ಬೆಂಗಳೂರು : ರಸ್ತೆ ಅಪಘಾತ, ಹೃದಯಾಘಾತ ಅಥವಾ ಪ್ರಸವದಂತಹ ತುರ್ತು ಸಂದರ್ಭಗಳಲ್ಲಿ (Emergency) ರೋಗಿಗಳನ್ನು ಸಕಾಲದಲ್ಲಿ ಆಸ್ಪತ್ರೆಗೆ ತಲುಪಿಸಿ ಪ್ರಾಣ ಉಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ರಾಜ್ಯಾದ್ಯಂತ ಇನ್ನು ಮುಂದೆ ತುರ್ತು ಕರೆ ಬಂದ ಕೇವಲ ಹದಿನೈದು ನಿಮಿಷಗಳ ಒಳಗೆ ಆಂಬ್ಯುಲೆನ್ಸ್ (Ambulance) ನಿಗದಿತ ಸ್ಥಳಕ್ಕೆ ತಲುಪಬೇಕು ಎಂಬ ಕಟ್ಟುನಿಟ್ಟಿನ ಗಡುವನ್ನು (Dead line) ವಿಧಿಸಲಾಗುತ್ತಿದೆ.
ಈ ನಿಗದಿತ ಅವಧಿಯೊಳಗೆ ಆಂಬ್ಯುಲೆನ್ಸ್ ಬಾರದೆ ವಿಳಂಬವಾದರೆ, ಸಂಬಂಧಪಟ್ಟ ಆಂಬ್ಯುಲೆನ್ಸ್ ಸೇವೆಗೆ ಐದು ಸಾವಿರ ರೂಪಾಯಿಗಳ ಭಾರಿ ದಂಡ ವಿಧಿಸುವ ಹೊಸ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗುತ್ತಿದೆ. ಸಾಮಾನ್ಯವಾಗಿ ತುರ್ತು ಆರೋಗ್ಯ ಸಮಸ್ಯೆಯ ಸಂದರ್ಭದಲ್ಲಿ ಕರೆ ಮಾಡಿದರೆ ಆಂಬ್ಯುಲೆನ್ಸ್‌ಗಳು ಗಂಟೆಗಟ್ಟಲೆ ತಡವಾಗಿ ಬರುತ್ತವೆ ಎಂಬ ಸಾರ್ವಜನಿಕ ದೂರುಗಳು ವ್ಯಾಪಕವಾಗಿ ಕೇಳಿಬರುತ್ತಿದ್ದವು. ಈ ವಿಳಂಬದಿಂದಾಗಿ ದಾರಿಯ ಮಧ್ಯದಲ್ಲೇ ಹತ್ತಾರು ಅಮೂಲ್ಯ ಜೀವಗಳು ಕೊನೆಯುಸಿರೆಳೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಇಂತಹ ಪರಿಸ್ಥಿತಿಗೆ ಮುಕ್ತಿ ಹಾಡಲು ಈ ಕಠಿಣ ನಿರ್ಧಾರ ಕೈಗೊಂಡಿದೆ. ರಾಷ್ಟ್ರೀಯ ಮಟ್ಟದಲ್ಲಿ ಆಂಬ್ಯುಲೆನ್ಸ್ ತಲುಪಲು ಇಪ್ಪತ್ತು ನಿಮಿಷಗಳ ಮಾನದಂಡವಿದ್ದರೂ, ಕರ್ನಾಟಕದಲ್ಲಿ ಇದನ್ನು ಹದಿನೈದು ನಿಮಿಷಕ್ಕೆ ಕಡಿತಗೊಳಿಸಿ ಇಡೀ ದೇಶದಲ್ಲೇ ಅತ್ಯಂತ ವೇಗದ ತುರ್ತು ಸೇವೆ ನೀಡಲು ಗುರಿ ಇಟ್ಟುಕೊಳ್ಳಲಾಗಿದೆ. ಕರೆ ಬಂದ ತಕ್ಷಣವೇ 15 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿದರೆ ಶೇಕಡಾ ತೊಂಬತ್ತರಷ್ಟು ರೋಗಿಗಳನ್ನು ಪ್ರಾಣಾಪಾಯದಿಂದ ಪಾರು ಮಾಡಬಹುದು ಎಂದು ಅಂದಾಜಿಸಲಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಜ್ಯಾದ್ಯಂತ ಸುಮಾರು 700 ರಿಂದ 800 ರಷ್ಟು ಸುಸ್ಥಿತಿಯಲ್ಲಿರುವ ಆಂಬ್ಯುಲೆನ್ಸ್‌ಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಹಳೆಯ ಮತ್ತು ಪದೇ ಪದೇ ಕೆಟ್ಟು ನಿಲ್ಲುವ ವಾಹನಗಳ ಬದಲಿಗೆ ಅತ್ಯಾಧುನಿಕ ಲೈಫ್ ಸಪೋರ್ಟ್ ಸೌಲಭ್ಯವಿರುವ ಹೊಸ ವಾಹನಗಳನ್ನು ರಸ್ತೆಗಿಳಿಸಲು ತೀರ್ಮಾನಿಸಲಾಗಿದೆ. ಇದರೊಂದಿಗೆ, ಇಡೀ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲು ಸರ್ಕಾರ ಮುಂದಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ಕೇಂದ್ರೀಕೃತ ಹೈಟೆಕ್ ಕಂಟ್ರೋಲ್ ರೂಮ್ ಸ್ಥಾಪಿಸಲಾಗುತ್ತಿದ್ದು, ಇದರಿಂದ ಕರೆ ಮಾಡಿದವರ ನಿಖರವಾದ ಲೊಕೇಶನ್ ಪತ್ತೆ ಮಾಡುವುದು ಸುಲಭವಾಗಲಿದೆ. ಸಾರ್ವಜನಿಕರು ಕೂಡ ಖಾಸಗಿ ಟ್ಯಾಕ್ಸಿಗಳ ಮಾದರಿಯಲ್ಲಿ ಆಂಬ್ಯುಲೆನ್ಸ್ ಎಲ್ಲಿದೆ ಮತ್ತು ಎಷ್ಟು ಹೊತ್ತಿಗೆ ಬರಲಿದೆ ಎಂಬುದನ್ನು ತಮ್ಮ ಮೊಬೈಲ್ ಮೂಲಕವೇ ರಿಯಲ್-ಟೈಮ್ ಆಗಿ ಟ್ರ್ಯಾಕ್ ಮಾಡಬಹುದಾದ ತಂತ್ರಜ್ಞಾನವನ್ನು ತರಲಾಗುತ್ತಿದೆ. ಚಾಲಕರು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿಗೆ ತುರ್ತು ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಲು ವಿಶೇಷ ತರಬೇತಿಯನ್ನೂ ನೀಡಲಾಗುತ್ತಿದೆ. ಸಚಿವ ಸಂಪುಟದ ಅನುಮೋದನೆ ದೊರೆತ ಮುಂದಿನ ಮೂರು ತಿಂಗಳ ಅವಧಿಯೊಳಗೆ ಈ ಹೊಸ ನಿಯಮಗಳು ಮತ್ತು ಹೈಟೆಕ್ ಕಂಟ್ರೋಲ್ ರೂಮ್ ವ್ಯವಸ್ಥೆಯು ರಾಜ್ಯಾದ್ಯಂತ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದ್ದು, ಸಾರ್ವಜನಿಕರ ಜೀವ ರಕ್ಷಣೆಗೆ ಹೊಸ ಬಲ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

