ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ದಿನೇದಿನೆ ಅಪಾರ್ಟ್‌ಮೆಂಟ್‌ಗಳ (Apartment) ಸಂಖ್ಯೆ ಹೆಚ್ಚಾಗುತ್ತಿದೆ. ಕಷ್ಟಪಟ್ಟು ದುಡಿದ ಹಣ, ಬ್ಯಾಂಕ್ ಸಾಲದ ನೆರವಿನಿಂದ ಫ್ಲ್ಯಾಟ್ ಕೊಂಡುಕೊಳ್ಳುವ ಜನರಿಗೆ ಅಲ್ಲಿಗೆ ಹೋದ ಮೇಲೆಯೇ ಅಸಲಿ ತಲೆನೋವು ಶುರುವಾಗುತ್ತಿದೆ.
ಅದರಲ್ಲಿಯೂ ಮುಖ್ಯವಾಗಿ ಅಪಾರ್ಟ್‌ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ (Association) ನೋಂದಣಿ ವಿಚಾರದಲ್ಲಿ ಮೊದಲಿನಿಂದಲೂ ದೊಡ್ಡ ಗೊಂದಲವಿದೆ. ಯಾವ ಕಾನೂನಿನ ಅಡಿಯಲ್ಲಿ ಸಂಘವನ್ನು ರಿಜಿಸ್ಟರ್ ಮಾಡಿಸಬೇಕು ಎಂಬ ಗೊಂದಲಕ್ಕೆ ವರ್ಷಗಳು ಕಳೆದರೂ ಸರಿಯಾದ ಪರಿಹಾರ ಸಿಕ್ಕಿಲ್ಲ. ಈ ಸಮಸ್ಯೆಗೆ ಕೊನೆ ಹಾಡಲು ಈಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಮಹತ್ವದ ಹೆಜ್ಜೆ ಇಟ್ಟಿದೆ. ಅಪಾರ್ಟ್‌ಮೆಂಟ್ ಸಂಘಗಳನ್ನು ರಿಯಲ್ ಎಸ್ಟೇಟ್ ನಿಯಂತ್ರಣ ಕಾಯಿದೆ, ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯಿದೆ-1972, ಸಹಕಾರ ಸಂಘಗಳ ಕಾಯಿದೆ ಅಥವಾ ಕಂಪನಿಗಳ ಕಾಯಿದೆಯಡಿ ನೋಂದಣಿ ಮಾಡಬೇಕೇ ಎಂಬ ಗೊಂದಲ ನಿವಾಸಿಗಳನ್ನು ಕಾಡುತ್ತಿದೆ. ಈ ಗೊಂದಲ ನಿವಾರಣೆಗಾಗಿ ಗೃಹ ಖರೀದಿದಾರರ ಸಂಘಟನೆಗಳು ಹಲವು ಹೋರಾಟಗಳನ್ನು ನಡೆಸಿವೆ. ಈ ಹಿನ್ನೆಲೆಯಲ್ಲಿ ಬಿಡಿಎ ಆಯುಕ್ತರು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದ್ದು, ಅಪಾರ್ಟ್‌ಮೆಂಟ್ ಮಾಲೀಕರ ಸಂಘಗಳ ನೋಂದಣಿ ಗೊಂದಲವನ್ನು ಬಗೆಹರಿಸಲು ತಕ್ಷಣವೇ ಒಂದು 'ಸಕ್ಷಮ ಪ್ರಾಧಿಕಾರ'ವನ್ನು ರಚಿಸುವಂತೆ ಮನವಿ ಮಾಡಿದ್ದಾರೆ. ಹಾಲಿ ಜಾರಿಯಲ್ಲಿರುವ ಕಾನೂನುಗಳಲ್ಲಿ ನಿಬಂಧನೆಗಳಿದ್ದರೂ ಅಧಿಕಾರಿಗಳು ನೋಂದಣಿಗೆ ನಿರಾಕರಿಸುತ್ತಿರುವುದರಿಂದ ಆಡಳಿತಾತ್ಮಕ ಅನಿಶ್ಚಿತತೆ ಉಂಟಾಗಿದೆ. ಇದು