Dailyhunt
BENGALURU: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹರಿದುಬಂತು ಕೋಟಿ ಕೋಟಿ ಆದಾಯ

BENGALURU: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹರಿದುಬಂತು ಕೋಟಿ ಕೋಟಿ ಆದಾಯ

Navasamaja.com 2 weeks ago

ಬೆಂಗಳೂರು (Bengaluru) ಹೊರವಲಯದ ಪ್ರಸಿದ್ಧ ಪ್ರವಾಸಿ ತಾಣವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನವು (BBP) ಆದಾಯ ಮತ್ತು ಪ್ರವಾಸಿಗರ (Tourists) ಭೇಟಿಯಲ್ಲಿ ಹೊಸ ದಾಖಲೆ ನಿರ್ಮಿಸಿದೆ. 2025-26ನೇ ಹಣಕಾಸು ಸಾಲಿನಲ್ಲಿ ಉದ್ಯಾನವನವು ಪ್ರಾಣಿ ಸಂರಕ್ಷಣೆ ಮತ್ತು ಪ್ರವಾಸೋದ್ಯಮದಲ್ಲಿ ಮೈಲಿಗಲ್ಲು ಸ್ಥಾಪಿಸಿದೆ.

ಇನ್ನು 2025-26ನೇ ಸಾಲಿನಲ್ಲಿ ಉದ್ಯಾನವನಕ್ಕೆ ಬರೋಬ್ಬರಿ 64 ಕೋಟಿ 23 ಲಕ್ಷ ರೂಪಾಯಿ ಆದಾಯ ಹರಿದು ಬಂದಿದೆ. ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದ್ದು, ವಾರಾಂತ್ಯಗಳಲ್ಲಿ ಉದ್ಯಾನವನವು ಜನರಿಂದ ತುಂಬಿ ತುಳುಕುತ್ತಿದೆ. ಇಲ್ಲಿನ ಸಫಾರಿ ಮತ್ತು ಆಕರ್ಷಕ ಪ್ರಾಣಿ-ಪಕ್ಷಿಗಳು ಪ್ರವಾಸಿಗರ ಮನಸೆಳೆಯುತ್ತಿವೆ.

2024-25ನೇ ಸಾಲಿನಲ್ಲಿ 21 ಲಕ್ಷದ 24 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು, 2025-26ನೇ ಸಾಲಿನಲ್ಲಿ 22 ಲಕ್ಷದ 40 ಸಾವಿರ ಪ್ರವಾಸಿಗರು ಭೇಟಿನೀಡಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 1 ಲಕ್ಷಕ್ಕೂ ಅಧಿಕ ಪ್ರವಾಸಿಗರು ಈ ಬಾರಿ ಭೇಟಿ ನೀಡಿದ್ದಾರೆ.

ಪ್ರಾಣಿಗಳ ಮೇಲಿನ ಪ್ರೀತಿ ಮತ್ತು ಸಂರಕ್ಷಣಾ ಮನೋಭಾವ ಜನರಲ್ಲಿ ಹೆಚ್ಚುತ್ತಿರುವುದಕ್ಕೆ ಇಲ್ಲಿನ ದೇಣಿಗೆ ಅಂಕಿಅಂಶಗಳೇ ಸಾಕ್ಷಿಯಾಗಿದೆ.

2024-25ರಲ್ಲಿ ಪ್ರಾಣಿ ದತ್ತು ಮತ್ತು ದೇಣಿಗೆಯಿಂದ ಕೇವಲ 53 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಆದರೆ, 2025-26ನೇ ಸಾಲಿನಲ್ಲಿ ಈ ಮೊತ್ತವು 80 ಲಕ್ಷ 83 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ 30 ಲಕ್ಷ ರೂಪಾಯಿ ಹೆಚ್ಚುವರಿ ದೇಣಿಗೆ ಹರಿದು ಬಂದಿದೆ.

ಬನ್ನೇರುಘಟ್ಟ ಉದ್ಯಾನವನವು ಕೇವಲ ಲಾಭದ ಕಡೆಗೆ ಗಮನ ಹರಿಸದೆ ಸಾಮಾಜಿಕ ಕಾಳಜಿಯನ್ನೂ ಪ್ರದರ್ಶಿಸಿದೆ. 'ಚಿಣ್ಣರ ಮೃಗಾಲಯ ದರ್ಶನ' ಕಾರ್ಯಕ್ರಮದ ಅಡಿಯಲ್ಲಿ ಸುಮಾರು ನಾಲ್ಕು ಸಾವಿರ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಮೃಗಾಲಯ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ (ED) ಸೂರ್ಯಸೇನ್ ತಿಳಿಸಿದ್ದಾರೆ.

ಪ್ರಯಾಣಿಕರ ಗಮನಕ್ಕೆ.. ಬಿಎಂಟಿಸಿ & ಮೆಟ್ರೋಗೆ ಒಂದೇ ಸ್ಮಾರ್ಟ್ ಕಾರ್ಡ್

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸಾರ್ವಜನಿಕ ಸಾರಿಗೆಯಲ್ಲಿ ಶೀಘ್ರದಲ್ಲೇ ಮಹತ್ತರ ಬದಲಾವಣೆ ಬರಲಿದೆ. ಬಸ್ ಮತ್ತು ಮೆಟ್ರೋ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇನ್ಮುಂದೆ ಬೇರೆ ಬೇರೆ ಕಾರ್ಡ್‌ಗಳನ್ನು ಇಟ್ಟುಕೊಳ್ಳುವ ಅಥವಾ ಚಿಲ್ಲರೆ ಹಣಕ್ಕಾಗಿ ಹುಡುಕಾಡುವ ಕಿರಿಕಿರಿ ಇರುವುದಿಲ್ಲ. ಜೂನ್ ತಿಂಗಳಿನಿಂದ ಬಿಎಂಟಿಸಿ ಹಾಗೂ ಮೆಟ್ರೋ ಎರಡಕ್ಕೂ ಬಳಸಬಹುದಾದ ಒಂದೇ 'ಸ್ಮಾರ್ಟ್ ಕಾರ್ಡ್' ವ್ಯವಸ್ಥೆ ಅಧಿಕೃತವಾಗಿ ಜಾರಿಗೆ ಬರಲಿದೆ.

ಒಂದೇ ಕಾರ್ಡ್, ಡಬಲ್ ಲಾಭ

ಈಗಾಗಲೇ ನಮ್ಮ ಮೆಟ್ರೋದಲ್ಲಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಚಾಲ್ತಿಯಲ್ಲಿದೆ. ಇದೇ ಮಾದರಿಯನ್ನು ಈಗ ಬಿಎಂಟಿಸಿ ಬಸ್‌ಗಳಿಗೂ ವಿಸ್ತರಿಸಲಾಗುತ್ತಿದೆ. ಪ್ರಯಾಣಿಕರು ಒಂದೇ ಕಾರ್ಡ್ ರೀ-ಚಾರ್ಜ್ ಮಾಡಿಕೊಂಡು ಅದನ್ನೇ ಮೆಟ್ರೋ ನಿಲ್ದಾಣಗಳಲ್ಲಿ ಮತ್ತು ಬಿಎಂಟಿಸಿ ಬಸ್‌ಗಳಲ್ಲಿ ಸ್ವೈಪ್ ಮಾಡಿ ಪ್ರಯಾಣಿಸಬಹುದು. ಇದು ಬೆಂಗಳೂರಿನ ಲಕ್ಷಾಂತರ ಪ್ರಯಾಣಿಕರ ಸಮಯ ಉಳಿಸುವುದಲ್ಲದೆ, ಸುಲಭ ಸಂಚಾರಕ್ಕೆ ಹಾದಿ ಮಾಡಿಕೊಡಲಿದೆ.

ಇನ್ನೂ ಈ ಯೋಜನೆಯನ್ನು ಜಾರಿಗೊಳಿಸಲು ಬಿಎಂಟಿಸಿ ಸನ್ನದ್ಧವಾಗಿದ್ದು, ಶೀಘ್ರದಲ್ಲೇ ಎಲ್ಲಾ ಡಿಪೋಗಳಿಗೆ ಅತ್ಯಾಧುನಿಕ ಟಿಕೆಟ್ ಮಿಷನ್‌ಗಳನ್ನು ವಿತರಿಸಲಾಗುವುದು. ಈ ಮಿಷನ್‌ಗಳ ಮೂಲಕ ಸ್ಮಾರ್ಟ್ ಕಾರ್ಡ್‌ಗಳನ್ನು ಸುಲಭವಾಗಿ ರೀಡ್ ಮಾಡಬಹುದಾಗಿದೆ. ಇತ್ತೀಚಿನ ದಿನಗಳಲ್ಲಿ ಬಸ್‌ಗಳಲ್ಲಿ ಕ್ಯೂಆರ್ ಕೋಡ್ (QR Code) ಬಳಸಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದ ವಂಚನೆಯ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈಗ ಹೊಸ ಇಟಿಎಂ ಮಿಷನ್‌ಗಳು ಮತ್ತು ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ಬರುವುದರಿಂದ ಇಂತಹ ವಂಚನೆಗಳಿಗೆ ಬ್ರೇಕ್ ಬೀಳಲಿದ್ದು, ಇನ್ನುಮುಂದೆ ಈ ವ್ಯವಸ್ಥೆ ಹೆಚ್ಚು ಸಹಕಾರಿಯಾಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja