ಹೈದರಾಬಾದ್: ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ತಮ್ಮ ಆಲ್ ಇಂಡಿಯಾ ಫ್ಯಾನ್ಸ್ ಅಸೋಸಿಯೇಷನ್ (AAFA) ಸಮಾವೇಶದಲ್ಲಿ ಪಾಲ್ಗೊಂಡು ಅಭಿಮಾನಿಗಳಿಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ನೆರೆದಿದ್ದ ಹಿತೈಷಿಗಳಿಗೆ ಉಚಿತ ವಿಮಾ ಯೋಜನೆಯನ್ನು ಪ್ರಕಟಿಸಿದ ಅವರು, ಇಂದಿನ ಯುವ ಪೀಳಿಗೆಗೆ ಅತಿ ಮುಖ್ಯವಾದ ಸಂದೇಶವೊಂದನ್ನು ರವಾನಿಸಿದ್ದಾರೆ.
ಅಲ್ಲದೇ, ಸಮಾವೇಶದಲ್ಲಿ ಭಾಗವಹಿಸಿದ್ದ ಸುಮಾರು 1,000 ಅಭಿಮಾನಿಗಳಿಗೆ ಅಲ್ಲು ಅರ್ಜುನ್ ಸ್ವತಃ ಅಪಘಾತ ವಿಮೆ ಕೂಡ ಮಾಡಿಸಿದ್ದಾರೆ. ಇನ್ನು ಇಂಟರ್ನೆಟ್ ಜಗತ್ತಿನಲ್ಲಿ ಹರಡುತ್ತಿರುವ ದ್ವೇಷದ ವಾತಾವರಣ ಹಾಗೂ ಅನಗತ್ಯ ಟ್ರೋಲಿಂಗ್‌ಗಳ ವಿರುದ್ಧ ಧ್ವನಿ ಎತ್ತಿದ ಅವರು, ನೆಟ್ಟಿಗರು ತಮ್ಮ ಶಕ್ತಿ ಮತ್ತು ಸಮಯವನ್ನು ಇಂತಹ ನೆಗೆಟಿವ್ ವಿಷಯಗಳಿಗಾಗಿ ವ್ಯರ್ಥ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ದೇಶದ ಮೂಲೆ ಮೂಲೆಗಳಿಂದ ಹರಿದುಬಂದ ಫ್ಯಾನ್ಸ್ ಸಾಗರ ಶಕ್ತಿಯನ್ನು ಮೊಬೈಲ್ ಬ್ಯಾಟರಿಗೆ ಹೋಲಿಸಿದ ಐಕಾನ್ ಸ್ಟಾರ್ ನಿಮಗೆ ಬೇಡದ ವಿಷಯಕ್ಕೆ ಶಕ್ತಿ ವ್ಯರ್ಥ ಮಾಡಬೇಡಿ ಇದೇ ವೇದಿಕೆಯಲ್ಲಿ ಅಭಿಮಾನಿ ಸಂಘದ ಸದಸ್ಯರ ಹಿತದೃಷ್ಟಿಯಿಂದ ಜಾರಿಗೆ ತರಲಾದ ಗ್ರೂಪ್ ಇನ್ಶೂರೆನ್ಸ್ ಪಾಲಿಸಿಯನ್ನು ಬಿಡುಗಡೆ ಮಾಡಲಾಯಿತು. ಇನ್ನು ಚಿತ್ರಗಳ ವಿಚಾರಕ್ಕೆ ಬಂದರೆ, ಅಲ್ಲು ಅರ್ಜುನ್ ಸದ್ಯ ಸ್ಟಾರ್ ಡೈರೆಕ್ಟರ್ ಅಟ್ಲಿ ನಿರ್ದೇಶನದ ಬಿಗ್ ಬಜೆಟ್ ಆಯಕ್ಷನ್ ಎಂಟರ್‌ಟೈನರ್ 'ರಾಕಾ' ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದ ಶೂಟಿಂಗ್ ಹಂತ-ಹಂತವಾಗಿ ಪ್ರಗತಿಯಲ್ಲಿದೆ.
