Dailyhunt Logo
  • Light mode
    Follow system
    Dark mode
    • Play Story
    • App Story
BANGLADESH: ಶೇಖ್ ಹಸೀನಾ ದೆಹಲಿ ಸುದ್ದಿಗೋಷ್ಠಿಗೆ ಬಾಂಗ್ಲಾದೇಶ ಕಳವಳ: ಅಸ್ಥಿರತೆ ಸೃಷ್ಟಿಸದಂತೆ ಪ್ರಧಾನಿ ತಾರಿಕ್ ರೆಹಮಾನ್ ಎಚ್ಚರಿಕೆ

BANGLADESH: ಶೇಖ್ ಹಸೀನಾ ದೆಹಲಿ ಸುದ್ದಿಗೋಷ್ಠಿಗೆ ಬಾಂಗ್ಲಾದೇಶ ಕಳವಳ: ಅಸ್ಥಿರತೆ ಸೃಷ್ಟಿಸದಂತೆ ಪ್ರಧಾನಿ ತಾರಿಕ್ ರೆಹಮಾನ್ ಎಚ್ಚರಿಕೆ

Navasamaja.com 1 week ago

ಢಾಕಾ: ಬಾಂಗ್ಲಾದೇಶದಲ್ಲಿ (Bangladesh) ವಿದ್ಯಾರ್ಥಿಗಳ ಬೃಹತ್ ದಂಗೆಯ ಬಳಿಕ ಅಧಿಕಾರದಿಂದ ಕೆಳಗಿಳಿದು ಭಾರತದಲ್ಲಿ ತಲೆಮರೆಸಿಕೊಂಡಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ, (Sheikh Hasina) ಅಧಿಕಾರ ಕಳೆದುಕೊಂಡು ಎರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ.

ಆದರೆ ಈ ವಿಚಾರವಾಗಿ ಅಲ್ಲಿನ ಈಗಿನ ಪ್ರಧಾನಿ ತಾರಿಕ್ ರೆಹಮಾನ್ (PM Tarique Rahman) ಕಳವಳ ವ್ಯಕ್ತಪಡಿಸಿದ್ದಾರೆ.

ತಮ್ಮ ಸ್ವದೇಶಕ್ಕೆ ಹಿಂತಿರುಗುವ ಬಗ್ಗೆ ಮಾತು

ನವದೆಹಲಿಯ ಫಾರಿನ್ ಕರಸ್ಪಾಂಡೆಂಟ್ಸ್ ಕ್ಲಬ್ ಆಫ್ ಸೌತ್ ಏಷ್ಯಾ (FCC) ಆಯೋಜಿಸಿರುವ ವರ್ಚುವಲ್ ಕಾರ್ಯಕ್ರಮದಲ್ಲಿ ಶೇಖ್ ಹಸೀನಾ ಭಾಗವಹಿಸಲಿದ್ದಾರೆ. ನವದೆಹಲಿಯ ಮಥುರಾ ರಸ್ತೆಯಲ್ಲಿರುವ ಸರ್ ಮಾರ್ಕ್ ಟಲ್ಲಿ ಸಭಾಂಗಣದಲ್ಲಿ ಸಂಜೆ 6 ರಿಂದ 7.30 ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಬಾಂಗ್ಲಾದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿ, ಪ್ರಜಾಪ್ರಭುತ್ವದ ಮರುಸ್ಥಾಪನೆ ಹಾಗೂ ತಮ್ಮ ಸ್ವದೇಶಕ್ಕೆ ಹಿಂತಿರುಗುವ ರಾಜಕೀಯ ರೋಡ್‌ಮ್ಯಾಪ್ ಕುರಿತು ಅವರು ಸುದೀರ್ಘವಾಗಿ ಮಾತನಾಡಲಿದ್ದಾರೆ.

