Dailyhunt Logo
  • Light mode
    Follow system
    Dark mode
    • Play Story
    • App Story
BIG NEWS: ಗೃಹ ಜ್ಯೋತಿ ಮನೆ-ಮನೆ ತಪಾಸಣೆ ಆರಂಭ, ಉಚಿತ ವಿದ್ಯುತ್ ಕೈತಪ್ಪುವ ಭೀತಿಯಲ್ಲಿ ಬಾಡಿಗೆದಾರರು!

BIG NEWS: ಗೃಹ ಜ್ಯೋತಿ ಮನೆ-ಮನೆ ತಪಾಸಣೆ ಆರಂಭ, ಉಚಿತ ವಿದ್ಯುತ್ ಕೈತಪ್ಪುವ ಭೀತಿಯಲ್ಲಿ ಬಾಡಿಗೆದಾರರು!

Navasamaja.com 1 week ago

ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ (Guareenty scheme) ಗೃಹ ಜ್ಯೋತಿಯ (Gruha Jyothi) ಫಲಾನುಭವಿಗಳಿಗೆ ಇಂಧನ ಇಲಾಖೆಯು (Power ministry) ಹೊಸದೊಂದು ಶಾಕ್ ನೀಡಿದೆ. ಪ್ರತಿ ತಿಂಗಳು 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಈ ಯೋಜನೆಯಲ್ಲಿ ದೊಡ್ಡ ಮಟ್ಟದ ಅಕ್ರಮ ಬಳಕೆ ನಡೆಯುತ್ತಿದೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, ಜುಲೈ 1ರಿಂದ ರಾಜ್ಯಾದ್ಯಂತ ಮನೆ-ಮನೆ ಪರಿಶೀಲನಾ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ವಾಣಿಜ್ಯ ಕಟ್ಟಡಗಳಲ್ಲಿ ವಾಸಿಸುವವರು ಸೇರಿದಂತೆ ಕೆಲ ಅನರ್ಹರು ನಿಯಮ ಉಲ್ಲಂಘಿಸಿ ಈ ಯೋಜನೆಯ ಲಾಭ ಪಡೆಯುತ್ತಿರುವುದನ್ನು ತಡೆಯಲು ಸರ್ಕಾರ ಈ ಕಠಿಣ ಕ್ರಮಕ್ಕೆ ಮುಂದಾಗಿದೆ. ಆದರೆ, ಸರ್ಕಾರದ ಈ ಹೊಸ ತಪಾಸಣಾ ನಿಯಮಗಳಿಂದಾಗಿ ರಾಜ್ಯದ ಸಾವಿರಾರು ಪ್ರಾಮಾಣಿಕ ಬಾಡಿಗೆದಾರರಲ್ಲಿ ಉಚಿತ ವಿದ್ಯುತ್ ಸೌಲಭ್ಯ ಎಲ್ಲಿ ಕೈತಪ್ಪಿ ಹೋಗುತ್ತದೆಯೋ ಎಂಬ ಆತಂಕ ಹೆಚ್ಚಾಗಿದೆ.

ಮನೆ ಮನೆಗೆ ಬರಲಿದ್ದಾರೆ ಅಧಿಕಾರಿಗಳು

ಈ ಪರಿಶೀಲನೆಯ ವೇಳೆ ಇಂಧನ ಇಲಾಖೆಯ ಅಧಿಕಾರಿಗಳು ಫಲಾನುಭವಿಗಳ ಮನೆಗೆ ಭೇಟಿ ನೀಡಿ ಅವರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಪ್ರಸ್ತುತ ಇರುವ ಬಾಡಿಗೆ ಒಪ್ಪಂದದ (ರೆಂಟ್ ಅಗ್ರಿಮೆಂಟ್) ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಈ ವೇಳೆ ಅಧಿಕಾರಿಗಳು ಕೇಳುವ ಅಗತ್ಯ ದಾಖಲೆಗಳನ್ನು ಒದಗಿಸಲು ವಿಫಲರಾದರೆ, ಗೃಹ ಜ್ಯೋತಿ ಯೋಜನೆಯಡಿ ಸದ್ಯ ದೊರೆಯುತ್ತಿರುವ ಉಚಿತ ವಿದ್ಯುತ್ ಸೌಲಭ್ಯವನ್ನು ತಕ್ಷಣವೇ ಸ್ಥಗಿತಗೊಳಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಸರ್ಕಾರದ ಈ ಬಿಗಿ ನಿಲುವು ಸಾರ್ವಜನಿಕರಲ್ಲಿ, ಅದರಲ್ಲೂ ಮುಖ್ಯವಾಗಿ ಜುಲೈ 2023ರ ನಂತರ ಹೊಸದಾಗಿ ಬಾಡಿಗೆ ಮನೆಗಳಿಗೆ ಸ್ಥಳಾಂತರಗೊಂಡಿರುವ ಜನರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಹಳೆ ಬಾಡಿಗೆದಾರರ ಲಿಂಕ್‌, ಹೊಸಬರಿಗೆ ಸಂಕಷ್ಟ

ಅನೇಕ ಬಾಡಿಗೆ ಮನೆಗಳಲ್ಲಿ ಹಿಂದಿನ ಬಾಡಿಗೆದಾರರು ಮನೆ ಖಾಲಿ ಮಾಡಿ ಹೋದ ಮೇಲೆಯೂ, ಆ ನಿರ್ದಿಷ್ಟ ವಿದ್ಯುತ್ ಸಂಪರ್ಕಕ್ಕೆ (ಆರ್‌ಆರ್ ಸಂಖ್ಯೆ) ಜೋಡಿಸಲಾಗಿದ್ದ ತಮ್ಮ ಆಧಾರ್ ವಿವರಗಳನ್ನು ರದ್ದುಪಡಿಸಿಲ್ಲ. ಇಂಧನ ಇಲಾಖೆಯ ನಿಯಮಗಳ ಪ್ರಕಾರ, ಹಳೆಯ ಫಲಾನುಭವಿಯ ನೋಂದಣಿ ರದ್ದಾಗದ ಹೊರತು ಅದೇ ವಿದ್ಯುತ್ ಮೀಟರ್‌ಗೆ ಹೊಸ ಫಲಾನುಭವಿಯ ನೋಂದಣಿ ಮಾಡಲು ಸಾಧ್ಯವಿಲ್ಲ. ಇದರಿಂದಾಗಿ ಹೊಸದಾಗಿ ಬಾಡಿಗೆಗೆ ಬಂದಿರುವ ಕುಟುಂಬಗಳು ಸೇವಾ ಸಿಂಧು ಪೋರ್ಟಲ್ ಮೂಲಕ ತಮ್ಮ ಆಧಾರ್ ಸಂಖ್ಯೆಯನ್ನು ಜೋಡಿಸಲು ಸಾಧ್ಯವಾಗದೆ ಯೋಜನೆಯ ಲಾಭದಿಂದ ವಂಚಿತರಾಗುತ್ತಿದ್ದಾರೆ. ಮನೆ ಬಿಟ್ಟು ಹೋಗಿರುವ ಹಳೆಯ ಬಾಡಿಗೆದಾರರನ್ನು ಹುಡುಕಿ ಅವರ ಆಧಾರ್ ಲಿಂಕ್ ತೆಗೆಸುವುದು ನಮಗೆ ಅಸಾಧ್ಯದ ಮಾತು, ಹಾಗಾಗಿ ಸರ್ಕಾರವೇ ಇದಕ್ಕೆ ಸೂಕ್ತ ತಾಂತ್ರಿಕ ಪರಿಹಾರ ನೀಡಬೇಕು ಎಂದು ಬಾಡಿಗೆದಾರರು ಒತ್ತಾಯಿಸುತ್ತಿದ್ದಾರೆ.

ಕುಟುಂಬದ ಹಿರಿಯ ಸದಸ್ಯರು ಮೃತಪಟ್ಟರೂ ಗೊಂದಲ

ಇಷ್ಟೇ ಅಲ್ಲದೆ, ಕುಟುಂಬದ ಹಿರಿಯ ಸದಸ್ಯರು ಮೃತಪಟ್ಟ ಬಳಿಕವೂ ಅವರ ಹೆಸರಿನಲ್ಲೇ ವಿದ್ಯುತ್ ಸಂಪರ್ಕ ಮುಂದುವರಿದಿರುವ ಮನೆಗಳಿಗೂ ಈಗ ಹೊಸ ಸಂಕಷ್ಟ ಎದುರಾಗಿದೆ. ಇಂತಹ ವಿದ್ಯುತ್ ಸಂಪರ್ಕಗಳ ಆರ್‌ಆರ್ ಸಂಖ್ಯೆಯನ್ನು ಮೃತರ ಕಾನೂನುಬದ್ಧ ವಾರಸುದಾರರ ಹೆಸರಿಗೆ ತಕ್ಷಣವೇ ವರ್ಗಾಯಿಸಬೇಕು, ಇಲ್ಲದಿದ್ದರೆ ಉಚಿತ ವಿದ್ಯುತ್ ಸೌಲಭ್ಯವನ್ನು ಸ್ಥಗಿತಗೊಳಿಸಲು ಇಂಧನ ಇಲಾಖೆ ತೀರ್ಮಾನಿಸಿದೆ. ಆದರೆ, ಸಾಮಾನ್ಯ ಜನರಿಗೆ ವಿದ್ಯುತ್ ಖಾತೆಯನ್ನು ಮೃತರ ಹೆಸರಿನಿಂದ ತಮ್ಮ ಹೆಸರಿಗೆ ವರ್ಗಾವಣೆ ಮಾಡುವ ಸರಿಯಾದ ವಿಧಾನವೇ ಗೊತ್ತಿಲ್ಲ. ಈ ಪ್ರಕ್ರಿಯೆಗಾಗಿ ಪದೇಪದೆ ವಿದ್ಯುತ್ ಕಚೇರಿಗಳಿಗೆ ಅಲೆಯಬೇಕಾಗಬಹುದು ಎಂಬ ಭೀತಿ ಜನರಲ್ಲಿದೆ. ಸರ್ಕಾರ ಅಕ್ರಮ ತಡೆಯಲು ಈ ತಪಾಸಣೆ ನಡೆಸುತ್ತಿರುವುದು ಸರಿಯಾಗಿದ್ದರೂ, ಹೊಸ ನಿಯಮಗಳಿಂದಾಗಿ ನೈಜ ಫಲಾನುಭವಿಗಳಿಗೆ ತೊಂದರೆಯಾಗುತ್ತಿರುವುದರಿಂದ ಸರ್ಕಾರ ತಕ್ಷಣವೇ ಸರಳ ಮಾರ್ಗಸೂಚಿಗಳನ್ನು ಪ್ರಕಟಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja