ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಹಗರಣದ ಕಾವು ತೀವ್ರಗೊಂಡ ಹಿನ್ನೆಲೆಯಲ್ಲಿ ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಬಿ. ನಾಗೇಂದ್ರ (B Nagendra) ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರವನ್ನು ಖಚಿತಪಡಿಸಿದರು.
ಇದರೊಂದಿಗೆ ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟದ ಮೊದಲ ವಿಕೆಟ್ ಇದೀಗ (Breaking) ಪತನಗೊಂಡಿದೆ. ರಾಜೀನಾಮೆ ವಿಚಾರ ಚರ್ಚಿಸಲು ಹೈಕಮಾಂಡ್ ನಾಯಕರನ್ನು ದೆಹಲಿಯಲ್ಲಿ ಭೇಟಿಯಾಗಿ ಬೆಂಗಳೂರಿಗೆ ಇಂದು ಮರಳಿದ ನಾಗೇಂದ್ರ ಅವರು ಸುದ್ದಿಯಗೋಷ್ಠಿಯಲ್ಲಿ ರಾಜೀನಾಮೆಯ ವಿಚಾರವನ್ನು ವಿವರಿಸಿದರು. ಪಕ್ಷಕ್ಕೆ ನನ್ನಿಂದ ಯಾವುದೇ ಮುಜುಗರ ಆಗಬಾರದು ಎಂದು ರಾಜೀನಾಮೆ ನೀಡಿದ್ದೇನೆ. ಆದರೆ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸದೇ ಸದನವನ್ನು ವಿಪಕ್ಷದವರು ಹಾಳು ಮಾಡಿದರು ಎಂದು ನಾಗೇಂದ್ರ ಟೀಕಿಸಿದರು. ಇನ್ನು, ನೈತಿಕವಾಗಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ ನಾಗೇಂದ್ರ, ಶೂದ್ರರು, ದಲಿತರು, ಮಹಿಳೆಯರು ಮುಖ್ಯವಾಗಿ ಆದಿವಾಸಿಗಳು ಸ್ವತಂತ್ರವಾಗಿ ಬದುಕಲೇಬಾರದು ಎಂಬ ಧೋರಣೆಯನ್ನು ಬಿಜೆಪಿಯ ಮನುಸ್ಮೃತಿವಾದಿಗಳು ಅನುಸರಿಸುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಾಗೇಂದ್ರ ಕಣ್ಣೀರು.. ಸದನದಲ್ಲಿ ನೋಟಿಸ್ ಕೊಡದೇ ಕೇವಲ ರಾಜೀನಾಮೆ ವಿಚಾರವನ್ನು ಪ್ರಸ್ತಾಪಿಸಿ ಸದನದ ಕಲಾಪವನ್ನು ಹಾಳು ಮಾಡಿರುವ ವಿಪಕ್ಷದವರು ಸಂವಿಧಾನದ ವಿರೋಧಿಗಳು. ಹಗರಣ ಆಗಿದೆ ಎಂದು ಸುಳ್ಳನ್ನು ಬಿತ್ತರಿಸಿದ ವಿಪಕ್ಷದವರ ನಡೆಯನ್ನು ರಾಜ್ಯದ ಜನ ಗಮನಿಸುತ್ತಿದ್ದಾರೆ. ವಾಲ್ಮೀಕಿ ಹಗರಣ ಆಗಿದೆ ಎಂದು ಪ್ರತಿಪಾದಿಸುತ್ತಾ, ಒಬ್ಬ ದಲಿತ ಮೇಲೆ ಬರಬಾರದು ಎಂದು ಮುಗ್ಧ ಜನರ ಬದುಕನ್ನು ಹಾಳು ಮಾಡುತ್ತಿದ್ದಾರೆ. ಕುತಂತ್ರ ರಾಜಕಾರಣದಿಂದ ನನ್ನನ್ನು ಜೈಲಿಗೆ ಕಳುಹಿಸಿದರು ಎಂದು ವಾಗ್ದಾಳಿ ನಡೆಸಿದರು. ಪ್ರಕರಣದಲ್ಲಿ ನನ್ನಿಂದ ಯಾವುದೇ ತಪ್ಪಾಗಿಲ್ಲ. ಸಂವಿಧಾನಕ್ಕೆ ಗೌರವಕೊಟ್ಟು, ಪಕ್ಷಕ್ಕೆ ಮುಜುಗರ ಆಗಬಾರದೆಂದು ಭಾವುಕರಾಗಿ ನಾಗೇಂದ್ರ ತಮ್ಮ ರಾಜೀನಾಮೆಯನ್ನು ಅಧಿಕೃತವಾಗಿ ಘೋಷಿಸಿದರು. ಇತ್ತೀಚೆಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಲಾಗಿತ್ತು. ಈ ಹಿಂದೆ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿದ್ದಾಗ ಇದೇ ವಾಲ್ಮೀಕಿ ಹಗರಣದ ಆರೋಪ ಕೇಳಿಬಂದಾಗ ನಾಗೇಂದ್ರ ಅವರು ರಾಜೀನಾಮೆ ನೀಡಿದ್ದರು. ಆದರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನೂತನ ಸಂಪುಟದಲ್ಲಿ ಅವರಿಗೆ ಮತ್ತೆ ಅವಕಾಶ ಕಲ್ಪಿಸಲಾಗಿತ್ತು. ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿದ್ದನ್ನು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆಕ್ಷೇಪಿಸಿದ್ದರು. ಸದನದ ಒಳಗೂ ಹೊರಗೂ ರಾಜ್ಯ ಸರ್ಕಾರದ ವಿರುದ್ಧ ಉಗ್ರ ಪ್ರತಿಭಟನೆ ನಡೆಸಿದ್ದ ವಿಪಕ್ಷಗಳು, ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿದ್ದವು. ನಾಗೇಂದ್ರ ಅವರ ರಾಜೀನಾಮೆ ಪಡೆಯುವವರೆಗೆ ಯಾವುದೇ ಅಧಿವೇಶನದ ಚರ್ಚೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಕಠಿಣ ನಿಲುವು ತಳೆದಿದ್ದವು. ಅಷ್ಟೇ ಅಲ್ಲದೆ, ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಬಳ್ಳಾರಿಯವರೆಗೆ ಬೃಹತ್ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದ್ದರು. ವಿಪಕ್ಷಗಳ ಈ ನಿರಂತರ ಹೋರಾಟ ಹಾಗೂ ರಾಜಕೀಯ ಒತ್ತಡಕ್ಕೆ ಮಣಿದ ಸಚಿವ ನಾಗೇಂದ್ರ, ಗುರುವಾರ ರಾತ್ರಿಯೇ ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸಿದ್ದರು. ನಾಗೇಂದ್ರ ತ್ಯಾಗಕ್ಕೆ ಸಿದ್ಧ ಎಂದಿದ್ದ ಸಿಎಂ ಈ ಕುರಿತು ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ನಾಗೇಂದ್ರ ಅವರು ಪಕ್ಷದ ನಿಷ್ಠಾವಂತ ಪಕ್ಷದ ಸಿಪಾಯಿ. ಪಕ್ಷ ಹಾಗೂ ಸರ್ಕಾರದ ಹಿತದೃಷ್ಟಿಗಾಗಿ, ಯಾವುದೇ ಮುಜುಗರ ತಪ್ಪಿಸಲು ತಾವು ತ್ಯಾಗಕ್ಕೆ ಸಿದ್ಧ ಎಂದು ನಾಗೇಂದ್ರ ತಿಳಿಸಿದ್ದಾರೆ" ಎಂದು ಹೇಳಿದ್ದರು. ವಿಪಕ್ಷಗಳ ಸತತ ವಾಗ್ದಾಳಿ ಹಾಗೂ ಬಳ್ಳಾರಿ ಪಾದಯಾತ್ರೆ ಪ್ರತಿಭಟನೆಯ ನಡುವೆ ಕೊನೆಗೂ ನಾಗೇಂದ್ರ ತಮ್ಮ ಸ್ಥಾನಕ್ಕೆ ಎರಡನೇ ಬಾರಿ ರಾಜೀನಾಮೆ ನೀಡಬೇಕಾಯಿತು.

