Dailyhunt Logo
  • Light mode
    Follow system
    Dark mode
    • Play Story
    • App Story
BIG NEWS: ಗೃಹಜ್ಯೋತಿ ಯೋಜನೆ ಪರಿಶೀಲನೆಗೆ ನಿರಾಕರಿಸಿದ್ರೆ ಕಾದಿದೆ ಕಠಿಣ ಕ್ರಮ!

BIG NEWS: ಗೃಹಜ್ಯೋತಿ ಯೋಜನೆ ಪರಿಶೀಲನೆಗೆ ನಿರಾಕರಿಸಿದ್ರೆ ಕಾದಿದೆ ಕಠಿಣ ಕ್ರಮ!

Navasamaja.com 1 week ago

ಬೆಂಗಳೂರು: ರಾಜ್ಯ ಸರ್ಕಾರ (Karnataka Government) ಜಾರಿಗೆ ತಂದಿರುವ ಜನಪ್ರಿಯ ಗ್ಯಾರಂಟಿ ಯೋಜನೆಗಳಾದ 'ಗೃಹಲಕ್ಷ್ಮಿ' (Gruha Lakshmi) ಹಾಗೂ 'ಗೃಹಜ್ಯೋತಿ' (Gruha Jyoti) ಯೋಜನೆಗಳ ಅನರ್ಹ ಫಲಾನುಭವಿಗಳಿಗೆ ಕತ್ತರಿ ಹಾಕಲು ಸರ್ಕಾರ (Big News) ಕಟ್ಟುನಿಟ್ಟಿನ ಪರಿಶೀಲನೆ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಜುಲೈ 1 ರಿಂದಲೇ ಗೃಹಜ್ಯೋತಿ ಮರುಪರಿಶೀಲನೆ ಕಾರ್ಯ ಶುರುವಾಗಿದ್ದು, ಆಗಸ್ಟ್ 31ರ ಒಳಗೆ ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮುಗಿಸಲು ಸರ್ಕಾರ ಡೆಡ್‌ಲೈನ್ ವಿಧಿಸಿದೆ. ಆದರೆ, ಬೆಂಗಳೂರು ನಗರದ ಹಲವು ಭಾಗಗಳಲ್ಲಿ ಈ ತಪಾಸಣೆ ಪ್ರಕ್ರಿಯೆ ಭಾರಿ ಹಿನ್ನಡೆ ಅನುಭವಿಸುತ್ತಿದ್ದು, ಕುಂಟುತ್ತಾ ಸಾಗಿದೆ.

ಮೀಟರ್ ರೀಡರ್‌ಗಳಿಗೆ ಅಪಾರ್ಟ್‌ಮೆಂಟ್ ನಿವಾಸಿಗಳ ಸವಾಲು:
ಬೆಸ್ಕಾಂ ವ್ಯಾಪ್ತಿಯಲ್ಲಿ ಇದುವರೆಗೆ ಶೇಕಡಾ 60ರಷ್ಟು ಮಾತ್ರ ಮರುಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ. ವಿಶೇಷವಾಗಿ ರಾಜಧಾನಿಯ ಪ್ರಮುಖ ಅಪಾರ್ಟ್‌ಮೆಂಟ್ ಹಾಗೂ ಐಷಾರಾಮಿ ನಿವಾಸಿಗಳು ಬೆಸ್ಕಾಂ ಸಿಬ್ಬಂದಿಗೆ ಸಹಕರಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಮೀಟರ್ ರೀಡರ್‌ಗಳು ಹಾಗೂ ಪರಿಶೀಲನಾ ಸಿಬ್ಬಂದಿಗೆ ಅಪಾರ್ಟ್‌ಮೆಂಟ್ ಆವರಣದೊಳಗೆ ಪ್ರವೇಶಿಸಲು ಅನುಮತಿ ನೀಡದಿರುವುದು ಮತ್ತು ಕೇಳಿದ ದಾಖಲೆಗಳನ್ನು ನೀಡಲು ನಿರಾಕರಿಸುತ್ತಿರುವುದು ಬೆಸ್ಕಾಂಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪರಿಶೀಲನೆಗೆ ತೆರಳುವ ಸಿಬ್ಬಂದಿ ಎರಡೆರಡು ಬಾರಿ ಅಲೆದಾಡಿ ಬರೀ ಕೈಯಲ್ಲಿ ವಾಪಸ್ ಆಗುತ್ತಿದ್ದಾರೆ.

ದಾಖಲೆ ನೀಡದ ಮನೆಗಳಿಗೆ 'ಸ್ಥಳ ಮಹಜರ್' ಅಸ್ತ್ರ:
ಮರುಪರಿಶೀಲನೆಗೆ ಸಹಕರಿಸದ ಮತ್ತು ದಾಖಲೆಗಳನ್ನು ಒದಗಿಸಲು ಹಿಂಜರಿಯುವ ಅಪಾರ್ಟ್‌ಮೆಂಟ್ ನಿವಾಸಿಗಳು ಹಾಗೂ ದೊಡ್ಡ ಮನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬೆಸ್ಕಾಂ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಅಂತಹ ಮನೆಗಳಿಗೆ ಬೆಸ್ಕಾಂ ಹಿರಿಯ ಅಧಿಕಾರಿಗಳ ತಂಡವೇ ನೇರವಾಗಿ ಭೇಟಿ ನೀಡಿ 'ಸ್ಥಳ ಮಹಜರ್' ನಡೆಸಿ, ಬಾಗಿಲಿಗೆ ನೋಟಿಸ್ ಅಂಟಿಸಲು ಮುಂದಾಗಿದೆ. ಈ ಮೂಲಕ ಯೋಜನೆಗೆ ಅರ್ಹರೇ ಅಥವಾ ಅನರ್ಹರೇ ಎಂಬುದನ್ನು ಅಧಿಕೃತವಾಗಿ ಖಚಿತಪಡಿಸಿಕೊಳ್ಳಲು ನಿರ್ಧರಿಸಲಾಗಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ಶೇ. 50ರಷ್ಟು ಕಾರ್ಯಷ್ಟೇ ಪೂರ್ಣ:
ಬೆಸ್ಕಾಂ ವ್ಯಾಪ್ತಿಯಲ್ಲಿ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳು ಸೇರಿ ಒಟ್ಟು 68.86 ಲಕ್ಷ ಗೃಹಜ್ಯೋತಿ ಫಲಾನುಭವಿಗಳಿದ್ದಾರೆ. ಜುಲೈ ಕೊನೆಯ ವಾರದವರೆಗಿನ ವರದಿಯಂತೆ ಕೇವಲ ಶೇಕಡಾ 50ರಷ್ಟು ಫಲಾನುಭವಿಗಳ ದಾಖಲೆಗಳ ಪರಿಶೀಲನೆ ಮಾತ್ರ ಪೂರ್ಣಗೊಂಡಿತ್ತು. ಬಾಕಿ ಇರುವ ಅರ್ಧದಷ್ಟು ಕೆಲಸವನ್ನು ನಿಗದಿತ ಆಗಸ್ಟ್ 31ರೊಳಗೆ ಮುಗಿಸಲು ಬೆಸ್ಕಾಂ ಕಸರತ್ತು ನಡೆಸುತ್ತಿದೆಯಾದರೂ, ಸಾರ್ವಜನಿಕರ ಅಸಹಕಾರದಿಂದ ಪ್ರಕ್ರಿಯೆ ಮಂದಗತಿಯಲ್ಲಿದೆ.

ಗೃಹಜ್ಯೋತಿ ಯೋಜನೆಯ ಸೌಲಭ್ಯವನ್ನು ಮುಂದುವರಿಸಲು ಅಥವಾ ಮರುಪರಿಶೀಲನೆ ವೇಳೆ ಫಲಾನುಭವಿಗಳು ತಮ್ಮ ಗುರುತಿನ ಚೀಟಿ, ಮತದಾರರ ಗುರುತಿನ ಚೀಟಿ, ರೇಷನ್ ಕಾರ್ಡ್, ಪಾನ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಫೋಟೋ ಹಾಗೂ ಜಾತಿ ಪ್ರಮಾಣ ಪತ್ರವನ್ನು ಒದಗಿಸಬೇಕಾಗಿದೆ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರು ಪ್ರಸ್ತುತ ಚಾಲ್ತಿಯಲ್ಲಿರುವ ಬಾಡಿಗೆ ಒಪ್ಪಂದದ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja