ಬೆಂಗಳೂರು : ಗಣಿ ಮತ್ತು ಭೂವಿಜ್ಞಾನ ಇಲಾಖೆಯ (Geological department ) ಪಾವತಿ ಅವ್ಯವಸ್ಥೆಯನ್ನು ಸರಿಪಡಿಸಿ, ಪ್ರಾಮಾಣಿಕ ಗಣಿ ಮಾಲೀಕರಿಗೆ (Mines owner) ಭದ್ರತೆ ಒದಗಿಸಬೇಕು ಎಂದು ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ ಮಾಲೀಕರ ಒಕ್ಕೂಟವು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಇಲಾಖೆಯು ಕ್ವಾರಿ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಅವೈಜ್ಞಾನಿಕ ಡ್ರೋನ್ ಸಮೀಕ್ಷೆ ನಡೆಸಿ ಭಾರಿ ಮೊತ್ತದ ದಂಡ ವಿಧಿಸುತ್ತಿರುವುದಕ್ಕೆ ಒಕ್ಕೂಟ ತೀವ್ರ ವಿರೋಧ ವ್ಯಕ್ತಪಡಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ರವೀಂದ್ರ ಶೆಟ್ಟಿ ಅವರು, ಇಲಾಖೆಯ ರಾಜಧನ ಪಾವತಿ ಗೊಂದಲಗಳಿಂದ ಗಣಿ ಗುತ್ತಿಗೆದಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ದೂರಿದ್ದಾರೆ. ಸರ್ಕಾರ ಒನ್ ಟೈಮ್ ಸೆಟಲ್‌ಮೆಂಟ್ (ಒಟಿಎಸ್) ಯೋಜನೆ ತಂದಿದೆಯಾದರೂ, ಅವೈಜ್ಞಾನಿಕ ಡ್ರೋನ್ ಸಮೀಕ್ಷೆ ಆಧಾರದ ಮೇಲೆ ಪ್ರತಿ ಗಣಿ ಮಾಲೀಕರಿಗೆ ಕನಿಷ್ಠ 50 ಲಕ್ಷ ರೂ.ನಿಂದ ಕೋಟ್ಯಂತರ ರೂಪಾಯಿವರೆಗೆ ವಿಭಿನ್ನ ಪ್ರಮಾಣದಲ್ಲಿ ದಂಡ ವಿಧಿಸುತ್ತಿರುವುದು ಅಸಾಧ್ಯದ ಸಂಗತಿಯಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಇದೇ ವೇಳೆ ಒಕ್ಕೂಟದ ಉಪಾಧ್ಯಕ್ಷ ಕಿರಣ್ ಜೈನ್ ಅವರು ಮಾತನಾಡಿ, ರಾಮನಗರದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಚೇರಿ ಎದುರು ಅಧಿಕಾರಿಗಳ ಕಿರುಕುಳ ತಾಳಲಾರದೆ ಲಾರಿ ಮಾಲೀಕ ನಾಗೇಶ್ ಎಂಬುವವರು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ ಎಂದು ವಿಷಾದಿಸಿದ್ದಾರೆ. ತಕ್ಷಣವೇ ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರವು 1 ಕೋಟಿ ರೂಪಾಯಿ ಪರಿಹಾರ ಘೋಷಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ನಡೆದ ಈ ಮಹತ್ವದ ಜಂಟಿ ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಮುಖ ಪದಾಧಿಕಾರಿಗಳಾದ ಕಾರ್ಯದರ್ಶಿ ರಾಜೇಂದ್ರ ಪ್ರಸಾದ್, ಬಸವರಾಜ್ ಮತ್ತು ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ಅಕ್ರಮ ಗಣಿಗಾರಿಕೆಗೆ ಕಠಿಣ ಕಡಿವಾಣ ಹಾಕಿ, ಪ್ರಾಮಾಣಿಕವಾಗಿ ಉದ್ಯಮ ನಡೆಸುವವರಿಗೆ ರಕ್ಷಣೆ ನೀಡದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.

