ಬೆಂಗಳೂರು: ಸ್ಯಾಂಡಲ್‌ವುಡ್‌ನ ನಟ ಗೋಲ್ಡನ್ ಸ್ಟಾರ್ ಗಣೇಶ್ ಇಂದು (ಜುಲೈ 2) ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ (Sandalwood) ದಿನದಂಗವಾಗಿ ಗಣೇಶ್ (Actor Ganesh) ಅಭಿಮಾನಿಗಳಿಗೆ ಚಿತ್ರತಂಡಗಳು ಡಬಲ್ ಧಮಾಕಾ ಆಫರ್ ನೀಡಿವೆ.
ಈ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಕೇವಲ 14 ದಿನಗಳ ಅಂತರದಲ್ಲಿ ಗಣೇಶ್ ನಟನೆಯ ಎರಡು ಬಹುನಿರೀಕ್ಷಿತ ಸಿನಿಮಾಗಳು ತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿವೆ. ಹುಟ್ಟುಹಬ್ಬದಂದೇ ಈ ದೊಡ್ಡ ಘೋಷಣೆಗಳು ಹೊರಬಿದ್ದಿರುವುದು ಗಣೇಶ್ ಫ್ಯಾನ್ಸ್ ಸಖತ್ ಥ್ರಿಲ್ ಆಗುವಂತೆ ಮಾಡಿದೆ. ಅಕ್ಟೋಬರ್ 2ರಂದು ಮೊದಲ ಸಿನಿಮಾ ರಿಲೀಸ್ ಸಿನಿಮಾ ವಿಶ್ಲೇಷಕರು ಹೇಳೋದೇನು?
ಮೊದಲನೆಯದಾಗಿ, ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿ.ಜಿ ವಿಶ್ವಪ್ರಸಾದ್ ಹಾಗೂ ಟಿ.ಜಿ ಕೃತಿ ಪ್ರಸಾದ್ ನಿರ್ಮಿಸುತ್ತಿರುವ 'ಪಿನಾಕ' ಸಿನಿಮಾ ಅಕ್ಟೋಬರ್ 2ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಗಣೇಶ್ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಈ ಆಕ್ಷನ್ ಥ್ರಿಲ್ಲರ್ ಕಥೆಯ ಚಿತ್ರವನ್ನು ಪ್ರಖ್ಯಾತ ಕೊರಿಯೋಗ್ರಫರ್ ಧನಂಜಯ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಕೇವಲ ಎರಡು ವಾರ ಕಳೆಯುವುದರೊಳಗೆ, ಅಂದರೆ ಅಕ್ಟೋಬರ್ 16ರಂದು ಗಣೇಶ್ ಅವರ ಮತ್ತೊಂದು ಬಹುನಿರೀಕ್ಷಿತ ಸಿನಿಮಾವಾದ 'ಬೃಂದವಿಹಾರಿ' ಪ್ರಪಂಚದಾದ್ಯಂತ ತೆರೆಕಾಣಲಿದೆ. ಶ್ರೀನಿವಾಸ್ ರಾಜು ನಿರ್ದೇಶನದ ಮತ್ತು ಸಮೃದ್ಧಿ ವಿ ಮಂಜುನಾಥ್ ನಿರ್ಮಾಣದ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಕರ್ನಾಟಕದಾದ್ಯಂತ ರಿಲೀಸ್ ಮಾಡುತ್ತಿದೆ. ಒಂದೇ ತಿಂಗಳಿನಲ್ಲಿ ನೆಚ್ಚಿನ ನಟನ ಎರಡು ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿರುವುದು ಹಬ್ಬದ ವಾತಾವರಣ ಸೃಷ್ಟಿಸಿದೆ.
ಆದರೆ, ಒಂದೇ ತಿಂಗಳಲ್ಲಿ ಗಣೇಶ್ ಅವರ ಎರಡು ಸಿನಿಮಾಗಳು ಬರುತ್ತಿರುವುದಕ್ಕೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದರೂ, ಚಿತ್ರರಂಗದ ವಿಶ್ಲೇಷಕರು ಮತ್ತು ಸಾಮಾನ್ಯ ಸಿನಿಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬನೇ ನಟನ ಎರಡು ದೊಡ್ಡ ಸಿನಿಮಾಗಳ ನಡುವೆ ಕನಿಷ್ಠ ಒಂದು ತಿಂಗಳ ಗ್ಯಾಪ್ ಇದ್ದಿದ್ದರೆ ಚಿತ್ರಗಳ ಪ್ರಚಾರ, ಕಲೆಕ್ಷನ್ ಹಾಗೂ ಬಿಸಿನೆಸ್‌ಗೆ ತುಂಬಾ ಅನುಕೂಲವಾಗುತ್ತಿತ್ತು. ಇಷ್ಟು ಬೇಗ ಸಿನಿಮಾಗಳು ಮುಖಾಮುಖಿಯಾದರೆ ಚಿತ್ರಮಂದಿರಗಳ ಹಂಚಿಕೆಯಲ್ಲಿ ಗೊಂದಲ ಉಂಟಾಗಬಹುದು ಮತ್ತು ಪ್ರೇಕ್ಷಕರು ಕೂಡ ಹಂಚಿಹೋಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಏನೇ ಇರಲಿ, ಈ ಅಕ್ಟೋಬರ್ ಹಬ್ಬದ ಸೀಸನ್‌ನಲ್ಲಿ ಗೋಲ್ಡನ್ ಸ್ಟಾರ್ ಬ್ಯಾಕ್-ಟು-ಬ್ಯಾಕ್ ಬಾಕ್ಸ್ ಆಫೀಸ್ ಧಮಾಕಾ ನೋಡಲು ಇಡೀ ಗಾಂಧಿನಗರ ಸಜ್ಜಾಗಿದೆ.

