Dailyhunt
ASSAM ELECTION: ಕಾಂಗ್ರೆಸ್‌ ಅಸ್ಸಾಂನಲ್ಲಿ ಶಾಕ್‌, ಚುನಾವಣೆಗೂ ಮೊದಲೇ ಪಕ್ಷ ತೊರೆದ ಅಭ್ಯರ್ಥಿ

ASSAM ELECTION: ಕಾಂಗ್ರೆಸ್‌ ಅಸ್ಸಾಂನಲ್ಲಿ ಶಾಕ್‌, ಚುನಾವಣೆಗೂ ಮೊದಲೇ ಪಕ್ಷ ತೊರೆದ ಅಭ್ಯರ್ಥಿ

Navasamaja.com 4 days ago

ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಯ (Assam Election) ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಕಾಂಗ್ರೆಸ್ ಪಾಲಿಗೆ ಬರಸಿಡಿಲು ಬಡಿದಂತಾಗಿದೆ. ಉದಲ್ಗುರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುರೇನ್ ಡೈಮರಿ ಅವರು ಚುನಾವಣೆಗೂ ಮುನ್ನವೇ ಪಕ್ಷಕ್ಕೆ ಗುಡ್‌ಬೈ ಹೇಳುವ ನಿರ್ಧಾರ ಪ್ರಕಟಿಸಿದ್ದಾರೆ.

ಏಪ್ರಿಲ್ 9 ಮತದಾನ ನಡೆಯಲಿರುವ ಹೊತ್ತಿನಲ್ಲಿ ಅಭ್ಯರ್ಥಿಯೇ ಬಂಡಾಯ ಎದ್ದಿರುವುದು ಕಾಂಗ್ರೆಸ್ ಮೈತ್ರಿಕೂಟಕ್ಕೆ ಭಾರಿ ಹಿನ್ನಡೆ ತಂದಿದೆ.

ಕಾಂಗ್ರೆಸ್‌ ವಿರುದ್ಧ ಆರೋಪ

ಕಾಂಗ್ರೆಸ್ ನಾಯಕತ್ವದ ವಿರುದ್ಧ ಗಂಭೀರ ಆರೋಪ ಮಾಡಿರುವ ಸುರೇನ್ ಡೈಮರಿ, ಚುನಾವಣಾ ಪ್ರಚಾರದ ಉದ್ದಕ್ಕೂ ಪಕ್ಷದ ನಾಯಕರಿಂದ ನನಗೆ ಯಾವುದೇ ರೀತಿಯ ಬೆಂಬಲ ಸಿಗಲಿಲ್ಲ. ನನ್ನ ಉಮೇದುವಾರಿಕೆಯನ್ನು ಪಕ್ಷವು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ನಾಯಕರನ್ನು ಸಂಪರ್ಕಿಸಲು ನಾನು ಪದೇ ಪದೇ ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆದ್ದರಿಂದ ನಾನು ಅಸಮಾಧಾನಗೊಂಡು ಪಕ್ಷ ತೊರೆಯಲು ನಿರ್ಧರಿಸಿದ್ದೇನೆ ಎಂದು ತಿಳಿಸಿದ್ದಾರೆ.

ಸುರೇನ್ ಅವರು ಪಕ್ಷ ತೊರೆಯುವುದಾಗಿ ಘೋಷಿಸಿದರೂ ತಾಂತ್ರಿಕವಾಗಿ ಅವರು ಅಭ್ಯರ್ಥಿಯಾಗಿಯೇ ಮುಂದುವರಿಯಲಿದ್ದಾರೆ. ನಾಮಪತ್ರ ಹಿಂತೆಗೆದುಕೊಳ್ಳುವ ಗಡುವು ಈಗಾಗಲೇ ಮುಗಿದಿದೆ. ಬ್ಯಾಲೆಟ್ ಪೇಪರ್ ಹಾಗೂ ಇವಿಎಂ ಯಂತ್ರಗಳಲ್ಲಿ ಸುರೇನ್ ಡೈಮರಿ ಅವರ ಹೆಸರು ಮತ್ತು ಕಾಂಗ್ರೆಸ್ ಚಿಹ್ನೆ ಮುದ್ರಿತವಾಗಿದೆ. ಹೀಗಾಗಿ ಮತದಾನದ ಸಮಯದಲ್ಲಿ ಜನರು ಅವರಿಗೆ ಮತ ಚಲಾಯಿಸಲು ಅವಕಾಶವಿರುತ್ತದೆ.

ಕಾಂಗ್ರೆಸ್‌ಗೆ ಕುಟುಂಬವೇ ಮೊದಲು
ಸುರೇನ್ ಅವರು ಇನ್ನೂ ಅಧಿಕೃತವಾಗಿ ರಾಜೀನಾಮೆ ಪತ್ರ ಸಲ್ಲಿಸಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆಯಾದರೂ, ಅವರು ಅಖಾಡದಿಂದ ಹಿಂದೆ ಸರಿದಿರುವುದು ಮತದಾರರ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಈಗಾಗಲೇ ಅಸ್ಸಾಂನಲ್ಲಿ ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಘಟಾನುಘಟಿ ನಾಯಕರು ಕಾಂಗ್ರೆಸ್‌ಗೆ ಕುಟುಂಬವೇ ಮೊದಲು, ನಮಗೆ ದೇಶವೇ ಮೊದಲು ಎಂದು ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ ಈ ವಿದ್ಯಮಾನ ನಡೆದಿದೆ. ಉದಲ್ಗುರಿ ಕ್ಷೇತ್ರದಲ್ಲಿ ಈಗ ಕಾಂಗ್ರೆಸ್ ಮತಗಳು ಚದುರಿಹೋಗುವ ಭೀತಿ ಎದುರಾಗಿದ್ದು, ವಿರೋಧ ಪಕ್ಷಗಳ ಪಾಲಿಗೆ ಇದು ವರದಾನವಾಗುವ ಸಾಧ್ಯತೆಯಿದೆ. ನಾಳೆ ನಡೆಯಲಿರುವ ಮತದಾನದಲ್ಲಿ ಈ ಹೈಡ್ರಾಮಾ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja