Dailyhunt Logo
  • Light mode
    Follow system
    Dark mode
    • Play Story
    • App Story
BIDADI TOWNSHIP: 'ಯಾವುದೇ ಕಾರಣಕ್ಕೂ ಭೂಮಿ ಕೊಡಲ್ಲ': ಬಿಡದಿ ಟೌನ್‌ಶಿಪ್ ವಿರುದ್ಧ 15 ಜಿಲ್ಲೆಗಳ ರೈತರ ಮಹಾ ಸಂಗ್ರಾಮ; ಉಗ್ರ ಹೋರಾಟದ ಎಚ್ಚರಿಕೆ!

BIDADI TOWNSHIP: 'ಯಾವುದೇ ಕಾರಣಕ್ಕೂ ಭೂಮಿ ಕೊಡಲ್ಲ': ಬಿಡದಿ ಟೌನ್‌ಶಿಪ್ ವಿರುದ್ಧ 15 ಜಿಲ್ಲೆಗಳ ರೈತರ ಮಹಾ ಸಂಗ್ರಾಮ; ಉಗ್ರ ಹೋರಾಟದ ಎಚ್ಚರಿಕೆ!

Navasamaja.com 1 week ago

ಬಿಡದಿ: ಸ್ಮಾರ್ಟ್ ಟೌನ್‌ಶಿಪ್ (Bidadi Township) ಯೋಜನೆಗೆ ಸಂಬಂಧಿಸಿದಂತೆ ರೈತರ ಪ್ರತಿಭಟನೆ ಈಗ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಶಾಸಕರೊಂದಿಗೆ ನಡೆದ ಮಹತ್ವದ ಸಭೆಯ ಬಳಿಕ ಜಿಬಿಡಿಎ (GBDA) ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿರುವ ಯೋಜನೆ ವಿರೋಧಿ ರೈತರು, ಸರ್ಕಾರಕ್ಕೆ ನೇರ ಹಾಗೂ ಕಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

ಸಣ್ಣ ರೈತರು ಬೀದಿಗೆ, ಹೈನುಗಾರಿಕೆ ಸರ್ವನಾಶ!
ಸುದ್ದಿಗೋಷ್ಠಿಯಲ್ಲಿ ಜಿಬಿಡಿಎ ಕಚೇರಿಯಲ್ಲೇ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ರೈತ ಮುಖಂಡ ಪ್ರಕಾಶ್, "ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಬೇಕು ಎಂದು ನಾವು ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಈ ಯೋಜನೆಯಿಂದಾಗಿ ಈ ಭಾಗದ ಸಣ್ಣ ಸಣ್ಣ ರೈತರು ಸಂಪೂರ್ಣವಾಗಿ ಬೀದಿಗೆ ಬರಲಿದ್ದಾರೆ. ಅಷ್ಟೇ ಅಲ್ಲದೆ, ಇಲ್ಲಿನ ಜನರ ಪ್ರಮುಖ ಆದಾಯ ಮೂಲವಾಗಿರುವ ಹೈನುಗಾರಿಕೆ ಉದ್ಯಮಕ್ಕೆ ಭಾರಿ ತೊಂದರೆಯಾಗಲಿದೆ. ಈ ಎಲ್ಲಾ ನೈಜ ಸಮಸ್ಯೆಗಳನ್ನು ನಾವು ಶಾಸಕರ ಗಮನಕ್ಕೆ ತಂದಿದ್ದೇವೆ" ಎಂದು ವಿವರಿಸಿದರು.

