ಬೆಂಗಳೂರು: ತೊಂಬತ್ತರ ದಶಕದಲ್ಲಿ ಇಡೀ ದಕ್ಷಿಣ ಭಾರತ ಚಿತ್ರರಂಗವನ್ನು ತನ್ನ ಅದ್ಭುತ ಸೌಂದರ್ಯ ಮತ್ತು ಮನಮೋಹಕ ನಟನೆಯಿಂದ ಆಳಿದ್ದ ನಟಿ ರಂಭಾ (Actress Rambha) ಅವರ ಇತ್ತೀಚಿನ ಸ್ಥಿತಿ ಸಿನಿಕುಟುಂಬ ಹಾಗೂ ಅವರ ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.
ಒಂದು ಕಾಲದಲ್ಲಿ ಸ್ಟಾರ್ ನಟರ ಜೊತೆ ಬೆಳ್ಳಿತೆರೆಯ ಮೇಲೆ ಅತ್ಯಂತ ಚುರುಕಾಗಿ ಹೆಜ್ಜೆ ಹಾಕುತ್ತಾ 'ಗ್ಲಾಮರ್ ಗೊಂಬೆ' ಎಂದೇ ಹೆಸರಾಗಿದ್ದ ಈ ನಟಿ, ಈಗ ಸಾರ್ವಜನಿಕವಾಗಿ ನಡೆದಾಡಲು ಪಡುತ್ತಿರುವ ಕಷ್ಟವನ್ನು ಕಂಡು ಪ್ರೇಕ್ಷಕರು ಮರುಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ 2022ರ ಭೀಕರ ಕಾರು ಅಪಘಾತದ ನೆನಪು
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಟಿ ರಂಭಾ ಅವರ ವಿಡಿಯೋವೊಂದು ಭಾರಿ ಸದ್ದು ಮಾಡುತ್ತಿದೆ. ಆ ವಿಡಿಯೋದಲ್ಲಿ ರಂಭಾ ಅವರಿಗೆ ಕನಿಷ್ಠ ಪಕ್ಷ ನೇರವಾಗಿ ನಿಲ್ಲಲು ಅಥವಾ ಸರಾಗವಾಗಿ ಹೆಜ್ಜೆ ಇಡಲು ಸಾಧ್ಯವಾಗುತ್ತಿಲ್ಲ. ಯಾರದ್ದೋ ಸಹಾಯ ಪಡೆದು ಅತ್ಯಂತ ನೋವಿನಿಂದಲೇ ಒಂದೊಂದೇ ಹೆಜ್ಜೆ ಇಡುತ್ತಾ ಸಾಗುತ್ತಿರುವ ದೃಶ್ಯ ನೌಕರರನ್ನು ಕಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಅವರು ಎದುರಿಸಿದ ಭೀಕರ ಕಾರು ಅಪಘಾತದ ಹಳೆಯ ಗಾಯಗಳು ಅಥವಾ ತೀವ್ರವಾದ ಮಂಡಿ ನೋವಿನ (Knee Pain) ಸಮಸ್ಯೆಯಿಂದಾಗಿ ಅವರು ಈ ಸ್ಥಿತಿಗೆ ತಲುಪಿದ್ದಾರೆ ಎನ್ನಲಾಗುತ್ತಿದ್ದು, ಅಭಿಮಾನಿಗಳು ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ.