2026ರ ಅಭಿಮಾನಿ ಸಂಘದ ಮಹಾಸಭೆಗೆ ಆಂಧ್ರ, ತೆಲಂಗಾಣ ಸೇರಿದಂತೆ ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ ಹಾಗೂ ಒಡಿಶಾದಿಂದಲೂ ಸಾವಿರಾರು ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಆಗಮಿಸಿದ್ದರು. ಅಭಿಮಾನಿಗಳ ಅಭೂತಪೂರ್ವ ಬೆಂಬಲಕ್ಕೆ ಮನಸೋತ ಅಲ್ಲು ಅರ್ಜುನ್, "ನಿಮ್ಮೆಲ್ಲರ ಈ ನಿಸ್ವಾರ್ಥ ಪ್ರೀತಿಯನ್ನು ನೋಡಿ ನನ್ನ ಹೃದಯ ತುಂಬಿ ಬಂದಿದೆ. ನಿಮ್ಮ ಈ ಜೋಶ್ ಹೀಗೆಯೇ ಮುಂದುವರಿಯಲಿ" ಎಂದು ನೆರೆದಿದ್ದವರಲ್ಲಿ ಉತ್ಸಾಹ ತುಂಬಿದರು.
ದೈನಂದಿನ ಜೀವನದಲ್ಲಿ ಸಮಯದ ನಿರ್ವಹಣೆ ಎಷ್ಟು ಮುಖ್ಯ ಎಂಬುದನ್ನು ವಿವರಿಸಲು ಅಲ್ಲು ಅರ್ಜುನ್ ಅವರು ಮಾನವನ ಶಕ್ತಿಯನ್ನು ಚಾರ್ಜ್ ಆಗುವ ಬ್ಯಾಟರಿಗೆ ಹೋಲಿಸಿದರು. "ಪ್ರತಿ ಮುಂಜಾನೆ ನಮ್ಮ ದೇಹ 100% ಚಾರ್ಜ್‌ನೊಂದಿಗೆ ಕಾರ್ಯಾರಂಭ ಮಾಡುತ್ತದೆ. ದಿನವಿಡೀ ದುಡಿಯುವಾಗ ಈ ಶಕ್ತಿ ಕ್ರಮೇಣ ಕ್ಷೀಣಿಸುತ್ತಾ ಸಾಗುತ್ತದೆ. ಈ 100 ಪ್ರತಿಶತ ಚಾರ್ಜ್ ಎಂಬುದನ್ನು ಹಣ, ಸಮಯ ಅಥವಾ ನಮ್ಮ ಸಾಮರ್ಥ್ಯ ಎಂದು ಭಾವಿಸಬಹುದು. ಆದರೆ ಇದನ್ನು ನಾವು ಎಲ್ಲಿ ಬಳಸುತ್ತಿದ್ದೇವೆ ಎಂಬ ಜಾಗರೂಕತೆ ನಮಗಿರಬೇಕು" ಎಂದರು.
ಸೋಶಿಯಲ್ ಮೀಡಿಯಾ ಟ್ರೋಲ್‌ಗಳ ಬಗ್ಗೆ ಮಾತನಾಡುತ್ತಾ, "ನಿಮಗೆ ಯಾರಾದರೂ ಇಷ್ಟವಾಗದಿದ್ದರೆ ಅವರ ಕಾಲೆಳೆಯಲು ಅಥವಾ ದ್ವೇಷಿಸಲು ಒಂದು ಸೆಕೆಂಡ್ ಕೂಡ ವ್ಯರ್ಥ ಮಾಡಬೇಡಿ. ನಮ್ಮ ಜೇಬಿನಲ್ಲಿರುವ 100 ರೂಪಾಯಿಯನ್ನು ನಮಗೆ ಬೇಡದ ವಸ್ತುವಿಗೆ ಖರ್ಚು ಮಾಡುವುದಿಲ್ಲ ಎಂದಮೇಲೆ, ನಮಗೆ ಖುಷಿ ಕೊಡದ ವಿಷಯಗಳಿಗಾಗಿ ನಮ್ಮ ಅಮೂಲ್ಯ ಶಕ್ತಿಯನ್ನು ಏಕೆ ಧಾರೆ ಎರೆಯಬೇಕು? ಅದರ ಬದಲು ನಿಮಗಿಷ್ಟವಾದ, ನಿಮ್ಮ ಮುಖದಲ್ಲಿ ನಗು ತರಿಸುವ ಸಕಾರಾತ್ಮಕ ಕೆಲಸಗಳತ್ತ ಗಮನಹರಿಸಿ" ಎಂದು ಕಿವಿಮಾತು ಹೇಳಿದರು.

