ಬೆಂಗಳೂರು: ಬೆಂಗಳೂರಿನ (Bengaluru) ಖಾಸಗಿ ಸಂಸ್ಥೆಯೊಂದರ ಆವರಣದಲ್ಲಿ ನಡೆಯುತ್ತಿರುವ ಮಕ್ಕಳ ಪಾಲನಾ ಕೇಂದ್ರದಲ್ಲಿ ನಡೆದಿರುವ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಅಗತ್ಯ ಕಾನೂನು ಕ್ರಮಗಳು ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಸಂತೋಷ್ ಕುಮಾರ್ ತಿಳಿಸಿದರು.
ಬೇಬಿ ಕೇರ್ ಸೆಂಟರ್ ನಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ ಇಂದು ಕರ್ನಾಟಕ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, "ಕ್ಯಾಪ್ ಜಿಮಿನಿ" ಎಂಬ ಖಾಸಗಿ ಸಂಸ್ಥೆಯ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಲಿಟಲ್ ಸ್ಕಾಲರ್ ಬೇಬಿ ಕೇರ್ ಸೆಂಟರ್ ನಲ್ಲಿ ಮಕ್ಕಳಿಗೆ ದೈಹಿಕ ಹಿಂಸೆ ನೀಡಲಾಗುತ್ತಿದೆ ಎಂಬ ಕುರಿತು 2026 ನೇ ಜೂನ್ 25 ರ ರಾತ್ರಿ ಮಕ್ಕಳ ಸಹಾಯವಾಣಿಗೆ (Child Helpline) ಕರೆ ಬಂದಿದೆ. ಈ ದೂರಿನ ಆಧಾರದ ಮೇಲೆ ಬೆಂಗಳೂರಿನ ಹೆಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಿಸಲಾಗಿದೆ. ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಗಮನಿಸಿ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ (Suo Motu) ದೂರನ್ನು ದಾಖಲಿಸಿಕೊಂಡಿದೆ. ಘಟನೆಗೆ ಸಂಬಂಧಿಸಿದಂತೆ ತಕ್ಷಣ ಸೂಕ್ತ ಕ್ರಮ ಜರುಗಿಸಿ, ವಿಸ್ತೃತ ವರದಿಯನ್ನು ಸಲ್ಲಿಸುವಂತೆ ಹೆಚ್.ಎ.ಎಲ್ ಪೊಲೀಸ್ ಠಾಣೆ ಹಾಗೂ ಬೆಂಗಳೂರು ಪೂರ್ವ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಘಟನೆಯ ಕುರಿತು ವಸ್ತುಸ್ಥಿತಿಯನ್ನು ಅರಿಯಲು ಆಯೋಗದ ತಂಡವು 2026 ನೇ ಜುಲೈ 02 ರಂದು ಲಿಟಲ್ ಸ್ಕಾಲರ್ ಬೇಬಿ ಕೇರ್ ಸೆಂಟರ್ ಮತ್ತು ಹೆಚ್.ಎ.ಎ.ಲ್ ಪೊಲೀಸ್ ಠಾಣೆ ಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದೆ ಹಾಗೂ ಅಗತ್ಯ ಮಾಹಿತಿಗಳನ್ನು ಕಲೆಹಾಕಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (NCPCR) ಸಹ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದು, ಆಯೋಗದ ಪ್ರತಿನಿಧಿಗಳ ತಂಡವು ದಿನಾಂಕ: 03-07-2026 ಮತ್ತು 04-07-2026 ರಂದು ಸದರಿ ಡೇ-ಕೇರ್ ಸೆಂಟರ್ ಹಾಗೂ ಪೊಲೀಸ್ ಠಾಣೆಗೆ ಭೇಟಿ ನೀಡಿ ತನಿಖೆಯ ಪ್ರಗತಿಯನ್ನು ಪರಿಶೀಲಿಸಿದೆ. ಪೊಲೀಸರಿಂದ ಎಫ್‌ಐಆರ್ ದಾಖಲು ಪೊಲೀಸ್ ಇಲಾಖೆಯು ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ ವರದಿ (FIR) ದಾಖಲಿಸಿಕೊಂಡಿದೆ. ತೀವ್ರ ವಿಚಾರಣೆಯ ನಂತರ, ಸದರಿ ಡೇ-ಕೇರ್ ಸೆಂಟರ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಮಾನ್ಯ ನ್ಯಾಯಾಲಯದ ವಶಕ್ಕೆ ಒಪ್ಪಿಸಲಾಗಿದೆ. ಸದ್ಯ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷರು ತಿಳಿಸಿದರು.