ಅಪಾರ್ಟ್‌ಮೆಂಟ್ ಮಾಲೀಕರಿಗೆ ತೊಂದರೆ ಕೊಡುವುದರ ಜೊತೆಗೆ ಕೋರ್ಟ್ ಮೆಟ್ಟಿಲೇರುವಂತೆ ಮಾಡುತ್ತಿದೆ ಎಂದು ಬಿಡಿಎ ತನ್ನ ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದೆ. ಕಳೆದ 2024ರಲ್ಲಿ ಹೈಕೋರ್ಟ್ ಕೂಡ 'ರೇಖಾ ಖನ್ನಾ ವರ್ಸಸ್ ಕರ್ನಾಟಕ' ಪ್ರಕರಣದಲ್ಲಿ ಪ್ರಮುಖ ತೀರ್ಪು ನೀಡಿತ್ತು. ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳನ್ನು ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯಿದೆ (KAOA)-1972ರ ಅಡಿಯಲ್ಲಿಯೇ ನೋಂದಣಿ ಮಾಡಬೇಕು, ಅದನ್ನು ಬಿಟ್ಟು ಸಹಕಾರ ಸಂಘಗಳ ಕಾಯಿದೆಯಡಿ ಅಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೆ, ಈ ಕಾಯಿದೆಯ ಅಡಿಯಲ್ಲಿ ಆಸ್ತಿಯನ್ನು ತರಲು 'ಡೀಡ್ ಆಫ್ ಡಿಕ್ಲರೇಷನ್' ಜಾರಿಗೊಳಿಸಿ ನೋಂದಾಯಿಸುವುದು ಕಡ್ಡಾಯವಾಗಿದೆ. ಆದರೆ ಈ ದಾಖಲೆಗಳನ್ನು ಪರಿಶೀಲಿಸಲು ಮತ್ತು ನೋಂದಣಿ ಪ್ರಕ್ರಿಯೆಯನ್ನು ನಡೆಸಲು ಸರಕಾರದ ಕಡೆಯಿಂದ ಯಾವುದೇ ನಿರ್ದಿಷ್ಟ 'ಸಕ್ಷಮ ಪ್ರಾಧಿಕಾರ'ದ ನೇಮಕವಾಗಿಲ್ಲ. ಅಧಿಕಾರಿಗಳು ಅನುಸರಿಸಬೇಕಾದ ನಿಯಮಗಳ ಬಗ್ಗೆ ಸರಕಾರದ ಸ್ಪಷ್ಟ ಆದೇಶವಿಲ್ಲದ ಕಾರಣ ಈ ಕಾಯಿದೆ ಕಾಗದದ ಮೇಲಷ್ಟೇ ಉಳಿದಿದೆ. ಬಿಡಿಎ ಮನವಿಯಂತೆ ಸರಕಾರ ತಕ್ಷಣವೇ ಸಕ್ಷಮ ಪ್ರಾಧಿಕಾರವನ್ನು ನೇಮಿಸಿ ಅಧಿಕೃತ ಆದೇಶ ಹೊರಡಿಸಿದರೆ ರಾಜ್ಯಾದ್ಯಂತ ಏಕರೂಪದ ಕಾನೂನು ಜಾರಿಗೆ ಬರಲಿದೆ. ಇದರಿಂದ ಅಪಾರ್ಟ್‌ಮೆಂಟ್ ನಿವಾಸಿಗಳ ಗೊಂದಲಗಳು ದೂರವಾಗುವುದರ ಜೊತೆಗೆ ಅನಗತ್ಯ ಕೋರ್ಟ್ ಕಚೇರಿ ಅಲೆಯುವುದು ತಪ್ಪುತ್ತದೆ. ಅಲ್ಲದೆ, ಅಪಾರ್ಟ್‌ಮೆಂಟ್ ಮಾಲೀಕರು ತಮ್ಮ ಆಸ್ತಿಗಳ ರಕ್ಷಣೆ, ಪಾಲನೆ ಮತ್ತು ದೈನಂದಿನ ನಿರ್ವಹಣೆಗಾಗಿ ಅಧಿಕೃತ ಸಂಘಗಳನ್ನು ರಚಿಸಿಕೊಂಡು ನೆಮ್ಮದಿಯಿಂದ ಇರಲು ದಾರಿಯಾಗುತ್ತದೆ.