ಸಿಎಂ ಭೇಟಿಗೆ ಶಾಸಕರ ಭರವಸೆ
ಯಾವುದೇ ಕಾರಣಕ್ಕೂ ಟೌನ್‌ಶಿಪ್ ಯೋಜನೆಗೆ ನಾವು ನಮ್ಮ ಹನಿ ಜಮೀನನ್ನೂ ಕೊಡುವುದಿಲ್ಲ ಎಂದು ರೈತರು ಶಾಸಕರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ. ರೈತರ ದೃಢ ನಿರ್ಧಾರವನ್ನು ಕಂಡ ಶಾಸಕರು, ಈ ವಿಷಯದ ಕುರಿತು ಮುಖ್ಯಮಂತ್ರಿಗಳ ಜೊತೆ ಖುದ್ದಾಗಿ ಚರ್ಚೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ರೈತ ಮುಖಂಡರಿಗೆ ಸಿಎಂ ಭೇಟಿಗೂ ಅವಕಾಶ ಮಾಡಿಕೊಡುವುದಾಗಿ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಪ್ರಕಾಶ್ ತಿಳಿಸಿದರು.

ಜುಲೈ 11ಕ್ಕೆ ಬಿಡದಿಯಲ್ಲಿ ರೈತರ ಮಹಾ ಸಮಾವೇಶ!
ಟೌನ್‌ಶಿಪ್ ವಿರೋಧಿ ಹೋರಾಟಕ್ಕೆ ಈಗ ದೊಡ್ಡ ಮಟ್ಟದ ಶಕ್ತಿ ಸಿಗುತ್ತಿದೆ. ನಾಳೆಯಿಂದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ರೈತರ ಈ ಹೋರಾಟಕ್ಕೆ ನೇರ ಬೆಂಬಲ ನೀಡಲಿದ್ದಾರೆ. ಇಷ್ಟೇ ಅಲ್ಲದೆ, ಜುಲೈ 11ರಂದು ರಾಜ್ಯದ 15ಕ್ಕೂ ಹೆಚ್ಚು ಜಿಲ್ಲೆಗಳಿಂದ ಸಾವಿರಾರು ರೈತರು ಬಿಡದಿಗೆ ಆಗಮಿಸಿ ಈ ಪ್ರತಿಭಟನೆಗೆ ಬೆಂಬಲ ಘೋಷಿಸಲಿದ್ದಾರೆ. ಈ ಮೂಲಕ ಬೃಹತ್ ಮಟ್ಟದ ಪ್ರತಿಭಟನೆಗೆ ಅನ್ನದಾತರು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಹೆದ್ದಾರಿ ತಡೆ, ಅಧಿಕಾರಿಗಳ ಮೇಲೆ ಹಲ್ಲೆಯಾದರೆ ಜಿಬಿಡಿಎ ಹೊಣೆ!
"ಸದ್ಯಕ್ಕೆ ನಮ್ಮ ಪ್ರತಿಭಟನೆ ಸಂಪೂರ್ಣ ಶಾಂತಿಯುತವಾಗಿ ನಡೆಯುತ್ತಿದೆ. ಒಂದು ವೇಳೆ ಸರ್ಕಾರ ಹಠಕ್ಕೆ ಬಿದ್ದು ಯೋಜನೆ ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲು ಸಹ ನಾವು ಚಿಂತನೆ ನಡೆಸುತ್ತಿದ್ದೇವೆ. ಇದರ ನಡುವೆಯೂ ಅಧಿಕಾರಿಗಳು ಬಲವಂತವಾಗಿ ಗ್ರಾಮಕ್ಕೆ ನುಗ್ಗಿದಾಗ ಆಕ್ರೋಶಗೊಂಡ ರೈತರು ಏನಾದರೂ ಹಲ್ಲೆ ಮಾಡಿದರೆ, ಅದಕ್ಕೆ ಜಿಬಿಡಿಎ (GBDA) ಸಂಸ್ಥೆಯೇ ನೇರ ಹೊಣೆಯಾಗಬೇಕಾಗುತ್ತದೆ" ಎಂದು ರೈತರು ಕಟುವಾಗಿ ಎಚ್ಚರಿಸಿದ್ದಾರೆ. ಕೂಡಲೇ ಈ ವಿವಾದಿತ ಯೋಜನೆಯನ್ನು ಕೈಬಿಡಬೇಕು ಎಂದು ಸರ್ಕಾರಕ್ಕೆ ಅನ್ನದಾತರು ಒಕ್ಕೊರಲಿನ ಆಗ್ರಹ ಮಂಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja