ಬೆಂಗಳೂರು: ಸಿಲಿಕಾನ್ ಸಿಟಿ ಜನತೆಗೆ ಹವಾಮಾನ ಇಲಾಖೆ (IMD) ನೀಡಿದ್ದ ಮುನ್ಸೂಚನೆ ನಿಜವಾಗಿದ್ದು, ಬೆಂಗಳೂರಿನ ವಾತಾವರಣ ಸಂಪೂರ್ಣವಾಗಿ ಬದಲಾಗಿದೆ. ಗುಡುಗ, ಸಿಡಿಲು ಸಹಿತ (Bengaluru Rain) ಅನೇಕ ಪ್ರದೇಶಗಳಲ್ಲಿ ಆಲಿಕಲ್ಲು ಮಳೆ ಕೂಡ ಆಗಿದೆ.
40 ರಿಂದ 50 ಕಿಲೋಮೀಟರ್ ವೇಗದಲ್ಲಿ ಮಳೆ
ನಗರದಲ್ಲಿ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬೀಸಿದ ಪ್ರಬಲ ಧೂಳಿನ ಬಿರುಗಾಳಿ ಆರ್ಭಟ ಜೋರಾಗಿದ್ದು, ಭಾರೀ ಮಳೆ ಆಗುತ್ತಿದೆ. ಸಂಜೆ 6 ಗಂಟೆಯ ತನಕ ಸಾಮಾನ್ಯವಾಗಿದ್ದ ವಾತಾವರಣ ಸಡನ್ ಆಗಿ ಬದಲಾಗಿದ್ದು, ಏಕಾಏಕಿ ಕಪ್ಪು ಮೋಡಗಳು ಕವಿದು ಧಾರಾಕಾರ ಮಳೆ ಆಗಿದೆ. ಇನ್ನು ಈ ಬಿರುಗಾಳಿಯ ಕಾರಣದಿಂದ ರಸ್ತೆಯ ಉದ್ದಕ್ಕೂ ಧೂಳು ಎದ್ದು, ವಾಹನ ಸವಾರರು ಮುಂದಿನ ದಾರಿ ಕಾಣದೇ ಕೆಲ ಕಾಲ ಪರದಾಡಿದ್ದಾರೆ.
ಎಲ್ಲೆಲ್ಲಿ ಮಳೆ?
ವೈಟ್‌ಫೀಲ್ಡ್ , ಮೆಜೆಸ್ಟಿಕ್, ಯಶವಂತಪುರ, ಕಾರ್ಪೊರೇಷನ್, ಇಂದಿರಾನಗರ, ಎಂ.ಜಿ. ರಸ್ತೆ , ಜಯನಗರ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ನಗರದ ಬಹುತೇಕ ಎಲ್ಲ ನಗರಗಳಲ್ಲಿ ಜಿಟಿಜಿಟಿ ಮಳೆ ಆರಂಭವಾಗಿ ನಂತರ ಜೋರಾಗಿ ಸುರಿಯುತ್ತಿದೆ.
ಆಫೀಸ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಾರ್ವಜನಿಕರು ಹಾಗೂ ಬೈಕ್ ಸವಾರರು ಹಠಾತ್ ಮಳೆಗೆ ಸಿಲುಕಿ ರಸ್ತೆ ಬದಿ ಹಾಗೂ ಮೇಲ್ಸೇತುವೆಗಳ ಕೆಳಗೆ ಆಶ್ರಯ ಪಡೆಯುವಂತಾಯಿತು. ಪ್ರಮುಖ ರಸ್ತೆಗಳ ಮೇಲೆಲ್ಲಾ ನೀರು ನಿಂತು ಹರಿಯುತ್ತಿರುವುದರಿಂದ ಹೆದ್ದಾರಿಗಳು ಹಾಗೂ ಫ್ಲೈಓವರ್‌ಗಳ ಮೇಲೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಭಾರಿ ಟ್ರಾಫಿಕ್ ಜಾಮ್ ಉಂಟಾಗಿದೆ. ಬಿರುಗಾಳಿಯ ಹೊಡೆತಕ್ಕೆ ನಗರದ ಕೆಲವು ಕಡೆಗಳಲ್ಲಿ ಮರಗಳು ಮತ್ತು ದೊಡ್ಡ ರೆಂಬೆಗಳು ರಸ್ತೆಗೆ ಉರುಳಿ ಬಿದ್ದಿವೆ. ಹೀಗಾಗಿ ಯಾವುದೇ ಪ್ರಾಣಾಪಾಯ ಅಥವಾ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿರುವ ಬೆಸ್ಕಾಂ (BESCOM) ಅಧಿಕಾರಿಗಳು ಹಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕವನ್ನು ತಾತ್ಕಾಲಿಕವಾಗಿ ಕಡಿತಗೊಳಿಸಿದ್ದಾರೆ.
ಮುಂದಿನ ಒಂದು ವಾರ ರಾಜ್ಯದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯ ಮುನ್ಸೂಚನೆ
ಕರ್ನಾಟಕದಾದ್ಯಂತ (Karnataka) ಮುಂದಿನ 7 ದಿನಗಳ ಕಾಲ ಹವಾಮಾನದಲ್ಲಿ ಭಾರಿ ಏರುಪೇರಾಗಲಿದ್ದು, ಮೇ 31ರ ವರೆಗೆ ಗುಡುಗು-ಸಿಡಿಲು ಸಹಿತ ಗಾಳಿ, ಮಳೆಯಾಗಲಿದೆ (Rain) ಎಂದು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಇಂದಿನ ಹವಾಮಾನದ ತೀವ್ರತೆಯನ್ನು ಪರಿಗಣಿಸಿ ರಾಜ್ಯದ ಪ್ರಮುಖ ವಲಯಗಳಿಗೆ 'ಆರೆಂಜ್ ಅಲರ್ಟ್' (Orange Alert) ನೀಡಲಾಗಿದ್ದು, ಜೂನ್ 3ರ ವರೆಗಿನ ಹವಾಮಾನ ಮುನ್ಸೂಚನೆಯ ಸಂಪೂರ್ಣ ವಿವರ ಇಲ್ಲಿದೆ.
ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' (Orange Alert) ಘೋಷಿಸಲಾಗಿದ್ದು, ಭಾರಿ ಗುಡುಗು, ಮಿಂಚು ಸಹಿತಮಳೆಯಾಗಲಿದೆ.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹವಾಮಾನ ತೀವ್ರಗೊಳ್ಳಲಿದ್ದು, ಆರಂಭದ ಎರಡು ದಿನಗಳ ಕಾಲ 'ಆರೆಂಜ್ ಅಲರ್ಟ್' ಜಾರಿಯಲ್ಲಿರಲಿದೆ. ತೀವ್ರ ಸಿಡಿಲು ಮತ್ತು ಬಿರುಗಾಳಿ ಅಪ್ಪಳಿಸುವ ಮುನ್ಸೂಚನೆ ಇದೆ.
ಕರಾವಳಿಯ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ನಿರಂತರವಾಗಿ 'ಯೆಲ್ಲೋ ಅಲರ್ಟ್' ಘೋಷಿಸಲಾಗಿದೆ. ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ.

