ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನಕ್ಕೊಂದು (Bengaluru) ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿರುತ್ತವೆ. ಸಾಮಾನ್ಯವಾಗಿ ಜನರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲು ಅಥವಾ ಪಾರ್ಸಲ್ ತಲುಪಿಸಲು ರ‍್ಯಾಪಿಡೋ (Rapido) ಆಯಪ್ ಬಳಸುತ್ತಾರೆ.
ಆದರೆ ಇಲ್ಲೊಬ್ಬ ಆಸಾಮಿ ತನ್ನ ಮನೆಯ ಕಸವನ್ನು ವಿಲೇವಾರಿ ಮಾಡಲು ರ‍್ಯಾಪಿಡೋ ಆಟೋ ಬುಕ್ ಮಾಡಿ, ಅಮಾಯಕ ಚಾಲಕನನ್ನು ಸಂಕಷ್ಟಕ್ಕೆ ದೂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಗ್ರಾಹಕ ಕಳುಹಿಸಿದ್ದು ಕಸದ ಚೀಲ ಎಂದು ತಿಳಿಯದೇ ಕೊಂಡೊಯ್ದ ಆಟೋ ಚಾಲಕನಿಗೆ ಪಾಲಿಕೆ ಅಧಿಕಾರಿಗಳು ಬರೋಬ್ಬರಿ 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಈ ಘಟನೆ ಬೆಂಗಳೂರು ದಕ್ಷಿಣ ಪಾಲಿಕೆ ವ್ಯಾಪ್ತಿಯ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದಿದೆ. ಪಾರ್ಸಲ್ ಹೆಸರಿನಲ್ಲಿ ಕಸದ ಬಾಕ್ಸ್! ಚಾಲಕ ಆ ಪಾರ್ಸಲ್ ಅನ್ನು ಅಲ್ಲಿ ಬಿಸಾಡಲು ಮುಂದಾದಾಗ, ಸ್ಥಳದಲ್ಲಿದ್ದ ಜಿಬಿಎ (ಗಾರ್ಬೇಜ್ ಬ್ರಿಗೇಡ್ ಅಧಿಕಾರಿ) ಅಧಿಕಾರಿಗಳು ಆತನನ್ನು ತಡೆದು ತಪಾಸಣೆ ನಡೆಸಿದ್ದಾರೆ. ಕಸ ವಿಲೇವಾರಿ ನಿಯಮಗಳನ್ನು ಉಲ್ಲಂಘಿಸಿ ಬಿಸಾಡಲು ಬಂದಿದ್ದಕ್ಕಾಗಿ ಅಧಿಕಾರಿಗಳು ತಕ್ಷಣವೇ ಆಟೋ ಚಾಲಕನಿಗೆ ₹10,000 ಭಾರಿ ದಂಡ ವಿಧಿಸಿದ್ದಾರೆ. ಕೈಕೊಟ್ಟ ಗ್ರಾಹಕ ಬೆಂಗಳೂರಿನಲ್ಲಿ ಕಸದ ಸಮಸ್ಯೆ ದೊಡ್ಡ ಸವಾಲಾಗಿದ್ದು, ಎಲ್ಲೆಂದರಲ್ಲಿ ಕಸ ಎಸೆಯುವವರ ವಿರುದ್ಧ ಪಾಲಿಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಘಟನೆಯ ಬೆನ್ನಲ್ಲೇ ಸಾರಿಗೆ ಸಂಸ್ಥೆಗಳು ಮತ್ತು ಚಾಲಕರಿಗೆ ಅಧಿಕಾರಿಗಳು ಕೆಲವು ಸೂಚನೆಗಳನ್ನು ನೀಡಿದ್ದಾರೆ: ರ‍್ಯಾಪಿಡೋ, ಉಬರ್ ಮುಂತಾದ ಆಯಪ್ ಆಧಾರಿತ ಪಾರ್ಸಲ್ ಸೇವೆಗಳನ್ನು ನೀಡುವ ಚಾಲಕರು ಇನ್ಮುಂದೆ ಎಚ್ಚರಿಕೆಯಿಂದ ಇರಬೇಕು. ಗ್ರಾಹಕರು ನೀಡುವ ಪಾರ್ಸಲ್‌ಗಳಲ್ಲಿ ಏನಿದೆ ಎಂಬುದನ್ನು ಕಣ್ಣಾರೆ ನೋಡಿ, ಖಚಿತಪಡಿಸಿಕೊಂಡ ನಂತರವೇ ಬುಕಿಂಗ್ ಸ್ವೀಕರಿಸಬೇಕು. ಅನುಮಾನಾಸ್ಪದ ವಸ್ತುಗಳು ಕಂಡುಬಂದರೆ ಅಂತಹ ಆರ್ಡರ್‌ಗಳನ್ನು ನಿರಾಕರಿಸುವುದು ಸೂಕ್ತ.
ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ರ‍್ಯಾಪಿಡೋ ಆಯಪ್ ಮೂಲಕ ಆಟೋ ಬುಕ್ ಮಾಡಿದ್ದ. ಚಾಲಕ ಸ್ಥಳಕ್ಕೆ ಬರುತ್ತಿದ್ದಂತೆ ಒಂದು ಪಾರ್ಸಲ್ ನೀಡಿ, ಇದನ್ನು ಕಸ ಹಾಕುವ ನಿಗದಿತ ಜಾಗಕ್ಕೆ ಎಸೆದು ಬರುವಂತೆ ಸೂಚಿಸಿದ್ದಾನೆ. ಚಾಲಕ ಕೂಡ ಅದನ್ನು ಸಾಮಾನ್ಯ ಪಾರ್ಸಲ್ ಎಂದೇ ಭಾವಿಸಿ ಹೆಚ್‌ಎಸ್‌ಆರ್ ಲೇಔಟ್ ಬಳಿಯ ಕಸದ ರಹದಾರಿ ಜಾಗಕ್ಕೆ ತಲುಪಿದ್ದಾನೆ.
ದಂಡದ ರಶೀದಿ ಕೈಗೆ ಬರುತ್ತಿದ್ದಂತೆ ಕಂಗಾಲಾದ ಆಟೋ ಚಾಲಕ, ತಕ್ಷಣವೇ ತನಗೆ ಆ ಚೀಲ ನೀಡಿದ್ದ ಗ್ರಾಹಕನಿಗೆ ಕರೆ ಮಾಡಿದ್ದಾನೆ. ಆದರೆ ಆ ವ್ಯಕ್ತಿ ಚಾಲಕನ ಫೋನ್ ಕರೆಯನ್ನು ಸ್ವೀಕರಿಸದೆ ನಾಪತ್ತೆಯಾಗಿದ್ದಾನೆ. ಬೇರೆಯವನ ಬೇಜವಾಬ್ದಾರಿತನಕ್ಕೆ ಅಮಾಯಕ ಚಾಲಕ ದಂಡ ತೆರಬೇಕಾಗಿ ಬಂದಿದೆ. ಸದ್ಯ ಪಾಲಿಕೆ ಅಧಿಕಾರಿಗಳು ಕಸ ಕಳುಹಿಸಿದ ಅಸಲಿ ಮಾಲೀಕನ ಪತ್ತೆಗೆ ಮುಂದಾಗಿದ್ದಾರೆ.

