Dailyhunt Logo
  • Light mode
    Follow system
    Dark mode
    • Play Story
    • App Story
BELAGAVI :  ನೀರು ಕೊಡಿ ಇಲ್ಲಾ ದಯಾಮರಣ ಕೊಡಿ : ಕಿತ್ತೂರಿನಲ್ಲಿ ನೀರಿಗಾಗಿ ದಂಪತಿ ಪ್ರೊಟೆಸ್ಟ್ !

BELAGAVI : ನೀರು ಕೊಡಿ ಇಲ್ಲಾ ದಯಾಮರಣ ಕೊಡಿ : ಕಿತ್ತೂರಿನಲ್ಲಿ ನೀರಿಗಾಗಿ ದಂಪತಿ ಪ್ರೊಟೆಸ್ಟ್ !

Navasamaja.com 2 weeks ago

ಕಿತ್ತೂರು (ಬೆಳಗಾವಿ): ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಕುಡಿಯುವ ನೀರಿನಂತಹ (Drinking Water) ಮೂಲಭೂತ ಸೌಲಭ್ಯ ಕಳೆದುಕೊಂಡು ಕಂಗೆಟ್ಟಿರುವ ದಂಪತಿಯೊಬ್ಬರು ತಮಗೆ ನ್ಯಾಯ ಸಿಗದಿದ್ದರೆ ದಯಾಮರಣ (Euthanasia) ಸತ್ಯಾಗ್ರಹ ಕೈಗೊಳ್ಳುವುದಾಗಿ ಬೆಳಗಾವಿ (Belagavi) ಜಿಲ್ಲೆಯ ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.

ಕಿತ್ತೂರು ಪಟ್ಟಣದ ನಿವಾಸಿಗಳಾದ ಮಂಜುನಾಥ ರುದ್ರಪ್ಪ ಸವದಿ ಹಾಗೂ ಶೃತಿ ಮಂಜುನಾಥ ಸವದಿ ಈ ರೀತಿ ತಹಶೀಲ್ದಾರರಿಗೆ ಅಧಿಕೃತವಾಗಿ ಮನವಿ ಪತ್ರ ಸಲ್ಲಿಸಿ ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಕಳೆದ ಕೆಲವು ದಿನಗಳಿಂದ ತಮ್ಮ ಮನೆಗೆ ಬರುತ್ತಿದ್ದ ಕುಡಿಯುವ ನೀರಿನ ನಲ್ಲಿ ಸಂಪರ್ಕವನ್ನು ಸ್ಥಳೀಯ ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿಗಳು ಉದ್ದೇಶಪೂರ್ವಕವಾಗಿ ಬಂದ್ ಮಾಡಿದ್ದಾರೆ ಎಂದು ದಂಪತಿ ಗಂಭೀರವಾಗಿ ಆರೋಪಿಸಿದ್ದಾರೆ.

ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಲಾಖೆಗೆ ಹಲವು ಬಾರಿ ಅಲೆದು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಮತ್ತು ತಮಗೆ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು ದಂಪತಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಜೀವನಾಧಾರವಾಗಿರುವ ಕುಡಿಯುವ ನೀರಿನ ಸೌಲಭ್ಯವೇ ಇಲ್ಲದಂತಾಗಿರುವುದರಿಂದ ಇಡೀ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ದಿನನಿತ್ಯದ ಬದುಕಿಗಾಗಿ ತೀವ್ರ ಮಾನಸಿಕ ಹಾಗೂ ಆರ್ಥಿಕ ಒತ್ತಡ ಎದುರಿಸುತ್ತಿರುವುದಾಗಿ ಅವರು ಅಳಲು ತೋಡಿಕೊಂಡಿದ್ದಾರೆ.

ತಮಗೆ ಆಗುತ್ತಿರುವ ಈ ಅನ್ಯಾಯವನ್ನು ಸ್ಥಳೀಯ ಆಡಳಿತವು ತಕ್ಷಣವೇ ಸರಿಪಡಿಸಬೇಕು ಮತ್ತು ಕಡಿತಗೊಳಿಸಲಾಗಿರುವ ಕುಡಿಯುವ ನೀರಿನ ವ್ಯವಸ್ಥೆಯನ್ನು ಪುನಃ ಕಲ್ಪಿಸಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಒಂದು ವೇಳೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ನೀರು ಪೂರೈಕೆ ಮಾಡದಿದ್ದಲ್ಲಿ, ಮುಂಬರುವ ಜುಲೈ 6 ರಿಂದ ಕಿತ್ತೂರು ಪಟ್ಟಣ ಪಂಚಾಯತಿ ಕಚೇರಿ ಎದುರೇ ಕುಳಿತು ದಯಾಮರಣ ಸತ್ಯಾಗ್ರಹ ನಡೆಸುವುದಾಗಿ ದಂಪತಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja