ವಾಷಿಂಗ್ಟನ್: ಭಾರತ(India) ಮತ್ತು ಅಮೆರಿಕ(America) ನಡುವಿನ ಆರ್ಥಿಕ ಬಾಂಧವ್ಯದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಯಾಗಲಿದ್ದು, ಉಭಯ ದೇಶಗಳ ನಡುವಿನ ಐತಿಹಾಸಿಕ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲು ನಾವು ಬಹಳ ಹತ್ತಿರದಲ್ಲಿದ್ದೇವೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಾಷಿಂಗ್ಟನ್‌ನ ಕ್ಯಾಪಿಟಲ್ ಹಿಲ್‌ನಲ್ಲಿ ಫೌಂಡೇಷನ್ ಫಾರ್ ಇಂಡಿಯಾ ಆಯಂಡ್ ಇಂಡಿಯನ್ ಡಯಸ್ಪೊರಾ ಸ್ಟಡೀಸ್ (ಎಫ್‌ಐಐಡಿಎಸ್) ವತಿಯಿಂದ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅಮೆರಿಕ ಸ್ಟೇಟ್ ಡಿಪಾರ್ಟ್‌ಮೆಂಟ್‌ನ ಉಪ ಸಹಾಯಕ ಕಾರ್ಯದರ್ಶಿ ಬೆಥನಿ ಪೌಲೋಸ್ ಮಾರಿಸನ್(Bethany Paulos Morrison) ಈ ಮಹತ್ವದ ವಿಷಯವನ್ನು ಹಂಚಿಕೊಂಡಿದ್ದಾರೆ. ಮೋದಿ-ಟ್ರಂಪ್ ಮಾತುಕತೆ ಶೀಘ್ರದಲ್ಲೇ ಫಲ 500 ಬಿಲಿಯನ್ ಡಾಲರ್ ಮೊತ್ತದ ಬೃಹತ್ ವ್ಯಾಪಾರ ಇತ್ತೀಚೆಗೆ ನಡೆದ ಸೆಲೆಕ್ಟ್ ಯುಎಸ್‌ಎ ಹೂಡಿಕೆ ಶೃಂಗಸಭೆಯಲ್ಲಿ ಭಾರತೀಯ ಉದ್ಯಮಿಗಳಿಂದ 20 ಬಿಲಿಯನ್ ಅಮೆರಿಕ ಡಾಲರ್‌ನಷ್ಟು ಹೊಸ ಹೂಡಿಕೆಯ ಬದ್ಧತೆ ವ್ಯಕ್ತವಾಗಿದ್ದು, ಅದರಲ್ಲಿ 1.1 ಬಿಲಿಯನ್ ಅಮೆರಿಕ ಡಾಲರ್ ತಕ್ಷಣದ ಹೂಡಿಕೆಯೂ ಸೇರಿದೆ. ಇದು ಸೆಲೆಕ್ಟ್ ಯುಎಸ್‌ಎ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹೂಡಿಕೆಯ ಘೋಷಣೆಯಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಈ ಪ್ರಸ್ತಾವಿತ ವ್ಯಾಪಾರ ಒಪ್ಪಂದದ ಕೊನೆಯ ಹಂತದ ಚರ್ಚೆಗಳಿಗಾಗಿ ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಅವರು ಪ್ರಸ್ತುತ ಭಾರತಕ್ಕೆ ಭೇಟಿ ನೀಡಿದ್ದು, ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಮಾತುಕತೆ ನಡೆಸುತ್ತಿರುವ ಸಂದರ್ಭದಲ್ಲೇ ಅಮೆರಿಕದಿಂದ ಈ ಧನಾತ್ಮಕ ಹೇಳಿಕೆ ಹೊರಬಿದ್ದಿರುವುದು ರಕ್ಷಣಾ ಮತ್ತು ಆರ್ಥಿಕ ವಲಯದಲ್ಲಿ ಕುತೂಹಲ ಮೂಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೇವಲ ರಾಜತಾಂತ್ರಿಕ ಸಭೆಗಳಿಗಷ್ಟೇ ಸೀಮಿತವಾಗದೆ, ದೃಢವಾದ ಫಲಿತಾಂಶ ಆಧಾರಿತ ಸಂಬಂಧವನ್ನು ಮುನ್ನಡೆಸುತ್ತಿದ್ದಾರೆ ಎಂದು ಮಾರಿಸನ್ ಶ್ಲಾಘಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಟ್ರಂಪ್ ಮತ್ತು ಮೋದಿ ನಡುವೆ ನಡೆದಿದ್ದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆಗಳನ್ನು ನೆನಪಿಸಿದ ಅವರು, ಭಾರತ ಮತ್ತು ಅಮೆರಿಕ ನಡುವಿನ ಬಾಂಧವ್ಯವನ್ನು ಕೇವಲ ಸಭೆಗಳ ಮೂಲಕ ಅಳೆಯಲು ಸಾಧ್ಯವಿಲ್ಲ, ಬದಲಿಗೆ ಅದರಿಂದ ಹೊರಬರುವ ಸಕಾರಾತ್ಮಕ ಫಲಿತಾಂಶಗಳ ಮೂಲಕವೇ ಅಳೆಯಬೇಕು ಎಂದು ಪ್ರತಿಪಾದಿಸಿದರು. ಉಭಯ ದೇಶಗಳ ನಡುವಿನ ವ್ಯಾಪಾರ ಸ್ಥಿತಿಗತಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ಬಳಿಕ, ಕಳೆದ ಫೆಬ್ರುವರಿಯಲ್ಲಿ ಈ ಐತಿಹಾಸಿಕ ವ್ಯಾಪಾರ ಒಪ್ಪಂದವನ್ನು ಮುಕ್ತಾಯಗೊಳಿಸುವ ಅಧಿಕೃತ ಉದ್ದೇಶವನ್ನು ಪ್ರಕಟಿಸಲಾಗಿತ್ತು. ಈಗ ಆ ಗುರಿ ಸಾಧನೆಗೆ ನಾವು ತೀರಾ ಸಮೀಪದಲ್ಲಿದ್ದೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಪ್ರಸ್ತಾವಿತ ವ್ಯಾಪಾರ ಒಪ್ಪಂದವು ಜಾರಿಗೆ ಬಂದರೆ ಭಾರತದ 140 ಕೋಟಿ ಜನಸಂಖ್ಯೆಯ ಬೃಹತ್ ಮತ್ತು ಪ್ರಭಾವಿ ಮಾರುಕಟ್ಟೆಯು ಅಮೆರಿಕದ ಸರಕು ಹಾಗೂ ಸೇವೆಗಳಿಗೆ ಮುಕ್ತವಾಗಿ ಲಭ್ಯವಾಗಲಿದೆ. ಇದರೊಂದಿಗೆ ಅಮೆರಿಕ ಆಡಳಿತವು 2030ರ ವೇಳೆಗೆ ಉಭಯ ದೇಶಗಳ ನಡುವೆ 500 ಬಿಲಿಯನ್ ಡಾಲರ್ ಮೊತ್ತದ ಬೃಹತ್ ವ್ಯಾಪಾರವನ್ನು ಸಾಧಿಸುವ ಮಹತ್ವಾಕಾಂಕ್ಷೆಯ ಮಿಷನ್ 500 ಯೋಜನೆಯನ್ನು ಅತ್ಯಂತ ಪ್ರಜ್ಞೆಯೊಂದಿಗೆ ಮುನ್ನಡೆಸುತ್ತಿದೆ ಎಂದು ಮಾರಿಸನ್ ತಿಳಿಸಿದ್ದಾರೆ. 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಅಮೆರಿಕವು ಭಾರತದ ಎರಡನೇ ಅತಿ ದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿ ಹೊರಹೊಮ್ಮಿದ್ದು, ಇದಕ್ಕೆ ಪೂರಕವಾಗಿ ಭಾರತೀಯ ಕಂಪನಿಗಳು ಸಹ ಅಮೆರಿಕದಲ್ಲಿ ತಮ್ಮ ಹೂಡಿಕೆಯನ್ನು ಗಣನೀಯವಾಗಿ ಹೆಚ್ಚಿಸುತ್ತಿವೆ.

