Dailyhunt Logo
  • Light mode
    Follow system
    Dark mode
    • Play Story
    • App Story
AIRPORT: ಕೆಂಪೇಗೌಡ ಏರ್‌ಪೋರ್ಟ್‌ಗೆ ಅಂತಾರಾಷ್ಟ್ರೀಯ 'ಡೈಮಂಡ್ ಪ್ರಶಸ್ತಿ' ಗರಿ

AIRPORT: ಕೆಂಪೇಗೌಡ ಏರ್‌ಪೋರ್ಟ್‌ಗೆ ಅಂತಾರಾಷ್ಟ್ರೀಯ 'ಡೈಮಂಡ್ ಪ್ರಶಸ್ತಿ' ಗರಿ

Navasamaja.com 3 weeks ago

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (BLR Airport) ವಾಯುಯಾನ ಸುರಕ್ಷತೆ ಮತ್ತು ಅತ್ಯುತ್ತಮ ಕಾರ್ಯಾಚರಣಾ ನಿರ್ವಹಣೆಯಲ್ಲಿ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹತ್ತರ ಸಾಧನೆ ಮಾಡಿದೆ.

ಡೈಮಂಡ್ ಪ್ರಶಸ್ತಿ ಪಡೆದ ವಿಮಾನ ನಿಲ್ದಾಣ
ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್ (ACI) ಏಷ್ಯಾ-ಪೆಸಿಫಿಕ್ ಮತ್ತು ಮಿಡಲ್ ಈಸ್ಟ್ ವತಿಯಿಂದ ನೀಡಲಾಗುವ 'ಸೇಫ್ಟಿ ರೆಕಗ್ನಿಷನ್ ಅವಾರ್ಡ್ಸ್ 2026' ರಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅತ್ಯುನ್ನತ ಶ್ರೇಣಿಯ 'ಡೈಮಂಡ್ ಪ್ರಶಸ್ತಿ' ಒಲಿದು ಬಂದಿದೆ.

ಈ ಮೂಲಕ ಜಗತ್ತಿನ ಮುಂಚೂಣಿ ಮತ್ತು ಅತ್ಯಂತ ಸುರಕ್ಷಿತ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಬೆಂಗಳೂರು ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.

ವಿಶ್ವದಾದ್ಯಂತ ವಾಯುಯಾನ ವಲಯದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಹೆಚ್ಚು ಸಂಕೀರ್ಣವಾಗುತ್ತಿದೆ. ಇಂತಹ ಸವಾಲಿನ ನಡುವೆಯೂ ಬೆಂಗಳೂರು ವಿಮಾನ ನಿಲ್ದಾಣವು ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಮೂಲಕ ರನ್‌ವೇ ಸುರಕ್ಷತೆಯನ್ನು ಹೆಚ್ಚಿಸಲು ಕೈಗೊಂಡಿರುವ ನಿರಂತರ ಕ್ರಮಗಳನ್ನು ಗುರುತಿಸಿ ಈ ಗೌರವ ನೀಡಲಾಗಿದೆ. ವಿಮಾನ ನಿಲ್ದಾಣದಲ್ಲಿ ಅತ್ಯುತ್ತಮ ಸುರಕ್ಷತಾ ಕ್ರಮವನ್ನ ಅಳವಡಿಸಿಕೊಂಡು, ಕಾರ್ಯಾಚರಣೆಯ ಅಪಾಯಗಳನ್ನು ಯಶಸ್ವಿಯಾಗಿ ನಿರ್ವಹಿಸುವ ನಿಲ್ದಾಣಗಳಿಗೆ ಎಸಿಐ ಈ ಪ್ರಶಸ್ತಿಯನ್ನು ನೀಡುತ್ತದೆ. ಇದರಲ್ಲಿ 'ಡೈಮಂಡ್ ಅವಾರ್ಡ್' ಅತ್ಯುನ್ನತ ವಿಭಾಗವಾಗಿದ್ದು, ನಿರಂತರವಾಗಿ ಕಾಯ್ದುಕೊಂಡು ಬಂದ ಸುರಕ್ಷತೆಗೆ ಈ ಗರಿ ಸಿಕ್ಕಿದೆ.

ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಈ ಸಾಧನೆಯ ಹಿಂದೆ ನಿಲ್ದಾಣದ 'ರನ್‌ವೇ ಸೇಫ್ಟಿ ಟೀಮ್' (RST) ನ ಶ್ರಮ ದೊಡ್ಡದಾಗಿದೆ. ವಿವಿಧ ಪಾಲುದಾರರೊಂದಿಗೆ ಒಟ್ಟಾಗಿ ಕೆಲಸ ಮಾಡುವ ಈ ತಂಡವು ದತ್ತಾಂಶ ಆಧಾರಿತ ನವೀನ ತಂತ್ರಜ್ಞಾನಗಳನ್ನು ಜಾರಿಗೆ ತಂದಿದೆ. ರನ್‌ವೇ ಸುರಕ್ಷತೆಯ ಮೌಲ್ಯಮಾಪನಕ್ಕಾಗಿ ಭಾರತದಲ್ಲಿ ಅಭಿವೃದ್ಧಿಪಡಿಸಲಾದ ವಿಶೇಷ ಮ್ಯಾಟ್ರಿಕ್ಸ್ ವ್ಯವಸ್ಥೆ, ಅಪಘಾತ ವಲಯಗಳ (ಹಾಟ್‌ಸ್ಪಾಟ್) ನಿರ್ವಹಣೆ, ಪೈಲಟ್‌ಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು, ರನ್‌ವೇ ಮೇಲಿರುವ ಅಪಾಯಕಾರಿ ತ್ಯಾಜ್ಯ ವಸ್ತುಗಳನ್ನು ಪತ್ತೆಹಚ್ಚುವ ಸುಧಾರಿತ ನಿರ್ವಹಣಾ ವ್ಯವಸ್ಥೆ ಹಾಗೂ ವಾಯುಪ್ರದೇಶದ ಸುರಕ್ಷತೆಯನ್ನು ಹೆಚ್ಚಿಸುವ ನಿರಂತರ ಪ್ರಯತ್ನಗಳು ಈ ಪ್ರಶಸ್ತಿ ಬರಲು ಪ್ರಮುಖ ಕಾರಣವಾಗಿವೆ.

ಮಾದರಿಯಾದ ಬೆಂಗಳೂರು ಏರ್‌ಪೋರ್ಟ್‌
ಈ ಐತಿಹಾಸಿಕ ಸಾಧನೆಯ ಕುರಿತು ಮಾತನಾಡಿದ ಕೆಂಪೇಗೌಡ ವಿಮಾನ ನಿಲ್ದಾಣದ ಮುಖ್ಯ ಕಾರ್ಯಾಚರಣಾ ಅಧಿಕಾರಿ (COO) ಗಿರೀಶ್ ನಾಯರ್, ವಾಯುಯಾನ ಸುರಕ್ಷತೆ ಎಂಬುದು ಕೇವಲ ಒಂದು ವಿಭಾಗದ ಜವಾಬ್ದಾರಿಯಲ್ಲ, ಅದು ಇಡೀ ವ್ಯವಸ್ಥೆಯ ಹೊಣೆಗಾರಿಕೆಯಾಗಿದೆ ಎಂದಿದ್ದಾರೆ. ಈ ಪ್ರಶಸ್ತಿಯು ನಮ್ಮ ಸುರಕ್ಷತಾ ಚೌಕಟ್ಟಿನ ಪರಿಪೂರ್ಣತೆ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ನಾವು ಸಜ್ಜಾಗಿರುವುದನ್ನು ಸಾಬೀತುಪಡಿಸಿದೆ ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ. ಎಸಿಐ ಸಂಸ್ಥೆಯ ಮಹಾನಿರ್ದೇಶಕ ಸ್ಟೆಫಾನೊ ಬ್ಯಾರನ್ಸಿ ಅವರು ಮಾತನಾಡಿ, ದಿನದಿಂದ ದಿನಕ್ಕೆ ಸಂಕೀರ್ಣವಾಗುತ್ತಿರುವ ಇಂದಿನ ವಾತಾವರಣದಲ್ಲಿ ಪ್ರಯಾಣಿಕರ ನಂಬಿಕೆ ಉಳಿಸಿಕೊಳ್ಳಲು ಸುರಕ್ಷತೆ ಅತ್ಯಂತ ಮುಖ್ಯವಾಗಿದ್ದು, ಬೆಂಗಳೂರು ವಿಮಾನ ನಿಲ್ದಾಣವು ಅತ್ಯುನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವ ಮೂಲಕ ಮಾದರಿಯಾಗಿದೆ ಎಂದು ಅಭಿನಂದಿಸಿದ್ದಾರೆ. ಮುಂಬರುವ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಇನ್ನೂ ಹೆಚ್ಚಾಗಲಿದ್ದು, ಅದಕ್ಕೆ ತಕ್ಕಂತೆ ಸುರಕ್ಷತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದಾಗಿ ಏರ್‌ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja