ಬೆಂಗಳೂರು: ನಗರದ (Bengaluru) ಬನ್ನೇರುಘಟ್ಟ ಸಮೀಪದ ಬಿಲ್ವಾರದಹಳ್ಳಿಯ ನ್ಯೂ ವಿನ್ನರ್ಸ್ ಲೇಔಟ್‌ನಲ್ಲಿ ಭಾರೀ ಮಳೆಯ ಪರಿಣಾಮ ಹೊಸದಾಗಿ ನಿರ್ಮಿಸಿದ್ದ ಮನೆ (Home) ಗೃಹ ಪ್ರವೇಶಕ್ಕೂ ಮುನ್ನವೇ ಅಪಾಯದ ಸ್ಥಿತಿಗೆ ತಲುಪಿದೆ. ರಾತ್ರಿ ಸುರಿದ ಮಳೆಯಿಂದ (Rajn) ತಡೆಗೋಡೆ ಕುಸಿದ ಪರಿಣಾಮ ಏಕಮಹಡಿ ಕಟ್ಟಡ ಒಂದು ಬದಿಗೆ ವಾಲಿದ್ದು, ಅಕ್ಕಪಕ್ಕದ ನಿವಾಸಿಗಳು ಆತಂಕಗೊಂಡಿದ್ದಾರೆ.
ಈ ಹಳ್ಳದ ಜಾಗವನ್ನು ಕಸದಿಂದ ತುಂಬಿಸಿ ಅದರ ಮೇಲೆ ನಿರ್ಮಾಣ ಕಾರ್ಯ ನಡೆಸಿರುವುದು ಹಾಗೂ ವೈಜ್ಞಾನಿಕ ವಿಧಾನದಲ್ಲಿ ಅಡಿಪಾಯ ಹಾಕದಿರುವುದೇ ಈ ಅವಘಡಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಕಟ್ಟಡ ಯಾವುದೇ ಕ್ಷಣದಲ್ಲಿ ಕುಸಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಟ್ಟಡವನ್ನು ತ್ವರಿತವಾಗಿ ತೆರವುಗೊಳಿಸುವಂತೆ ಸೂಚಿಸಿದ್ದಾರೆ. ಇದೇ ಕಟ್ಟಡದ ಪಕ್ಕದಲ್ಲಿರುವ ಖಾಸಗಿ ಶಾಲೆಯ ಗೋಡೆಯೂ ಅಪಾಯದ ಸ್ಥಿತಿಯಲ್ಲಿದೆ. ಒಂದರಿಂದ ಎಂಟನೇ ತರಗತಿವರೆಗೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓದುತ್ತಿರುವ ಈ ಶಾಲೆಗೆ ಅಗತ್ಯ ಅನುಮತಿ ಇಲ್ಲ ಎಂಬ ಆರೋಪವೂ ಕೇಳಿಬಂದಿದ್ದು, ಶಾಲೆ ನಡೆಸದಂತೆ ಅಧಿಕಾರಿಗಳು ಸೂಚಿಸಿದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ತಾತ್ಕಾಲಿಕ ರಜೆ ಘೋಷಿಸಿದೆ.