ಈ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಶೇಖ್ ಹಸೀನಾ ಅವರೊಂದಿಗೆ ಅವರ ಪುತ್ರ ಸಜೀಬ್ ವಾಝೇದ್ ಜೋಯ್, ಬಾಂಗ್ಲಾದೇಶದ ಮಾಜಿ ಸಚಿವ ಮೊಹಿಬುಲ್ ಹಸನ್ ಚೌಧರಿ ನೌಫೆಲ್, ಪ್ರಸಿದ್ಧ ಕ್ರಿಕೆಟಿಗ ಶಕೀಬ್ ಅಲ್ ಹಸನ್, ಮಾಜಿ ರಾಜತಾಂತ್ರಿಕ ಅನಿಮುಲ್ ಹಕ್ ಪಲಾಶ್, ಬರಹಗಾರ ಅಬು ಒಬೈದಾ ಅರಿನ್ ಹಾಗೂ ವಕೀಲ ಶಾ ಮೊಹಮ್ಮದ್ ಬಕ್ತಿಯಾರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನ ಎಎಫ್‌ಪಿಗೆ ಇಮೇಲ್ ಮೂಲಕ ಪ್ರತಿಕ್ರಿಯಿಸಿರುವ ಹಸೀನಾ, ತಮ್ಮ ದೇಶಕ್ಕೆ ಹಿಂತಿರುಗಲು ತೀವ್ರ ಕಾನೂನು ಮತ್ತು ರಾಜಕೀಯ ಸವಾಲುಗಳಿದ್ದರೂ ಹಿಂಜರಿಯುವುದಿಲ್ಲ ಎಂದಿದ್ದಾರೆ. "ನನ್ನನ್ನು ಕೊಲ್ಲಬಹುದು, ಬಂಧಿಸಬಹುದು ಅಥವಾ ಜೈಲಿಗೆ ಅಟ್ಟಬಹುದು, ನನ್ನ ಭವಿಷ್ಯದ ಅರಿವು ನನಗಿದೆ. ಆದರೂ ನನ್ನ ಜನ ನನ್ನನ್ನು ಕರೆಯುತ್ತಿರುವುದರಿಂದ ನಾನು ದೇಶಕ್ಕೆ ಮರಳಲು ಸಿದ್ಧಳಾಗಿದ್ದೇನೆ" ಎಂದು ಅವರು ಕಳವಳ ಮತ್ತು ಧೈರ್ಯ ಎರಡನ್ನೂ ವ್ಯಕ್ತಪಡಿಸಿದ್ದಾರೆ. 2026ರ ಡಿಸೆಂಬರ್ ವೇಳೆಗೆ ತಾವು ಬಾಂಗ್ಲಾದೇಶಕ್ಕೆ ಮರಳಿ ನ್ಯಾಯಾಲಯಕ್ಕೆ ಶರಣಾಗುವುದಾಗಿ ಅವರು ತಿಳಿಸಿದ್ದಾರೆ.

ಎಚ್ಚರಿಕೆಗೆ ನೀಡಿದ ಬಾಂಗ್ಲಾ ಪ್ರಧಾನಿ

ಇನ್ನೊಂದೆಡೆ, ಶೇಖ್ ಹಸೀನಾ ಅವರ ಈ ದೆಹಲಿ ಸುದ್ದಿಗೋಷ್ಠಿಯ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಪ್ರಸ್ತುತ ಪ್ರಧಾನಿ ತಾರಿಕ್ ರೆಹಮಾನ್ ಕಳವಳ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಅನಗತ್ಯ ವಿವಾದ ಮತ್ತು ಅಸ್ಥಿರತೆಯನ್ನು ಸೃಷ್ಟಿಸುವುದರಿಂದ ಅಧಿಕಾರದಿಂದ ಉಚ್ಚಾಟಿತಗೊಂಡು ತಲೆಮರೆಸಿಕೊಂಡಿರುವ ಸರ್ವಾಧಿಕಾರಿ ಶಕ್ತಿಗಳು ಮತ್ತೆ ಶಕ್ತಿ ಪಡೆದುಕೊಳ್ಳಲು ನೆರವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಬಾಂಗ್ಲಾದೇಶ ಸರ್ಕಾರವು ಈ ಹಿಂದೆ ಭಾರತದಿಂದ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಕೋರಿತ್ತಾದರೂ, ಹಸೀನಾ ಮಾತ್ರ ಭಾರತದಲ್ಲಿ ರಾಜಕೀಯವಾಗಿ ಸಕ್ರಿಯರಾಗಲು ಯತ್ನಿಸುತ್ತಿರುವುದು ಉಭಯ ದೇಶಗಳ ರಾಜಕೀಯ ವಲಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja