರು ವೀಕ್ಷಿಸಿದ ಕಾರಣ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತಿ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟ ಪಂದ್ಯ ಇದಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Mykhel Kannada
Top