ರಂಭಾ ಅವರ ಈ ಇಂದಿನ ಪರಿಸ್ಥಿತಿಗೆ 2022ರ ನವೆಂಬರ್‌ನಲ್ಲಿ ಕೆನಡಾದ ಟೊರೊಂಟೊದಲ್ಲಿ ನಡೆದ ಭೀಕರ ಕಾರು ಅಪಘಾತವೇ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಅಂದು ಶಾಲೆಯಿಂದ ಮಕ್ಕಳನ್ನು ಕಾರಿನಲ್ಲಿ ಕರೆದುಕೊಂಡು ಮನೆಗೆ ಮರಳುತ್ತಿದ್ದಾಗ ರಂಭಾ ಅವರ ವಾಹನಕ್ಕೆ ಮತ್ತೊಂದು ಕಾರು ಜೋರಾಗಿ ಡಿಕ್ಕಿ ಹೊಡೆದಿತ್ತು. ಆ ಅಪಘಾತದಲ್ಲಿ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಆ ಹಳೆಯ ಅಪಘಾತದ ಪ್ರಭಾವವೇ ಈಗ ಅವರ ಆರೋಗ್ಯದ ಮೇಲೆ ಮರುಕಳಿಸಿದೆಯೇ ಎಂಬ ಪ್ರಶ್ನೆ ಮೂಡಿದೆ.
ಕನ್ನಡ ಚಿತ್ರರಂಗದಲ್ಲೂ ರಂಭಾ ಅವರ ಹೆಸರು ಹಚ್ಚಹಸಿರು. 'ಸರ್ವರ್ ಸೋಮಣ್ಣ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಅವರು, ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆ ನಟಿಸಿದ 'ಓ ಪ್ರೇಮವೇ' ಸಿನಿಮಾ ಮೂಲಕ ಯುವಕರ ಹೃದಯ ಗೆದ್ದಿದ್ದರು. ಆ ನಂತರ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಜೊತೆ 'ಭಾವ ಬಾಮೈದ' ಹಾಗೂ 'ಗಂಡುಗಲಿ ಕುಮಾರರಾಮ' ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ನೆಚ್ಚಿನ ನಟಿಯಾಗಿದ್ದರು. ಅವರು ನಟಿಸಿದ ಗ್ಲಾಮರಸ್ ಪಾತ್ರಗಳು ಹಾಗೂ ಡ್ಯಾನ್ಸ್ ಸಾಂಗ್ಸ್‌ಗಳು ಇಂದಿಗೂ ಟಿವಿಗಳಲ್ಲಿ ಧೂಳೆಬ್ಬಿಸುತ್ತವೆ.
ಬೆಳ್ಳಿತೆರೆಗೆ ಕಂಬ್ಯಾಕ್ ಮಾಡುವ ಆಸೆ
ಮದುವೆಯ ನಂತರ ಚಿತ್ರರಂಗದಿಂದ ದೂರ ಸರಿದು ವಿದೇಶದಲ್ಲಿ ಸಂಸಾರ, ಮಕ್ಕಳ ಜವಾಬ್ದಾರಿಯಲ್ಲಿ ಬ್ಯುಸಿಯಾಗಿದ್ದ ರಂಭಾ, ಇತ್ತೀಚಿನ ದಿನಗಳಲ್ಲಿ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿ (Judge) ಕಾಣಿಸಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ ಅವರಿಗೆ ಬೆಳ್ಳಿತೆರೆಗೆ ಭರ್ಜರಿಯಾಗಿ ಕಂಬ್ಯಾಕ್ ಮಾಡಬೇಕೆಂಬ ದೊಡ್ಡ ಆಸೆಯೂ ಇದೆ. ತಮಗೆ ಸೂಕ್ತವಾದ ಹಾಗೂ ತೂಕವಿರುವ ಕಥೆ ಮತ್ತು ಪಾತ್ರಗಳು ಸಿಕ್ಕರೆ ಖಂಡಿತವಾಗಿಯೂ ಸಿನಿಮಾಗಳಲ್ಲಿ ಮತ್ತೆ ಬಣ್ಣ ಹಚ್ಚುವುದಾಗಿ ಅವರು ತಮ್ಮ ಇತ್ತೀಚಿನ ಸಂದರ್ಶನಗಳಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ರಂಭಾ ಅವರು ಸಂಪೂರ್ಣ ಗುಣಮುಖರಾಗಿ ಹಳೇ ಖದರ್‌ನಲ್ಲಿ ಮರಳಿ ಬರಲಿ ಎಂಬುದೇ ಅವರ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ.

